ADVERTISEMENT

ಜನರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳು: ಸಚಿವ ಬಿ.ಸಿ.ಪಾಟೀಲ ಗರಂ

ಕೆಡಿಪಿ ಸಭೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2021, 4:12 IST
Last Updated 18 ಏಪ್ರಿಲ್ 2021, 4:12 IST
ಕೊಪ್ಪಳ ಮೆಡಿಕಲ್ ಕಾಲೇಜಿನಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮಾತನಾಡಿದರು
ಕೊಪ್ಪಳ ಮೆಡಿಕಲ್ ಕಾಲೇಜಿನಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮಾತನಾಡಿದರು   

ಕೊಪ್ಪಳ:ಜನರ ಸಂಕಷ್ಟಗಳಿಗೆ ಸ್ಪಂದಿಸುವುದನ್ನು ಬಿಟ್ಟು ಜಿಲ್ಲಾ ಮಟ್ಟದ ಅಧಿಕಾರಿಗಳು ವಾರದಲ್ಲಿ ಎರಡು ದಿನಗಳು ಮಾತ್ರ ಕಚೇರಿಯಲ್ಲಿದ್ದು, ಇನ್ನುಳಿದ ದಿನ ಊರಿಗೆ ಹೋಗಿ ಬಡ್ಡಿ ವ್ಯವಹಾರ ಮಾಡುತ್ತಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕಿಮ್ಸ್) ಸಭಾಂಗಣದಲ್ಲಿ ಶನಿವಾರ ನಡೆದ 2020-21ನೇ ಸಾಲಿನ 4ನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಹಿಂದಿನ ಸಭೆಯಲ್ಲಿಯೂ ಸಭೆಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಜಿ.ಪಂ. ಸಿಇಒ ಎಚ್ಚರಿಕೆ ನೀಡಿದ್ದರೂ ಸಹ ಸಭೆಗೆ ಪ್ರಗತಿ ವರದಿ ಒಪ್ಪಿಸುವಲ್ಲಿ ತಡಬಡಾಯಿಸಿದರು. ಅವರ ವಿರುದ್ಧ ಶಿಸ್ತುಕ್ರಮಕ್ಕೆ ಸಚಿವರು ಸೂಚನೆ ನೀಡಿದರು.

ADVERTISEMENT

ಸಚಿವರು ಇಲಾಖಾವಾರು ಚರ್ಚೆ ವೇಳೆ ಅಧಿಕಾರಿಗಳ ವಿರುದ್ಧ ಗರಂ ಆದರು. ‘ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕು. ಇನ್ನು ಮುಂದೆ ಎಲ್ಲ ಕಚೇರಿಗಳಲ್ಲಿ ಬಯೋಮೆಟ್ರಿಕ್ ಅಳವಡಿಸಿದರೆ ಹಾಜರಾತಿ ತಿಳಿಯುತ್ತದೆ. ಇನ್ನು ಅಧಿಕಾರಿಗಳ ಬೇಜವಾಬ್ದಾರಿತನವನ್ನು ಸಹಿಸಲು ಸಾಧ್ಯವಿಲ್ಲ. ಸಭೆಗೆ ಸಮರ್ಪಕ ಉತ್ತರವನ್ನು ನೀಡಬೇಕು’ ಎಂದುಸೂಚನೆ ನೀಡಿದರು.

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ (ಭೂ ಸೇನಾ ನಿಗಮ) ನಡೆದ ಕಾಮಗಾರಿಗಳಲ್ಲಿ ಸುಮಾರು ₹63 ಕೋಟಿ ಅವ್ಯವಹಾರ ಆಗಿದೆ. ನಿಗಮದ ಅಧಿಕಾರಿಗಳೇ ದೂರು ನೀಡಿದ್ದಾರೆ. ತನಿಖೆ ವೇಳೆ ಭ್ರಷ್ಟಾಚಾರ ನಡೆದಿರುವುದು ಕಂಡುಬಂದಿದೆ ಎಂದು ಶಾಸಕ ಹಾಲಪ್ಪ ಆಚಾರ ದೂರಿದರು. ಕೆ.ಆರ್.ಡಿ.ಇ.ಎಲ್‌ನ ಅಧಿಕಾರಿಗಳು ಅನುದಾನ ಬಂದಾಗ ಮಾತ್ರ ಕಾಮಗಾರಿ ನಡೆಸಿ, ಬಳಿಕ ಅರ್ಧಕ್ಕೆ ನಿಲ್ಲಿಸುವುದನ್ನು ರೂಢಿಸಿಕೊಂಡಿದ್ದು, ಇದರಿಂದ ಕಾಮಗಾರಿಗಳು ಅಪೂರ್ಣವಾಗುತ್ತಿದ್ದು, ಅನುಮೋದಿತ ಕಾಮಗಾರಿಗಳನ್ನು ನಿಗದಿ ಕಾಲವಾಧಿಯೊಳಗೆ ಪೂರ್ಣಗೊಳಿಸಲು ಸಚಿವರು ಸೂಚಿಸಿದರು.

ಇನ್ನಿತರ ಇಲಾಖೆಗಳ ಮೇಲೆ ನಡೆದ ಪ್ರಗತಿ ಪರಿಶೀಲನೆ ವೇಳೆ ಶಾಸಕರಾದ ಹಾಲಪ್ಪ ಆಚಾರ, ಅಮರೇಗೌಡ ಬಯ್ಯಾಪುರ, ರಾಘವೇಂದ್ರ ಹಿಟ್ನಾಳ ಇತರರು ತಮ್ಮ ಕ್ಷೇತ್ರಗಳಲ್ಲಿನ ಸಮಸ್ಯೆಗಳು ಹಾಗೂ ಅವುಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಸಭೆಯ ಗಮನಕ್ಕೆ ತಂದು ಚರ್ಚಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ, ಶಾಸಕರಾದ ಪರಣ್ಣ ಮುನವಳ್ಳಿ,ಹಾಲಪ್ಪ ಆಚಾರ್, ಉಪಾಧ್ಯಕ್ಷೆ ಬಿನಾಗೌಸ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್, ಸಿಇಒರಘುನಂದನ್ ಮೂರ್ತಿ,ಎಸ್‌ಪಿ ಟಿ.ಶ್ರೀಧರ್,ಹೆಚ್ಚುವರಿಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಕೆ.ಡಿ.ಪಿ ಸದಸ್ಯ ಅಮರೇಶ ಕರಡಿ, ಮಹಾವೀರ ಮೆಹ್ತಾ, ಜಿ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷ ಅಮರೇಶ ಗೋನಾಳ ಹಾಗೂ ಭಾಗ್ಯವತಿ ಮಾಣಿಕ್ ಬೋಲಾ, ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಉಪಕಾರ್ಯದರ್ಶಿ ಶರಣಬಸವರಾಜ, ಯೋಜನಾ ನಿರ್ದೇಶಕ ಟಿ. ಕೃಷ್ಣಮೂರ್ತಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.