ಅಳವಂಡಿ: ಸಮೀಪದ ಹಟ್ಟಿ ಹಾಗೂ ಹೈದರನಗರ ಗ್ರಾಮದ ನಡುವಿನ ರಸ್ತೆಯ ಮಧ್ಯೆ ಬುಧವಾರ ಬೆಳಿಗ್ಗೆ ಚಾಲಕನ ನಿಯಂತ್ರಣ ತಪ್ಪಿ ಕೆಕೆಆರ್‌ಟಿಸಿ ಬಸ್‌ವೊಂದು ಪಲ್ಟಿಯಾಗಿ 40 ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.
ಕೇಸಲಾಪುರದಿಂದ ಹೈದರನಗರ, ಹಟ್ಟಿ ಮಾರ್ಗವಾಗಿ ಅಳವಂಡಿಗೆ ತೆರಳುವ ಬಸ್‌ನಲ್ಲಿ ಸುಮಾರು 70ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಶಾಲಾ ವಿದ್ಯಾರ್ಥಿಗಳೇ ಹೆಚ್ಚಾಗಿ ಬಸ್‌ನಲ್ಲಿ ಇದ್ದರು.
ರಸ್ತೆಯ ಬದಿಯ ಕಾಲುವೆಗೆ ಬಸ್ ಪಲ್ಟಿಯಾಗಿದ್ದು, ಬಸ್‌ನಲ್ಲಿದ್ದ ವಿದ್ಯಾರ್ಥಿಗಳು ಕೂಡಲೇ ತಮ್ಮ ಪಾಲಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರು ಬಂದು ವಿದ್ಯಾರ್ಥಿಗಳನ್ನು ಬಸ್‌ನಿಂದ ಹೊರತೆಗೆದು, ಗಾಯಗೊಂಡ ವಿದ್ಯಾರ್ಥಿಗಳನ್ನು ಆಂಬುಲೆನ್ಸ್ ಹಾಗೂ ಖಾಸಗಿ ವಾಹನದ ಮೂಲಕ ಗದಗ ಜಿಲ್ಲೆಯ ಮುಂಡರಗಿ ನಗರ ಸರ್ಕಾರಿ ಆಸ್ಪತ್ರೆ ಹಾಗೂ ಅಳವಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ.
ಮುಂಡರಗಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದವರ ಪೈಕಿ ಹೆಚ್ಚಿನ ಚಿಕಿತ್ಸೆಗಾಗಿ ಐವರು ವಿದ್ಯಾರ್ಥಿಗಳನ್ನು ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲ ವಿದ್ಯಾರ್ಥಿಗಳನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದು, ಗಾಯಗೊಂಡವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಕೊಪ್ಪಳ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ, ತಹಶೀಲ್ದಾರ್ ವಿಠಲ್ ಚೌಗಲಾ, ತಾಲ್ಲೂಕು ಪಂಚಾಯಿತಿ ಇಒ ದುಂಡಪ್ಪ ತುರಾದಿ, ವಿಭಾಗೀಯ ತಾಂತ್ರಿಕ ಶಿಲ್ಪಿ, ಭಧ್ರತಾ ಮತ್ತು ಜಾಗೃತಿ ಅಧಿಕಾರಿ ಶ್ರೀದೇವಿ, ಡಿಪೊ ಘಟಕ ವ್ಯವಸ್ಥಾಪಕ ರಮೇಶ ಚಿಣಗಿ, ಬಸ್ ನಿಲ್ದಾಣ ಅಧಿಕಾರಿ ಮಂಜುನಾಥ್ ಬಂಡಿ, ಪಿಎಸ್ಐ ಪ್ರಹ್ಲಾದ್ ನಾಯಕ, ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ ಸೇರಿದಂತೆ ಅಧಿಕಾರಿಗಳು ಭೇಟಿ ವಿದ್ಯಾರ್ಥಿಗಳ ಆರೋಗ್ಯ ಕ್ಷೇಮ ವಿಚಾರಣೆ ಮಾಡಿದರು.
‘ಹಟ್ಟಿ ಹಾಗೂ ಹೈದರನಗರ ಗ್ರಾಮದ ರಸ್ತೆಯ ಕಾಮಗಾರಿ ಪ್ರಾರಂಭವಾಗಿದ್ದು, ರಸ್ತೆಯನ್ನು ಅಪೂರ್ಣ ಅಗೆಯಲಾಗಿದೆ. ಇದರಿಂದ ಕೂಡ ರಸ್ತೆ ತೆಗ್ಗು ಗುಂಡಿಗಳಿಂದ ಕೂಡಿದೆ. ರಸ್ತೆಯ ಬದಿಯಲ್ಲಿ ಮಣ್ಣು ಹಾಕಲಾಗಿದೆ. ಕಾರಣ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಜನಪ್ರತಿನಿಧಿಗಳು ರಸ್ತೆ ಅಭಿವೃದ್ಧಿ ಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಮತ್ತು ಕೆಕೆಆರ್‌ಟಿಸಿ ಬಸ್‌ಗಳು ಕೂಡ ಸರಿಯಾಗಿ ಇರುವುದಿಲ್ಲ. ಚೆನ್ನಾಗಿರುವ ಬಸ್ ಓಡಿಸಬೇಕು’ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ, ಬಸ್‌ನ ಯಾವುದೇ ಬಿಡಿಭಾಗ ತುಂಡಾಗಿಲ್ಲ. ಹಾಗಾಗಿ ಬಸ್ ತಪಾಸಣೆಯನ್ನು ಸಿಬ್ಬಂದಿ ಮಾಡುತ್ತಿದ್ದಾರೆ. ತಪಾಸಣೆ ಬಳಿಕ ಅಪಘಾತಕ್ಕೆ ಕಾರಣ ಏನೆಂಬುದು ತಿಳಿದು ಬರಲಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.