ಅಳವಂಡಿ (ಕೊಪ್ಪಳ ಜಿಲ್ಲೆ): ನವದೆಹಲಿಯಲ್ಲಿ ಜ. 26ರಂದು ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಪ್ಪಳ ತಾಲ್ಲೂಕಿನ ಕೋಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಗಾಳೆಪ್ಪ ಪೂಜಾರ ಅವರಿಗೆ ಆಹ್ವಾನ ಲಭಿಸಿದೆ.
ಕೋಳೂರು ಗ್ರಾಮ ಪಂಚಾಯಿತಿಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ ಮಿಷನ್ ಯೋಜನೆಯಡಿ ಗ್ರಾಮದ ಪ್ರತಿ ಮನೆಗೆ ನಳ ಹಾಗೂ ಮೀಟರ್ ಅಳವಡಿಸಿದೆ. 24X7 ನೀರು ಪೂರೈಕೆ ಸೌಲಭ್ಯ ಹೊಂದಿರುವ ಜಿಲ್ಲೆಯ ಮೊದಲ ಹಾಗೂ ರಾಜ್ಯದ ಮೂರನೇ ಗ್ರಾಮ ಪಂಚಾಯಿತಿ ಎನ್ನುವ ಹೆಗ್ಗಳಿಕೆ ಹೊಂದಿದೆ.
ಗ್ರಾಮದಲ್ಲಿ 1 ಲಕ್ಷ 50 ಸಾವಿರ ಲೀಟರ್ ಸಾಮರ್ಥ್ಯದ ಎರಡು ಓವರ್ ಹೆಡ್ ಟ್ಯಾಂಕ್ ಇದ್ದು, ಪ್ರತಿದಿನ ಎರಡು ಬಾರಿ ತುಂಬಿಸಿ, ಇಲ್ಲಿಯ ಜನರಿಗೆ ನೀರು ಸರಬರಾಜು ಮಾಡಲಾಗುತ್ತಿದೆ.
'ನಮ್ಮ ಅಧಿಕಾರಿಗಳ ಹಾಗೂ ಗ್ರಾ.ಪಂ ಸದಸ್ಯರ ಪರಿಶ್ರಮದಿಂದ ಜೆಜೆಎಂ ಯೋಜನೆ ಯಶಸ್ವಿಯಾಗಿ ಪ್ರತಿನಿತ್ಯ 24 ಗಂಟೆಗಳ ಕಾಲ ಸಮರ್ಪಕವಾಗಿ ನೀರು ದೊರೆಯುತ್ತಿದೆ. ಈ ಅಭಿವೃದ್ಧಿ ಕಾರಣಕ್ಕೆ ಕೇಂದ್ರದಿಂದ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದು ಖುಷಿ ತಂದಿದೆ. ಪಂಚಾಯಿತಿಯ ಅಭಿವೃದ್ಧಿಗೆ ಇನ್ನಷ್ಟು ಶ್ರಮಿಸುವೆ’ ಎಂದು ಶಿವಮ್ಮ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.