
ಕೊಪ್ಪಳ: ಜಿಲ್ಲಾಕೇಂದ್ರದಿಂದ ಸ್ವಲ್ಪವೇ ದೂರದಲ್ಲಿ ತುಂಗಭದ್ರಾ ನದಿ ಸಮೃದ್ದವಾಗಿ ಹರಿಯುತ್ತಿದೆ. ಆ ನೀರು ಬಳಸಿಕೊಂಡು ಕೊಪ್ಪಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಹಾಗೂ ಕೃಷಿ ಭೂಮಿ ನೀರಾವರಿಯನ್ನಾಗಿಸುವ ಪ್ರಯತ್ನಗಳು ಕಳೆದ ಎರಡು ದಶಕಗಳಿಂದ ಪೂರ್ಣಪ್ರಮಾಣದಲ್ಲಿ ನಡೆದಿಲ್ಲ.
ಈ ಹಿಂದಿನ ಎರಡು ದಶಕಗಳ ಅವಧಿಯಲ್ಲಿ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಅಧಿಕಾರದಲ್ಲಿ ಇದ್ದೇ ಹನ್ನೆರೆಡೂವರೆ ವರ್ಷಗಳು ಪೂರ್ಣಗೊಂಡಿವೆ. ತಮ್ಮ ಭಾಷಣದಲ್ಲಿ ಸದಾ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡುವುದಾಗಿ ಹೇಳುವ ಶಾಸಕರು ಹಿಂದಿನ ಶಾಸಕರುಗಳು ಹಾಗೂ ಸರ್ಕಾರಗಳು ಬಾಕಿ ಉಳಿಸಿಕೊಂಡೇ ಬಂದಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಬೇಕಾದಷ್ಟು ಅನುದಾನ ತಂದಿಲ್ಲ ಎಂದು ಜನ ಬೇಸರದಿಂದಲೇ ಹೇಳುತ್ತಾರೆ.
ಸಿಂಗಟಾಲೂರು ನೀರಾವರಿ ಯೋಜನೆ ಲೋಕಾರ್ಪಣೆಯಾಗಿ 15 ವರ್ಷಗಳಾದರೂ ಕೃಷಿಭೂಮಿಗೆ ನೀರು ಹರಿದು ಬಂದಿಲ್ಲ. ಅಳವಂಡಿ–ಬೆಟಗೇರಿ, ಕಲಿಕೇರಿ–ನವಲಕಲ್ ಏತ ನೀರಾವರಿ ಯೋಜನೆ ಅನುಷ್ಠಾನವಾಗಿಲ್ಲ.
ಜಿಲ್ಲೆಯಲ್ಲಿ ಸಾಕಷ್ಟು ಬೃಹತ್ ಕಾರ್ಖಾನೆಗಳು ಇದ್ದು ಮಾಸಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತವೆ. ತೋಟಗಾರಿಕಾ ಕ್ಷೇತ್ರದ ವ್ಯಾಪ್ತಿ ಕ್ರಮೇಣ ಹೆಚ್ಚಾಗುತ್ತಿದ್ದು ಇಲ್ಲಿನ ರೈತರು ಬೆಳೆದ ಹಣ್ಣುಗಳನ್ನು ವಿದೇಶಕ್ಕೆ ರಫ್ತು ಮಾಡಬೇಕಾಗುತ್ತದೆ. ನೆರೆ ಜಿಲ್ಲೆಯಲ್ಲಿ ವಿಶ್ವವಿಖ್ಯಾತ ಹಂಪಿ, ಕೊಪ್ಪಳ ಜಿಲ್ಲೆಯಲ್ಲಿ ಅಂಜನಾದ್ರಿ, ಸಾಣಾಪುರ, ಆನೆಗೊಂದಿ, ಕಿನ್ನಾಳಕಲೆ, ಜಿಲ್ಲಾಕೇಂದ್ರದಲ್ಲಿ ಕೂದಲೋದ್ಯಮ ಹೀಗೆ ಅನೇಕ ವಿಶೇಷತೆಗಳು ಇವೆ. ವ್ಯಾಪಾರ ವಹಿವಾಟಿನ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಬೆಳೆಯಲು ಜಿಲ್ಲಾಕೇಂದ್ರದಲ್ಲಿ ವಿಮಾನ ನಿಲ್ದಾಣ ಆಗಬೇಕಾಗಿದೆ.
ಇದಕ್ಕಾಗಿ ಎರಡು ವರ್ಷಗಳ ಹಿಂದೆ ಅಧಿಕಾರಿಗಳ ತಂಡ ಪೂರ್ವ ಪ್ರಾಥಮಿಕವಾಗಿ ಜಾಗ ಪರಿಶೀಲಿಸಿದೆ. ಬಳಿಕ ಯಾವ ಬೆಳವಣಿಗೆ ಆಗಿಲ್ಲ. ಹೀಗಾಗಿ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಕಾರ್ಯರೂಪಕ್ಕೆ ಬರಬೇಕಿದೆ. ಉನ್ನತ ಶಿಕ್ಷಣ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಕೊಪ್ಪಳ ವಿಶ್ವವಿದ್ಯಾಲಯ ಆರಂಭವಾಗಿ ಮೂರು ವರ್ಷಗಳಾಗಿದ್ದರೂ ಕಿಂಚಿತ್ತೂ ಅಭಿವೃದ್ಧಿ ಕಂಡಿಲ್ಲ. ಸದ್ಯ ತಳಕಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ವಿ.ವಿ.ಯನ್ನು ಕೊಪ್ಪಳಕ್ಕೆ ಸ್ಥಳಾಂತರಿಸಬೇಕು ಎನ್ನುವ ಬೇಡಿಕೆ ಈಡೇರಿಲ್ಲ. ಅಪಾರ ಪ್ರಮಾಣದ ರೋಗಿಗಳಿಗೆ ಅನುಕೂಲವಾಗಲು ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್) ಕಟ್ಟಡ ಪೂರ್ಣಗೊಂಡರೂ ಅಲ್ಲಿ ಆಸ್ಪತ್ರೆ ಸ್ಥಳಾಂತರವಾಗಿಲ್ಲ.
ಶಕ್ತಿ ದೇವತೆ ಎಂದೇ ಹೆಸರಾದ ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಒಂದು ದಿನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನಗಳಂದು ವಿಪರೀತ ಜನಸಂದಣಿ ಇರುವ ಹುಲಿಗಿಯಲ್ಲಿ ಭಕ್ತರಿಗೆ ಮೂಲ ಸೌಕರ್ಯಗಳ ಕೊರತೆಯಿದೆ. ಭಕ್ತರು ನೀಡಿದ ಭಕ್ತಿಯ ಕಾಣಿಕೆ ಮೊತ್ತವೇ ಈಗ ₹70 ಕೋಟಿ ದಾಟಿದೆ. ಅಪಾರ ಪ್ರಮಾಣದಲ್ಲಿ ಚಿನ್ನಾಭರಣವಿದೆ. ಇರುವ ಅನುದಾನ ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಕ್ರಮ ವಹಿಸಬೇಕಿದೆ.
ಹುಲಿಗೆಮ್ಮ ದೇವಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ಕೊಪ್ಪಳದಲ್ಲಿ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆ ಆರಂಭಿಸಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ. ಬಾಕಿ ಉಳಿದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು.- ರಾಘವೇಂದ್ರ ಹಿಟ್ನಾಳ, ಶಾಸಕ
ಎಲ್ಲರ ಆಶಯದಂತೆ ಕೊಪ್ಪಳ ವಿಶ್ವವಿದ್ಯಾಲಯವನ್ನು ಜಿಲ್ಲಾಕೇಂದ್ರಕ್ಕೆ ಸ್ಥಳಾಂತರಿಸಿ ಬಲವರ್ಧನೆಗೆ ಕ್ರಮ ವಹಿಸಬೇಕು. ಶಾಲೆಗಳ ವಿಂಗಡನೆ ಹಾಗೂ ಪದವಿ ಕಾಲೇಜುಗಳಿಗೆ ಸ್ವಂತ ಕಟ್ಟಡ ಒದಗಿಸಲು ಬಜೆಟ್ ನಲ್ಲಿ ಆದ್ಯತೆ ನೀಡಬೇಕು.- ಗಂಗರಾಜ ಅಳ್ಳಳ್ಳಿ, ಎಐಡಿಎಸ್ಒ ಸಂಘಟನೆ ಜಿಲ್ಲಾ ಸಂಚಾಲಕ
ನಮ್ಮದು ಬರಗಾಲ ಪ್ರದೇಶ
ಒಂದು ವರ್ಷ ಮಳೆಯಾಗುತ್ತೆ ಒಂದು ವರ್ಷ ಆಗಲ್ಲ ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದೇವೆ. ಅಳವಂಡಿ ಭಾಗದ ರೈತರು ಹಲವು ವರ್ಷಗಳಿಂದ ನೀರಾವರಿ ಪ್ರದೇಶ ವಾಗುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದೇವೆ. ಸಿಂಗಟಾಲೂರು ಏತ ನೀರಾವರಿ ಯೋಜನೆ ಯಾವುದೇ ಅನುಷ್ಠಾನ ಮಾಡುತ್ತಿಲ್ಲ. ಈ ಬಗ್ಗೆ ಸ್ಥಳೀಯ ಶಾಸಕರು ಹಾಗೂ ಸಚಿವರು ಕೂಡ ಗಮನ ಹರಿಸುತ್ತಿಲ್ಲ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡು ಸಿಂಗಟಾಲೂರು ಏತ ನೀರಾವರಿ ಯೋಜನೆ ಅನುಷ್ಠಾನ ಗೊಳಿಸಿ ಈ ಭಾಗದ ರೈತರ ನೀರಾವರಿ ಕನಸನ್ನು ನನಸು ಮಾಡಬೇಕು ಎನ್ನುತ್ತಾರೆ ಮೈನಹಳ್ಳಿ ರೈತ ಗುರು ಬಸವರಾಜ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.