
ಕೊಪ್ಪಳ: ಮಾಲಿನ್ಯಕಾರಕ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಭಾನುವಾರ 101 ದಿನಗಳನ್ನು ಪೂರೈಸಿತು.
ಬಲ್ಡೋಟ, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಅಲ್ಟ್ರಾಟೆಕ್ ಸಿಮೆಂಟ್, ಎಕ್ಸ್ಇಂಡಿಯಾ, ಭದ್ರಶ್ರೀ ಸ್ಟೀಲ್, ತನುಷ್, ವನ್ಯಾ ಸ್ಟೀಲ್ ಮುಂತಾದ ಕಾರ್ಖಾನೆಗಳ ಮಾಲಿನ್ಯ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಭಾನುವಾರ ಜನ ಸಂಗ್ರಾಮ ಪರಿಷತ್ ಸಂಸ್ಥಾಪಕ ರಾಯಚೂರಿನ ರಾಘವೇಂದ್ರ ಕುಷ್ಟಗಿ ಮಾತನಾಡಿ ‘ತುಂಗಭದ್ರಾ ನದಿ ನೀರು, ಕೃಷಿ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಆಧಾರವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಪಾಯಕಾರಿಯಾಗಿದೆ’ ಎಂದರು.
‘ಕೈಗಾರಿಕಾ ತ್ಯಾಜ್ಯ, ಮತ್ತು ನಗರ ಚರಂಡಿಯ ಮಾಲಿನ್ಯದಿಂದಾಗಿ ನದಿಯ ನೀರಿನ ಗುಣಮಟ್ಟ ಗಂಭೀರವಾಗಿ ಕುಸಿದಿದೆ. ವಿಜಯನಗರ, ರಾಯಚೂರು ಮತ್ತು ಕೊಪ್ಪಳ, ಬಳ್ಳಾರಿ ಜಿಲ್ಲೆಗಳಲ್ಲಿನ ನೀರಿನ ಸ್ಥಿತಿ, ಆರೋಗ್ಯದ ಮೇಲೆ ಅದರ ಪರಿಣಾಮ ಬೀರುತ್ತದೆ. ತುಂಗಭದ್ರಾ ನದಿಯ ನೀರನ್ನು ಯಾವುದೇ ಸಂಸ್ಕರಣೆಯಿಲ್ಲದೆ ನೇರವಾಗಿ ಕುಡಿಯಬಾರದು’ ಎಂದರು.
ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎ.ಎಂ. ಮದರಿ, ಡಿ.ಎಚ್. ಪೂಜಾರ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ರಂಗಕರ್ಮಿ ಶರಣು ಶೆಟ್ಟರ್, ಪ್ರಕಾಶಕ ಡಿ.ಎಂ.ಬಡಿಗೇರ, ಮಹಾಂತೇಶ ಕೊತಬಾಳ, ನಿವೃತ್ತ ಪ್ರಾಚಾರ್ಯ ಬಿ.ಜಿ.ಕರಿಗಾರ, ರಾಜಶೇಖರ ಏಳುಬಾವಿ, ಮಹಾದೇವಪ್ಪ ಮಾವಿನಮಾಡು, ಗವಿಸಿದ್ದಪ್ಪ ಮಾ.ಪಾ, ಪಂಪಣ್ಣ ಚಿಂತಪಲ್ಲಿ, ನಟರಾಜ ಸವಡಿ, ಬಸವರಾಜಪ್ಪ ಶೆಟ್ಟರ್, ನಿವೃತ್ತ ಪ್ರಾಚಾರ್ಯ ಸಿ.ವಿ. ಜಡಿಯವರ, ಎಂ.ಕೆ.ಸಾಹೇಬ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.