ADVERTISEMENT

ಗವಿಮಠದ ಜಾತ್ರೆಯ ಮಹಾದಾಸೋಹಕ್ಕೆ ಸಂಭ್ರಮದ ತೆರೆ: ಕೊನೆಯ ಭಕ್ತನಿಗೂ ಸಂದ ದಾಸೋಹ

ಪ್ರಮೋದ ಕುಲಕರ್ಣಿ
Published 19 ಜನವರಿ 2026, 6:16 IST
Last Updated 19 ಜನವರಿ 2026, 6:16 IST
<div class="paragraphs"><p>ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾದಾಸೋಹದ ಕೊನೆಯ ದಿನವಾದ ಭಾನುವಾರ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ದರ್ಶನ ಪಡೆಯಲು ಸೇರಿದ್ದ ಭಕ್ತರು</p></div>

ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾದಾಸೋಹದ ಕೊನೆಯ ದಿನವಾದ ಭಾನುವಾರ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ದರ್ಶನ ಪಡೆಯಲು ಸೇರಿದ್ದ ಭಕ್ತರು

   

ಪ್ರಜಾವಾಣಿ ಚಿತ್ರಗಳು/ಭರತ್‌ ಕಂದಕೂರ 

ಕೊಪ್ಪಳ: ಮಹಾದಾಸೋಹದ ಮನೆಯಲ್ಲಿ ಸತತ 18 ದಿನಗಳಿಂದ ಉರಿದ ಕಟ್ಟಿಗೆಯ ಒಲೆಗಳು, ಹಗಲಿರುಳು ದುಡಿದ ಬಾಣಸಿಗರು, ಸದಾ ಅನ್ನ ಸಾರು ಹಾಗೂ ಪಲ್ಲೆ ತಯಾರಿಯಲ್ಲಿದ್ದು ಭಕ್ತರಿಗಾಗಿ ಕಾಯುತ್ತಿದ್ದ ಸ್ವಯಂ ಸೇವಕರು, ತರಹೇವಾರಿ ತಿನಿಸು ಖಾಲಿಯಾದಷ್ಟೂ ಭಕ್ತರಿಂದಲೇ ಮತ್ತೆ ಭರ್ತಿಯಾಗುತ್ತಿದ್ದ ಧವಸ ಧಾನ್ಯಗಳ ಸಂಗ್ರಹಗಳ ಕೊಠಡಿ.

ADVERTISEMENT

ಇದು ಇಲ್ಲಿನ ಗವಿಸಿದ್ಧೇಶ್ವರ ಮಠದ ಜಾತ್ರೆಯ ಅಂಗವಾಗಿ ಮಹಾದಾಸೋಹದ ಮನೆಯಲ್ಲಿ ಕಂಡುಬರುತ್ತಿದ್ದ ಚಿತ್ರಣ. ಜ. 1ರಂದು ಮಹಾದಾಸೋಹ ಪ್ರಾರಂಭವಾಗಿದ್ದು ಅಮವಾಸ್ಯೆ ದಿನವಾದ ಭಾನುವಾರ ಅಂತ್ಯಕಂಡಿತು. ಈ ಬಾರಿಯ ಜಾತ್ರೆಯಲ್ಲಿ ಮಹಾರಥೋತ್ಸವಕ್ಕೂ ಮೊದಲು ಮತ್ತು ನಂತರದ ದಿನಗಳಲ್ಲಿಯೂ ಭರಪೂರವಾಗಿ ಭಕ್ತರು ಬಂದರು. ಅವರಿಗಾಗಿ ಅನೇಕ ಸ್ವಯಂಸೇವಕರು, ಸಮಾಜಸೇವಕರು, ದಾನಿಗಳು ಹಾಗೂ ಮಠದ ಭಕ್ತರು ತಮ್ಮ ಶಕ್ತಿಗೆ ಅನುಗುಣವಾಗಿ ಸೇವೆ ಸಲ್ಲಿಸಿದರು.

ಸಿಂಧನೂರಿನ ಗೆಳೆಯರು ಬಳಗದವರು ಮೈಸೂರು ಪಾಕ್‌, ಕೊಪ್ಪಳದ ಸ್ನೇಹಿತರು ಮಿರ್ಚಿ, ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನ ಸಿರಿಗೇರಿ- ದಾಸಾಪೂರ ಗ್ರಾಮಸ್ಥರು ಹಪ್ಪಳ ಸೇವೆ ಹೀಗೆ ಅನೇಕರು ವಿಶೇಷ ಖಾದ್ಯಗಳನ್ನು ಮಹಾದಾಸೋಹದ ಆವರಣದಲ್ಲಿ ತಯಾರಿಸಿ ಉಣಬಡಿಸಿದರು. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌, ಸಿಖ್‌ ಹೀಗೆ ಎಲ್ಲ ಧರ್ಮಗಳ ಹಾಗೂ ಜಾತಿಗಳ ಜನ ತಮ್ಮ ಮನೆ,ಊರಿನಲ್ಲಿ ತಯಾರಿಸಿದ ಜೋಳದ ರೊಟ್ಟಿ, ಶೇಂಗಾ ಹೋಳಿಗೆ, ರವೆ ಉಂಡಿ, ಜಿಲೇಬಿ, ಕರ್ಚಿಕಾಯಿ, ಅತ್ರಾಸ್‌, ಕರದಂಟು ಹೀಗೆ ಅನೇಕ ಸಿಹಿ ತಿನಿಸುಗಳು ಭಕ್ತರ ಮನೆಯಿಂದ ಗವಿಮಠದ ಮಹಾದಾಸೋಹದ ಮನೆ ಸೇರಿ ಮರಳಿ ಭಕ್ತರಿಗೆ ಸಮರ್ಪಿತವಾದವು.

ಇವುಗಳ ಜೊತೆ ಅನೇಕ ವ್ಯಾಪಾರಿಗಳು, ಜನಸಾಮಾನ್ಯರು ಟನ್‌ ಲೆಕ್ಕದಲ್ಲಿ ತರಕಾರಿ, ಕಾಯಿಪಲ್ಲೆ ಹಾಗೂ ಕಟ್ಟಿಗೆಗಳನ್ನು ಮಠಕ್ಕೆ ಸಮರ್ಪಿಸಿದರು. ಕೊಪ್ಪಳ, ಗದಗ ಸೇರಿದಂತೆ ವಿವಿಧ ಜಿಲ್ಲೆಗಳ ಅನೇಕ ಬಾಣಸಿಗರು ತಂಡೋಪತಂಡವಾಗಿ ಬಂದ ಸರತಿಯಲ್ಲಿ ಅಡುಗೆ ತಯಾರಿಸಿದರು. ಮಹಾರಥೋತ್ಸವದ ಮರುದಿನ ಮತ್ತು ಜ. 11ರ ಭಾನುವಾರದಂತೆ ಗವಿಮಠದ ಲೆಕ್ಕಾಚಾರ ಮೀರಿ ಭಕ್ತರು ಬಂದರೂ ಯಾರಿಗೂ ತೊಂದರೆಯಾಗದಂತೆ ಪೊಲೀಸರು, ಎನ್‌ಸಿಸಿ, ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಜನರ ನಿರ್ವಹಣೆ ಮಾಡಿದರು. ದಾಸೋಹದ ಅಡುಗೆ ಮನೆಯಲ್ಲಿ ಬಾಣಸಿಗರು ಒಂದಿನಿಂತೂ ವಿಶ್ರಾಂತಿ ಪಡೆಯದೆ ಅಡುಗೆ ತಯಾರಿಸಿದರೆ ಮಹಿಳೆಯರು, ಸ್ವಸಹಾಯ ಸಂಘದವರು, ವಿವಿಧ ಸಂಘ ಸಂಸ್ಥೆಯವರು ತಂಡಗಳಾಗಿ ಬಂದು ಅಡುಗೆ ಉಣಪಡಿಸಿದರು. ಹೀಗೆ ನಿತ್ಯ ಹಗಲಿರುಳು ನಡೆದ ಮಹಾದಾಸೋಹದ ವ್ಯವಸ್ಥೆಯ ಅಚ್ಚುಕಟ್ಟುತನ ಹಾಗೂ ಉತ್ತಮ ನಿರ್ವಹಣೆ ಭಕ್ತರ ಖುಷಿಯೂ ಕಾರಣವಾಯಿತು. ಬಾಣಸಿಗರು ಮಠಕ್ಕೆ ಬಂದ ಕೊನೆಯ ಭಕ್ತನ ಊಟವಾಗುವ ತನಕವೂ ದುಡಿದು ಗವಿಮಠಕ್ಕೆ ಭಕ್ತಿ ಸಮರ್ಪಿಸಿದರು.

ಗವಿಮಠದ ಜಾತ್ರೆಯ ಆವರಣದಲ್ಲಿ ಭಾನುವಾರ ಕಂಡುಬಂದ ಜನಸಂದಣಿಯ ಚಿತ್ರಣ
ಮಹಾದಾಸೋಹದ ಮನೆಯಲ್ಲಿ ತಯಾರಿಸಿದ್ದ ಗೋಧಿ ಹುಗ್ಗಿ
ಗವಿಮಠದಲ್ಲಿ ಭಾನುವಾರ ನಡೆದ ಹರಕೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು
ಜಾತ್ರೆಯಲ್ಲಿ ಹಪ್ಪಳ ಸೇವೆ ಸಲ್ಲಿಸಿದ ಮಹಾಂತಯ್ಯನಮಠ ಕುಟುಂಬದವರು 
ಎಲ್ಲರ ಸಹಕಾರದಿಂದಾಗಿ ಗವಿಮಠದ ಜಾತ್ರೆಯ ಮಹಾದಾಸೋಹ ಅಚ್ಚುಕಟ್ಟಾಗಿ ನಡೆದಿದೆ. ಭಕ್ತರು ಕೂಡ ಸಹಕಾರ ಕೊಟ್ಟಿದ್ದಾರೆ. ಮಠಕ್ಕೆ ಬಂದ ಕೊನೆಯ ಭಕ್ತನಿಗೂ ದಾಸೋಹ ಸಮರ್ಪಣೆಯಾಗಿದೆ
ರಾಮನಗೌಡರ ಗವಿಮಠದ ಮಹಾದಾಸೋಹದ ಉಸ್ತುವಾರಿ
ವರ್ಷದಿಂದ ವರ್ಷಕ್ಕೆ ಗವಿಮಠದ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ವರ್ಷ ಹಿಂದಿನ ಎಲ್ಲ ವರ್ಷಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದಾರೆ
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ  

ಖರ್ಚಾಗಿದ್ದು 1500 ಕ್ವಿಂಟಲ್‌ ಅಕ್ಕಿ

18 ದಿನಗಳ ಮಹಾದಾಸೋಹದಲ್ಲಿ ಕನಿಷ್ಠ 28ರಿಂದ 30 ಲಕ್ಷ ಜನ ದಾಸೋಹ ಸವಿದಿದ್ದಾರೆ ಎಂದು ದಾಸೋಹ ಮನೆಯ ಉಸ್ತುವಾರಿ ರಾಮನಗೌಡರ ತಿಳಿಸಿದ್ದಾರೆ. ಕನಿಷ್ಠ 20 ಲಕ್ಷ ಜೋಳದ ರೊಟ್ಟಿ 300 ಕ್ವಿಂಟಲ್​ ತೊಗರಿಬೇಳೆ 150 ಕ್ವಿಂಟಲ್​ ಹೆಸರು 1400ರಿಂದ 1500 ಕ್ವಿಂಟಲ್‌ ಅಕ್ಕಿ ಟನ್​ಗಟ್ಟಲೇ ತರಕಾರಿ ಹಾಗೂ ಒಲೆ ಉರಿಸಲು ಕಟ್ಟಿಗೆಗಳನ್ನು ಬಳಕೆ ಮಾಡಲಾಗಿದೆ. ಕನಿಷ್ಠವೆಂದರೂ ಸುಮಾರು 28ರಿಂದ 30 ಲಕ್ಷ ಜನ ಪ್ರಸಾದ ಸೇವಿಸಿದ್ದಾರೆಂದು ಅಂದಾಜಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮಹಾದಾಸೋಹದ ಕೊನೆಯ ದಿನವೇ ಸುಮಾರು ಎರಡರಿಂದ ಮೂರು ಲಕ್ಷ ಭಕ್ತರು ಮಠಕ್ಕೆ ಭೇಟಿ ನೀಡಿದ್ದು 100 ಕ್ವಿಂಟಲ್‌ ಗೋಧಿ ಹುಗ್ಗಿ 100ರಿಂದ 120 ಕ್ವಿಂಟಲ್‌ ಅಕ್ಕಿ ಬಳಕೆ ಮಾಡಲಾಗಿದೆ. ಭಾನುವಾರ ಬಂದ ಭಕ್ತರಿಗೆ ಅನ್ನ ಸಾರು ಬದನೇಕಾಯಿ ಪಲ್ಲೆ ಗೋಧಿಹುಗ್ಗಿ ಕಡ್ಲೇಪುಡಿ ಉಪ್ಪಿನಕಾಯಿ ಉಣಪಡಿಸಲಾಗಿದೆ. 

ಕೊನೆಯ ದಿನ 5 ಲಕ್ಷ ಹಪ್ಪಳ 

ಮಹಾದಾಸೋಹದ ಕೊನೆಯ ದಿನ ಕೊಪ್ಪಳದ ಮಹಾಂತಯ್ಯಮಠ ಕುಟುಂಬದವರು ಭಕ್ತರಿಗೆ ಅಂದಾಜು ಐದು ಲಕ್ಷ ಹಪ್ಪಳ ಉಣಬಡಿಸಿದರು. ಬೆಳಿಗ್ಗೆ ಎಂಟು ಗಂಟೆಗೆ ಹಪ್ಪಳ ಕರಿಯುವ ಕೆಲಸ ಆರಂಭವಾಗಿ ಮಧ್ಯಾಹ್ನದ ತನಕವೂ ನಡೆಯಿತು. ಅವರ ಕುಟುಂಬ ಸದಸ್ಯರೆ 15–16 ಜನ ಸೇರಿ ಸೇವಾ ಕಾರ್ಯದಲ್ಲಿ ಭಾಗಿಯಾದರು. ಇದು ಮಠಕ್ಕೆ ಸಲ್ಲಿಸುವ ಅಲ್ಪ ಸೇವೆ ನಮ್ಮದು ಎಂದು ಮಹಾಂತಯ್ಯಮಠ ಕುಟುಂಬದವರು ಹೇಳಿದರು.  

ಹಗಲಿರುಳು ದುಡಿದ ಪೊಲೀಸರು

ಇತ್ತೀಚೆಗಿನ ವರ್ಷಗಳಲ್ಲಿ ಸ್ವಲ್ಪ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದರೆ ಸಾಕು ಕಾಲ್ತುಳಿತ ಸಾವು ನೋವಿನ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಆದರೆ ಕೊಪ್ಪಳದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಬಂದರೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಹೋಂಗಾರ್ಡ್ಸ್‌ ಹಾಗೂ ಗವಿಮಠದ ವಿದ್ಯಾರ್ಥಿಗಳು ಶ್ರಮಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ್‌ ಎಲ್‌. ಅರಸಿದ್ಧಿ ಹೆಚ್ಚುವರಿ ಎಸ್‌.ಪಿ. ಹೇಮಂತಕುಮಾರ್‌ ಡಿವೈಎಸ್‌ಪಿಗಳಾದ ಮುತ್ತಣ್ಣ ಸರವಗೋಳ ಜಿ.ಎಸ್. ನ್ಯಾಮಗೌಡರ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿ ಜನಸಂದಣಿ ನಿಯಂತ್ರಿಸಿದ್ದು ಹಾಗೂ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ದರ್ಶನಕ್ಕೆ ಸರಾಗ ವ್ಯವಸ್ಥೆ ಮಾಡಿದ್ದು ಜನರ ಮೆಚ್ಚುಗೆಗೂ ಕಾರಣವಾಯಿತು.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.