ADVERTISEMENT

ಕೊಪ್ಪಳ | ಗವಿಮಠ ಜಾತ್ರೆ: ಭಕ್ತರ ಮಹಾಸಂಗಮ

ಪ್ರಮೋದ ಕುಲಕರ್ಣಿ
Published 6 ಜನವರಿ 2026, 3:53 IST
Last Updated 6 ಜನವರಿ 2026, 3:53 IST
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಭಕ್ತರ ನಡುವೆ ಸಾಗಿದ ರಥ  ಪ್ರಜಾವಾಣಿ ಚಿತ್ರ: ಭರತ್ ಕಂದಕೂರ
ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಭಕ್ತರ ನಡುವೆ ಸಾಗಿದ ರಥ  ಪ್ರಜಾವಾಣಿ ಚಿತ್ರ: ಭರತ್ ಕಂದಕೂರ   

ಕೊಪ್ಪಳ: ‘ದಕ್ಷಿಣ ಭಾರತದ ಕುಂಭಮೇಳ’ ಎಂವ ಕೀರ್ತಿಯುಳ್ಳ ಕೊಪ್ಪಳದ ಗವಿಮಠದ ಜಾತ್ರೆಯ ಮಹಾ
ರಥೋತ್ಸವ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಮಹಾಸಂಗಮದೊಂದಿಗೆ ಸಂಭ್ರಮದಿಂದ ನೆರವೇರಿತು.

ವಿವಿಧ ಜಿಲ್ಲೆ, ನೆರೆರಾಜ್ಯಗಳಿಂದಲೂ ಸಾಗರೋಪಾದಿಯಲ್ಲಿ ಬಂದಿದ್ದ ಭಕ್ತರು ಗವಿಸಿದ್ಧೇಶ್ವರ ಗದ್ದುಗೆಯ ದರ್ಶನ ಪಡೆದು ಮಹಾದಾಸೋಹ ಸವಿದ ಬಳಿಕ ಅದ್ದೂರಿ ರಥೋತ್ಸವಕ್ಕೆ ಸಾಕ್ಷಿಯಾದರು.

ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ್‌ ಅವರು ಧ್ವಜಾರೋಹಣ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಇದಕ್ಕೂ ಮೊದಲು ಮಠದಿಂದ ಸಾಂಪ್ರದಾಯಿಕ ಕಾರ್ಯಕ್ರಮಗಳು ಜರುಗಿದವು.

ADVERTISEMENT

ಕಾಲು ನೋವಿನ ಕಾರಣಕ್ಕೆ ಊರುಗೋಲಿನ ನೆರವಿನೊಂದಿಗೆ ಬಂದ, ಮೂಲತಃ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಬಿನ್ನಾಳ ಗ್ರಾಮದವರಾದ ಸಿ.ಎಚ್‌.ವಿಜಯಶಂಕರ್‌ ಅವರು ಲಕ್ಷಾಂತರ ಜನರನ್ನು ನೋಡಿ ವಿಸ್ಮಯರಾದರು. ತಲೆ ಭಾಗಿ ಜನಸಮೂಹಕ್ಕೆ ನಮಸ್ಕರಿಸಿದರು.

‘ಐತಿಹಾಸಿಕ, ಧಾರ್ಮಿಕ, ಪಾರಂಪರಿಕ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದು ಖುಷಿ ನೀಡಿದೆ. ಬಹಳ ಹೆಮ್ಮೆ ಹಾಗೂ ಅಭಿಮಾನದಿಂದ ಜಾತ್ರೆಗೆ ಚಾಲನೆ ಕೊಟ್ಟಿದ್ದೇನೆ. ದಸರಾ ವೈಭವ ನೋಡಲು ಮೈಸೂರಿಗೆ, ಜಾತ್ರೆಯ ಸೊಬಗು ಕಾಣಲು ಕೊಪ್ಪಳಕ್ಕೆ ಬರಬೇಕು’ ಎಂದು ಹೇಳಿದರು.

ಗವಿಮಠದ ಆವರಣದಿಂದ ಒಂದು ಕಿ.ಮೀ. ದೂರದ ಬಸವೇಶ್ವರ ವೃತ್ತದ ತನಕ ಕಣ್ಣು ಹಾಯಿಸಿದಷ್ಟೂ ದೂರ ಜನಜಂಗುಳಿಯಿದ್ದರೂ ಮಹಾರಥೋತ್ಸವಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಗಾಢಮೌನ ಆವರಿಸಿತ್ತು.

ಧ್ವಜಾರೋಹಣದ ಭಕ್ತಗಣ ಭಕ್ತಿಯಿಂದ ಕೈ ಮುಗಿದು ಘೋಷಣೆಗಳನ್ನು ಮೊಳಗಿಸಿತು. ರಥ ಪಾದಗಟ್ಟೆ ತಲುಪಿ ಸ್ವಸ್ಥಾನಕ್ಕೆ ಮರಳಿ ಬಂದ ಬಳಿಕ ಭಕ್ತರು ಕೈ ಮುಗಿದು ಚಪ್ಪಾಳೆ ಹೊಡೆದು ಭಕ್ತಿ ಸಮರ್ಪಿಸಿದರು.

ಕೊಪ್ಪಳದ ಗವಿಸಿದ್ಧೇಶ್ವರ ಮಠದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಭಕ್ತರ ನಡುವೆ ಸಾಗಿದ ರಥ ಪ್ರಜಾವಾಣಿ ಚಿತ್ರ: ಭರತ್ ಕಂದಕೂರ
ಕೈಯಲ್ಲಿ ಸತ್ಕಾರ್ಯ ತಲೆಯಲ್ಲಿ ಸದ್ವಿಚಾರ ಬಾಯ‌ಲ್ಲಿ ಸವಿ ಮಾತು ಮನದಲ್ಲಿ ಸವಿಪ್ರೇಮ ಇದ್ದರೆ ಬದುಕು ಸಾರ್ಥಕವಾಗುತ್ತದೆ. ಆಗ ಗವಿಸಿದ್ಧೇಶ್ವರನೇ ಬಂದು ನಿಮ್ಮ ಮನೆ ಜಗುಲಿ ಮೇಲೆ ದೀಪ ಹಚ್ಚುತ್ತಾನೆ.
ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಗವಿಮಠ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.