ADVERTISEMENT

ಕೊಪ್ಪಳ | ಗವಿಸಿದ್ಧೇಶ್ವರ ನಾಮದ ಅನಂತ ಅನುರಣನ

ತವರು ಜಿಲ್ಲೆಯಲ್ಲಿ ಅಭಿಮಾನದಿಂದಲೇ ಜಾತ್ರೆಗೆ ಚಾಲನೆ ನೀಡಿದ ಮೇಘಾಲಯದ ರಾಜ್ಯಪಾಲರು

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 3:49 IST
Last Updated 6 ಜನವರಿ 2026, 3:49 IST
ಗವಿಮಠದ ಜಾತ್ರೆಯ ಮಹಾರಥೋತ್ಸವಕ್ಕೆ ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್‌ ಅವರು ಚಾಲನೆ ನೀಡಿ ಕೈ ಮುಗಿದು ನಮಸ್ಕರಿಸಿದರು.  ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಇದ್ದಾರೆ  
ಗವಿಮಠದ ಜಾತ್ರೆಯ ಮಹಾರಥೋತ್ಸವಕ್ಕೆ ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್‌ ಅವರು ಚಾಲನೆ ನೀಡಿ ಕೈ ಮುಗಿದು ನಮಸ್ಕರಿಸಿದರು.  ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಇದ್ದಾರೆ     

ಕೊಪ್ಪಳ: ಇಲ್ಲಿನ ಗವಿಮಠಕ್ಕೆ ಬರುವ ಎಲ್ಲ ದಿಕ್ಕುಗಳಿಂದಲೂ ಸೋಮವಾರ ಜನ ಪ್ರವಾಹದ ರೀತಿಯಲ್ಲಿ ಬರುತ್ತಿದ್ದರು. ಗೋದೂಳಿಯ ಸಮಯ ಸಮೀಪಿಸುತ್ತಿದ್ದಂತೆಯೇ ಜನ ಮಹಾರಥೋತ್ಸವಕ್ಕೆ ಸಾಕ್ಷಿಯಾಗಿ ಧನ್ಯತಾ ಭಾವ ಮೆರೆದರು.

ಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮ ಆರಂಭವಾಗಿ ನಾಲ್ಕು ದಿನಗಳ ಕಳೆದರೂ ವಿಶೇಷ ಆದ್ಯತೆ ಇರುವುದು ಮಹಾರಥೋತ್ಸವದ ದಿನಕ್ಕೆ. ಆದ್ದರಿಂದ ಕಣ್ಣು ಹಾಯಿಸಿದಷ್ಟೂ ದೂರ ಜನಸಾಗರ ಕಂಡುಬಂದಿತು. ಮೇಘಾಲಯದ ರಾಜ್ಯಪಾಲರಾದ ಮೂಲತಃ ಕೊಪ್ಪಳ ಜಿಲ್ಲೆಯ ಬಿನ್ನಾಳ ಗ್ರಾಮದ ಸಿ.ಎಚ್‌. ವಿಜಯಶಂಕರ್‌ ಅವರು ಧ್ಜಜ ಹಾರಿಸುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಆಗ ಭಕ್ತರಲ್ಲಿ ಧನ್ಯತೆಯ ಭಾವ ಕಂಡಿತು. ತಮ್ಮೂರಿನ ಸಾಧಕರಿಗೆ ಗವಿಮಠದ ಮಹಾರಥೋತ್ಸವ ಉದ್ಘಾಟನೆಗೆ ಅವಕಾಶ ಸಿಕ್ಕಿದ್ದಕ್ಕೆ ಜನರಲ್ಲಿ ಸಂಭ್ರಮ ಇಮ್ಮಡಿಗೊಂಡಿತ್ತು.

ಮಹಾರಥೋತ್ಸವ ನಡೆದಾಗ ಲಕ್ಷಾಂತರ ಜನ ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಣೆ ಮಾಡಿದರು. ಗವಿಮಠದ ವಿಶಾಲವಾದ ಆವರಣದಿಂದ ಆರಂಭವಾದ ಮಹಾರಥೋತ್ಸವದ ಯಾತ್ರೆ ಸುರಕ್ಷಿತವಾಗಿ ಪಾದಗಟ್ಟೆ ಮುಟ್ಟಿ ವಾಪಸ್‌ ಸ್ವ ಸ್ಥಾನಕ್ಕೆ ಬರುತ್ತಿದ್ದಂತೆ ಜನ ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ದಕ್ಷಿಣ ಭಾರತದ ಕುಂಭಮೇಳ ಎಂದು ಖ್ಯಾತಿಯಾದ ಗವಿಮಠದ ಜಾತ್ರೆಗೆ ಎಷ್ಟೇ ಲಕ್ಷಾಂತರ ಜನ ಬಂದರೂ ಯಾವುದೇ ಅವಘಡಕ್ಕೆ ಅವಕಾಶವಿಲ್ಲದಂತೆ ಸರಾಗವಾಗಿ, ಸಂಭ್ರಮದಿಂದ ತೇರು ಎಳೆಯಲಾಗುತ್ತದೆ ಎನ್ನುವುದು ವಿಶೇಷ. ಈ ಕಾರ್ಯದಲ್ಲಿ ಎನ್‌ಸಿಸಿ, ಸ್ಕೌಟ್‌ ಅಂಡ್‌ ಗೈಡ್ಸ್‌, ಎನ್ಎಸ್‌ಎಸ್‌, ವಿದ್ಯಾರ್ಥಿಗಳ ತಂಡ ಹೀಗೆ ಪ್ರತಿ ಸ್ವಯಂಸೇವಕರು ಜನ ಶಿಸ್ತು ಕಾಪಾಡುವಲ್ಲಿ, ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಪ್ರಮುಖ ಪಾತ್ರ ವಹಿಸಿದರು.

ADVERTISEMENT

ಮಹಾರಥೋತ್ಸವದ ದಿನ ಜನ ಜಿಲ್ಲೆ ಹಾಗೂ ಜಿಲ್ಲೆಯ ಗಡಿ ಭಾಗದ ವಿವಿಧ ಹಳ್ಳಿಗಳಿಂದ ಸೂರ್ಯೋದಕ್ಕೂ ಮೊದಲು ಪಾದಯಾತ್ರೆ ಮೂಲಕ ಬಂದರೆ, ಇನ್ನೂ ಕೆಲವರು ವಾಹನಗಳ ಮೂಲಕ್ಕೆ ಗವಿಮಠಕ್ಕೆ ಬಂದಿದ್ದರು. ಮಹಾರಥೋತ್ಸವದ ಹಿಂದಿನ ದಿನದಿಂದಲೇ ಬೃಹತ್‌ ತೇರು ಕಟ್ಟುವ ಕಾರ್ಯ ಮಾಡಲಾಯಿತು.

ಲಕ್ಷಾಂತರ ಭಕ್ತರು ಬಂದರೂ ಎಲ್ಲೆಡೆಯೂ ಸ್ವಚ್ಛತೆ ನಿರ್ವಹಣೆ ಮಾಡುವುದು ಗವಿಮಠದ ಜಾತ್ರೆಯ ವಿಶೇಷ. ಎಲ್ಲೇ ಕಸಬಿದ್ದಿರುವುದು ಅಥವಾ ವಾತಾವರಣ ಹೊಲಸು ಮಾಡಿರುವುದು ಕಂಡುಬಂದರೆ ಖುದ್ದು ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯೇ ಸ್ವಚ್ಛಗೊಳಿಸುತ್ತಾರೆ. ಹೀಗಾಗಿ ಜನ ಸ್ವಯಂಪ್ರೇರಿತರಾಗಿ ಸ್ವಚ್ಚತೆಗೆ ಒತ್ತು ಕೊಡುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ಚಳಿಯ ವಾತಾವರಣವಿದ್ದು ಹೊರ ರಾಜ್ಯಗಳು ಹಾಗೂ ಜಿಲ್ಲೆಗಳಿಂದ ಬಂದ ಭಕ್ತರಿಗೆ ಮಠದ ವತಿಯಿಂದಲೇ ಪ್ರಸಾದ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿತ್ತು. 

ಜಾತ್ರೆಯಲ್ಲಿ ಅಚ್ಚುಕಟ್ಟುತನ, ಸ್ವಚ್ಛತೆ, ಜನರ ಪಾಲ್ಗೊಳ್ಳುವಿಕೆ, ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯ ಮಾನವೀಯ ಹಾಗೂ ಸಾಮಾಜಿಕ ಕಾರ್ಯಗಳು, ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ ಹಾಗೂ ಅಧ್ಯಾತ್ಮದ ಪ್ರೀತಿ ಹಂಚುವಿಕೆಯಿಂದಾಗಿ ಗವಿಮಠದ ಕಾರ್ಯವೈಖರಿ ಎಲ್ಲರ ಮೆಚ್ಚುಗೆ ಗಳಿಸಿದೆ.

ಉತ್ತರದ ಪ್ರಯಾಗರಾಜ್‌ನಲ್ಲಿ ನಾಗಸಾಧುಗಳ ಕುಂಭಮೇಳ ನಡೆಯುತ್ತದೆ. ದಕ್ಷಿಣದಲ್ಲಿ ಭಕ್ತರ ಕುಂಭ ಮೇಳ ಕಾಣಬೇಕೆಂದರೆ ಕೊಪ್ಪಳ ಜಾತ್ರೆಗೆ ಬರಬೇಕು.
ನಿರಂಜನಾನಂದಪುರಿ ಸ್ವಾಮೀಜಿ ಕನಕಗುರುಪೀಠ ಕಾಗಿನೆಲೆ
ಕೊಪ್ಪಳದಲ್ಲಿ ನಡೆದಿದ್ದು ಭಾರತದಲ್ಲಿ ಅತ್ಯಂತ ಐತಿಹಾಸಿಕ ಜಾತ್ರೆ. ಜನರ ಸಂಭ್ರಮ ಹೆಚ್ಚಿಸುವ ಕೆಲಸ ಗವಿಮಠ ಮಾಡುತ್ತಿದೆ. ಜಾತ್ರೆ ಸಂಭ್ರಮ ನಿರಂತರವಾಗಿರಲಿ
ಜಗದೀಶ ಶೆಟ್ಟರ್‌ ಸಂಸದ
ಕೊಪ್ಪಳದ ಗವಿಸಿದ್ಧೇಶ್ವರ ಎಲ್ಲರ ಮನದಲ್ಲಿ ನೆಲೆಸಿದ್ದಾನೆ‌. ಭಕ್ತಿ ಭಾವದ ಈ ಜಾತ್ರೆ ಎಲ್ಲ ವರ್ಗ ಸಮುದಾಯ ಜನ ಪಾಲ್ಗೊಳ್ಳುತ್ತಾರೆ. ಸದಾ ನೆನಪಿನಲ್ಲಿ ಉಳಿಯುವ ಕಾರ್ಯಕ್ರಮ ಇದೆ.   
ಬಸವರಾಜ ಬೊಮ್ಮಾಯಿ ಸಂಸದ
ಕೊಪ್ಪಳದ‌ ಗವಿಮಠ ಜಾತ್ರೆ ಸೂರ್ಯ ಚಂದ್ರ ಇರುವ ತನಕವೂ ಅದರ ವೈಭವ ಇರುತ್ತದೆ. ಜಗತ್ತಿನ ಭೂಪಟದಲ್ಲಿ ಇಂಥ ಜಾತ್ರೆ ಮತ್ತೆ ಎಲ್ಲಿಯೂ ಸಿಗುವುದಿಲ್ಲ. ಅಭಿನವ ಗವಿಶ್ರೀಗಳ ದಿವ್ಯ ತಪಸ್ಸಿನಿಂದ ಇದೆಲ್ಲವೂ ಸಾಧ್ಯವಾಗಿದೆ.
ವಿ.ಸೋಮಣ್ಣ ರೈಲ್ವೆ ಖಾತೆ ರಾಜ್ಯ ಸಚಿವ
ವರ್ಷದಿಂದ ವರ್ಷಕ್ಕೆ ಗವಿಮಠದ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುತ್ತಿದ್ದಾರೆ. ಗವಿಶ್ರೀಗಳ ಆಶೀರ್ವಾದ ನಮ್ಮ ಜಿಲ್ಲೆಯ ಮೇಲಿದೆ. ಎಲ್ಲ ಗ್ರಾಮಗಳ ಮನೆಗಳಿಂದಲೂ ಬರುವ ಧನವ ಧಾನ್ಯ ರೊಟ್ಟಿಗಳಿಂದ ಇದು ಭಾವೈಕ್ಯದ ಜಾತ್ರೆಯಾಗಿದೆ.
ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ 

ಜನಪ್ರತಿನಿಧಿಗಳು ಗಣ್ಯರು ಭಾಗಿ ಭವ್ಯ ಮಹಾರಥೋತ್ಸವ ಕಾರ್ಯಕ್ರಮಕ್ಕೆ ಸಂಸದ ಕೆ.ರಾಜಶೇಖರ ಹಿಟ್ನಾಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಬಸನಗೌಡ ತುರ್ವಿಹಾಳ ಹಂಪನಗೌಡ ಬಾದರ್ಲಿ ಗಾಲಿ ಜನಾರ್ದನ ರೆಡ್ಡಿ ಮಹೇಶ ಟೆಂಗಿನಕಾಯಿ ವಿಧಾನಪರಿಷತ್‌ ಸದಸ್ಯರಾದ ಹೇಮಲತಾ ನಾಯಕ ಶಶೀಲ್ ನಮೋಶಿ ಮಾಜಿ ಸಂಸದರಾದ ಸಂಗಣ್ಣ ಕರಡಿ ಶಿವರಾಮೇಗೌಡ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಕೆ.ಶರಣಪ್ಪ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್‌ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್‌ ನೇಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಪ್ರಧಾನ ಜಿಲ್ಲಾ ಮತ್ತು ಸಷೆನ್ಸ್‌ ನ್ಯಾಯಾಧೀಶ ಸಿ. ಚಂದ್ರಶೇಖರ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ ಕಾಖಂಡಗಿ ಸ್ವಾಮೀಜಿ ಮಹಾದೇವ ದೇವರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.