
ಕೊಪ್ಪಳ: ಮಾಸಿದ ದಿಂಬು, ಕೊಳಕಾದ ಹಾಸಿಗೆ, ಎಚ್ಚರಿಕೆಯ ಕಾರಣಕ್ಕೆ ಸ್ವಚ್ಛಗೊಂಡ ಆಸ್ಪತ್ರೆ, ಸಮರ್ಪಕ ದಾಖಲೆಗಳ ನಿರ್ವಹಣೆ ಕೊರತೆ, ರೋಗಿಗಳು ಬಳಸಿದ ಚರಂಡಿ ನೀರು ಸರಿಯಾಗಿ ಹೋಗಲು ವ್ಯವಸ್ಥೆ ಇಲ್ಲದಿರುವುದು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಬಳಿ ಅಸ್ವಚ್ಛತೆ.
ಇದು ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಕಂಡುಬಂದ ಚಿತ್ರಣ. ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕಂಡು ಗರಂ ಆಗಿ ವೈದ್ಯಕೀಯ ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣವೇ ಹಾಸಿಗೆಗಳನ್ನು ಬದಲಿಸಿ ಮತ್ತೊಮ್ಮೆ ಬಂದು ನೋಡುತ್ತೇನೆ ಎನ್ನುವ ಸೂಚನೆ ನೀಡಿದರು. ನೆಲಮಹಡಿಯಿಂದ ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ಉಪಲೋಕಾಯುಕ್ತರು ಹಾಗೂ ಅವರ ತಂಡದವರು ದಾಖಲೆಗಳನ್ನು ಪರಿಶೀಲಿಸಿ ಜನರಿಂದ ಮಾಹಿತಿ ಸಂಗ್ರಹಿಸಿದರು.
ಕುಡಿತದ ಕಾರಣಕ್ಕೆ ಅನಾರೋಗ್ಯಗೊಂಡು ಆಸ್ಪತ್ರೆ ಸೇರಿದ ಕೆಲ ಯುವಕ ಹಾಗೂ ಮಧ್ಯ ವಯಸ್ಕರಿಗೆ ಬುದ್ಧಿವಾದ ಹೇಳಿದ ಉಪಲೋಕಾಯುಕ್ತರು ‘ಕುಡಿದು ಯಾಕೆ ದೇಹ ಹಾಳು ಮಾಡಿಕೊಳ್ಳುತ್ತೀರಿ. ಬೈಕ್‌ಗಳನ್ನು ವೇಗವಾಗಿ ಓಡಿಸಿ ದೇಹದ ಅಂಗಗಳನ್ನು ಯಾಕೆ ಕಳೆದುಕೊಳ್ಳುತ್ತೀರಿ. ಇನ್ನು ಮುಂದೆ ಈ ರೀತಿ ಮಾಡಿಕೊಳ್ಳಬೇಡಿ’ ಎಂದು ಕಿವಿಮಾತು ಹೇಳಿದರು. ಚಿಕಿತ್ಸೆಗಾಗಿ ಬಂದಿದ್ದ ವೃದ್ಧರು, ಮಹಿಳೆಯರಿಗೆ ಧೈರ್ಯ ತುಂಬಿ ಗುಣಮುಖರಾಗುತ್ತೀರಿ ಎಂದು ಭರವಸೆ ತುಂಬಿದರು.
‘ಔಷಧಿಗಳನ್ನು ಹೊರಗಡೆಯಿಂದ ತರಲು ವೈದರು ಚೀಟಿ ಬರೆದು ಕೊಡುತ್ತಾರೆ ಎಂದು ಜನ ಹೇಳುತ್ತಿದ್ದಾರೆ. ಹೊರಗಡೆ ಬರೆದುಕೊಡಲು ಸರ್ಕಾರಿ ಆಸ್ಪತ್ರೆಗಳಲ್ಲಿ ಅವಕಾಶವಿಲ್ಲ. ಔಷಧ ಲಭ್ಯವಿಲ್ಲದಿದ್ದರೂ ಆಸ್ಪತ್ರೆಯವರೇ ಹೊರಗಡೆಯಿಂದ ತಂದು ಕೊಡಬೇಕು’ ಎಂದು ಎಚ್ಚರಿಕೆ ನೀಡಿದರು.
ಕುಡಿಯುವ ನೀರಿನ ಘಟಕ ತುಕ್ಕು ಹಿಡಿದಿದ್ದು, ಶೌಚಾಲಯಗಳು ದುರಸ್ತಿಯಲ್ಲಿವೆ. ತಾಯಿ ಮತ್ತು ಮಗುವಿನ ಆಸ್ಪತ್ರೆಯಲ್ಲಿಯೂ ಸರಿಯಾಗಿ ದಾಖಲೆ ನಿರ್ವಹಣೆ ಮಾಡದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು ಜಿಲ್ಲಾಸ್ಪತ್ರೆ ಅಧಿಕಾರಿಗಳ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗುವುದು ಎಂದು ತಿಳಿಸಿದರು. ಇದಕ್ಕೂ ಮೊದಲು ಜಿಲ್ಲಾ ಕೇಂದ್ರದ ರೈಲು ನಿಲ್ದಾಣಕ್ಕೆ ಬಂದವರೇ ನೇರವಾಗಿ ಕೇಂದ್ರೀಯ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಅಸ್ವಚ್ಛತೆಗೆ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಚಾಟಿ ಬೀಸಿದರು.
ತಾಯಿ ಮತ್ತು ಮಗುವಿನ ಆಸ್ಪತ್ರೆ ಬಳಿಕ ತಹಶೀಲ್ದಾರ್ ಕಚೇರಿ, ಭೂಮಿ ಕೇಂದ್ರ, ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಪರಿಶೀಲಿಸಿ ನಗರಸಭೆಗೆ ತೆರಳಿದರು. ಅಲ್ಲಿ ಒಬ್ಬಬ್ಬ ಸಿಬ್ಬಂದಿಯನ್ನು ಕರೆಯಿಸಿ ತರಾಟೆಗೆ ತೆಗೆದುಕೊಂಡ ಬಿ.ವೀರಪ್ಪ ಅವರು ದಾಖಲೆ ಸಮರ್ಪಕವಾಗಿ ನಿರ್ವಹಣೆ ಮಾಡದ್ದಕ್ಕೆ ಗರಂ ಆದರು.
ಸರ್ಕಾರಿ ಜಾಗದಲ್ಲಿ ಒತ್ತುವರಿ ಮಾಹಿತಿ, ಅಧಿಕಾರಿಗಳ ಲಾಗಿನ್‌ನಲ್ಲಿ ಇರುವ ಫೈಲ್‌ಗಳು, ಬೀದಿ ದೀಪದ ವ್ಯವಸ್ಥೆ, ಎಲ್ಲೆಂದರಲ್ಲಿ ಕಸ ಬೀಸಾಡಿರುವುದು, ಪರವಾನಗಿ ಇಲ್ಲದ ಅಂಗಡಿಗಳ ದಾಖಲೆ, ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದವರ ವಿರುದ್ಧ ಕೈಗೊಂಡ ಕ್ರಮ ಹೀಗೆ ಅನೇಕ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು. ನಗರಸಭೆ ಲೆಕ್ಕಾಧಿಕಾರಿ ಜಿಎಸ್‌ಟಿಯ ₹17 ಕೋಟಿ ಮೊತ್ತವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಿಕೊಳ್ಳಲಾಗಿದೆ ಎನ್ನುವ ಮಾಹಿತಿ ತಿಳಿದು ಉಪಲೋಕಾಯುಕ್ತರು ಅಚ್ಚರಿಗೊಳಗಾದರು. ವಿವಿಧೆಡೆ ಸಿಬ್ಬಂದಿ ಮಾಹಿತಿ ನೀಡಲು ತಡವರಿಸಿದರು.
ಬಳಿಕ ತೋಟಗಾರಿಕೆ ಇಲಾಖೆ, ಗಾಂಧಿ ನಗರದ ಅಂಗನವಾಡಿ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತಾಲ್ಲೂಕು ಪಂಚಾಯಿತಿ ಕಚೇರಿ, ಜಿಲ್ಲಾಡಳಿತ ಭವನದಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ, ವಯಸ್ಕರ ಶಿಕ್ಷಣ ಇಲಾಖೆ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ, ಡಿಎಚ್‌ಒ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ದಾಖಲೆ, ಹಾಜರಾತಿ ಮತ್ತು ಇತರೆ ಕಾರ್ಯ ಚಟುವಟಿಕೆಗಳ ಬಗ್ಗೆ ಪರಿಶೀಲಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಕರ್ನಾಟಕ ಲೋಕಾಯುಕ್ತದ ವಿಚಾರಣೆ ಹೆಚ್ಚುವರಿ ನಿಬಂಧಕ ಕಸನಪ್ಪ ನಾಯ್ಕ, ರಮಾಕಾಂತ್ ಚವ್ಹಾಣ, ಅರವಿಂದ ಎನ್.ವಿ., ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ್ ಎಸ್.ದರಗದ, ರಾಯಚೂರು ಲೋಕಾಯುಕ್ತ ಎಸ್.ಪಿ.ಸತೀಶ್ ಎಸ್.ಚಿಟಗುಬ್ಬಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಹೇಮಂತಕುಮಾರ್, ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ಲೋಕಾಯುಕ್ತದ ಪ್ರಭಾರ ಡಿವೈಎಸ್‌ಪಿ ಚಂದ್ರಪ್ಪ ಇ.ಟಿ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ರೈಲು ನಿಲ್ದಾಣದಿಂದ ನೇರವಾಗಿ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಭೇಟಿ | ಜಿಲ್ಲಾಡಳಿತ ಭವನದಲ್ಲಿ ಇಂದು ಸಾರ್ವಜನಿಕರಿಂದ ದೂರು ಸ್ವೀಕಾರ | ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ, ಅಧಿಕಾರಿಗಳಿಗೆ ಚಾಟಿ

ಸರ್ಕಾರ ಸೌಲಭ್ಯಗಳನ್ನು ಒದಗಿಸಿದರೂ ಜನರಿಗೆ ತಲುಪಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಮಾಡಿ ದುಷ್ಟರ ಸಂಹಾರಕ್ಕೆ ಇಲ್ಲಿಗೆ ಬಂದಿದ್ದೇನೆಬಿ.ವೀರಪ್ಪ ಉಪಲೋಕಾಯುಕ್ತ ನ್ಯಾಯಮೂರ್ತಿ
ಫೋನ್ ಪೇನಲ್ಲಿ ವಹಿವಾಟು ಪರಿಶೀಲನೆ
ವಿವಿಧೆಡೆ ಕೆಲಸ ಮಾಡುವ ಸಿಬ್ಬಂದಿ ಮೊಬೈಲ್ ಪಡೆದುಕೊಂಡ ಲೋಕಾಯುಕ್ತ ಅಧಿಕಾರಿಗಳು ಹಣದ ವಹಿವಾಟು ಪರಿಶೀಲಿಸಿದರು. ಇದರಲ್ಲಿಯೂ ಕೆಲ ಸಿಬ್ಬಂದಿ ಚಾಣಾಕ್ಷತನ ತೋರಿ ‘ಫೋನ್ ಪೇ’ ಆ್ಯಪ್ ಮೊಬೈಲ್‌ನಿಂದ ತೆಗೆದು ಹಾಕಿದ್ದರೆ ಇನ್ನೂ ಕೆಲವರು ಕೀ ಪ್ಯಾಡ್ ಮೊಬೈಲ್ ಬಳಕೆ ಮಾಡಿದ ಚಿತ್ರಣ ಕಂಡುಬಂದಿತು. ನಗರಸಭೆ ಅವ್ಯವಸ್ಥೆಗೆ ಗರಂ ಆದ ಬಿ.ವೀರಪ್ಪ ‘ತಪ್ಪಿತಸ್ಥರನ್ನೇ ಹೊಣೆ ಮಾಡಿ ಪ್ರಕರಣ ದಾಖಲಿಸಲಾಗುತ್ತದೆ. ಇಲ್ಲಿನ ಪ್ರಮುಖ ಅಧಿಕಾರಿಗಳ ಒಂದು ವರ್ಷ ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ ನೀಡಬೇಕು. ಎಲ್ಲಿಯೇ ವರ್ಗಾವಣೆಯಾದರೂ ಕ್ರಮ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ಆಸ್ಪತ್ರೆಗೆ ದಾಖಲಿಸಿ
ನಾಪತ್ತೆಯಾದ ಕುಟುಂಬಸ್ಥರು ಗಂಗಾವತಿಯ ಪಂಪಾನಗರದ ಹನುಮಂತಮ್ಮ ಅವರಿಗೆ ಕಾಲುಗಳಲ್ಲಿ ನಿಶ್ಯಕ್ತಿಯಾಗಿದ್ದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಸಹೋದರ ವಿಜಯ್ ಬಳಿಕ ನಾಪತ್ತೆಯಾಗಿರುವ ಪ್ರಸಂಗ ಉಪಲೋಕಾಯುಕ್ತರ ಭೇಟಿ ವೇಳೆ ಬಹಿರಂಗವಾಗಿದೆ. ಅವರ ಮುಂದೆ ನೋವು ತೋಡಿಕೊಂಡ ಹನುಮಂತಮ್ಮ‘ತಂದೆ ಹಾಗೂ ತಾಯಿ ತೀರಿಕೊಂಡಿದ್ದಾರೆ. ಗಂಗಾವತಿ ತವರು ಮನೆ ಗದಗ ಜಿಲ್ಲೆ ಗಂಡನ ಮನೆ. ಸಹೋದರ ವಿಜಯ್ ಬಂದು ಅಡ್ಮಿಟ್ ಮಾಡಿ ಹೋದವರು ಬಂದಿಲ್ಲ. ಅವರ ಫೋನ್ ಸಂಖ್ಯೆ ಕೂಡ ಇಲ್ಲ. ಮೂರು ವರ್ಷದ ಮಗುವನ್ನು ಓಣಿಯಲ್ಲಿ ಬಿಟ್ಟು ಬಂದಿದ್ದೇನೆ’ ಎಂದು ಕಣ್ಣೀರಾದರು. ಆಗ ಬಿ.ವೀರಪ್ಪ ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರಿಗೆ ನೊಂದ ಮಹಿಳೆಯ ಕುಟುಂಬದವರನ್ನು ಪತ್ತೆ ಹಚ್ಚಿಸುವಂತೆ ಸೂಚಿಸಿ ಉತ್ತಮ ಚಿಕಿತ್ಸೆ ನೀಡಿ ಎಂದು ವೈದ್ಯರಿಗೆ ನಿರ್ದೇಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.