
ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಮುತ್ತಣ್ಣ ತಮ್ಮ ಹೊಲ ಕಪ್ಪು ಕಣಗಳಿಂದ ಮುಚ್ಚಿರುವುದನ್ನು ತೋರಿಸಿದರು
–ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಪರಿಸರಕ್ಕೆ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆಗೆ ಅವಕಾಶ ಕೊಡಬಾರದು ಎಂದು ಒಂದೆಡೆ ಬಲ್ಡೋಟಾ ಆರಂಭಕ್ಕೆ ಅವಕಾಶ ಕೊಡಬೇಕು ಎಂದು ಮತ್ತೊಂದೆಡೆ ಕೊಪ್ಪಳದಲ್ಲಿ ಪ್ರತ್ಯೇಕವಾಗಿ ಅನಿರ್ದಿಷ್ಟ ಹೋರಾಟಗಳು ನಡೆಯುತ್ತಿವೆ. ಕಾರ್ಖಾನೆಗಳ ಸ್ಥಾಪನೆ ವಿರೋಧಿ ಹೋರಾಟಕ್ಕೆ ಶುಕ್ರವಾರ (ಡಿ. 19) 50 ದಿನಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಗಳ ಬಾಧಿತ ಗ್ರಾಮಗಳಲ್ಲಿರುವ ಪರಿಸ್ಥಿತಿ ಬಗ್ಗೆ ‘ಪ್ರಜಾವಾಣಿ’ ಸಿದ್ಧಪಡಿಸಿದ ಸಾಕ್ಷಾತ್ ವರದಿ ಇಲ್ಲಿದೆ.
ಕೊಪ್ಪಳ: ಜಿಲ್ಲಾಕೇಂದ್ರದಲ್ಲಿ ಆರೇಳು ಕಿ.ಮೀ. ದೂರದಲ್ಲಿರುವ ಹಾಲವರ್ತಿ ಗ್ರಾಮದ ಹೊರವಲಯದ ಫಲವತ್ತಾದ ಮಸಾರಿ ನೀರಾವರಿ ಭೂಮಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ಆ ಯುವಕನ ಕೈ, ಕಾಲು, ಮುಖ ಕಪ್ಪಾಗಿತ್ತು. ಹೆಸರು, ಅಲಸಂದಿ ಬಿತ್ತನೆ ಮಾಡಿದ್ದ ಬೆಳೆಗಳ ಮೇಲೆ ಕಪ್ಪಿನ ಕಣಗಳು ಅಡರಿದ್ದವು. ಪಕ್ಕದಲ್ಲಿಯೇ ಇದ್ದ ಮನೆ, ಮನೆಯೊಳಗಿನ ಸಾಮಗ್ರಿಗಳು, ಬೇಸರ ಕಳೆಯಲು ಮನೆಯ ಮುಂದೆ ನಿರ್ಮಿಸಿಕೊಂಡ ಕಟ್ಟೆ ಎಲ್ಲವೂ ಕಪ್ಪು.
ಆ ಯುವಕನ ಮನೆ ಹಾಗೂ ಹೊಲದ ಸುತ್ತಲಿರುವ ಕಾರ್ಖಾನೆಗಳು ಸದ್ದಿನೊಂದಿಗೆ ಹೊರಸೂಸುತ್ತಿದ್ದ ಕಪ್ಪು ದೂಳಿನ ಕಣಗಳು ದಾರಿ ಹೋಕರ ಮೇಲೂ ಸದ್ದಿಲ್ಲದೆ ಎರಗುತ್ತಿದ್ದವು. ಬಿಇ ಮೆಕಾನಿಕಲ್ ಎಂಜಿನಿಯರಿಂಗ್ ಓದಿರುವ ಹಾಲವರ್ತಿ ಗ್ರಾಮದ ಮುತ್ತಪ್ಪ ಎನ್ನುವ ಆ ಯುವಕನಿಗೆ ಯಾರಿಗೂ ಜಮೀನು ಬಿಟ್ಟುಕೊಡುವ ಮನಸ್ಸಿಲ್ಲ. ಕುಟುಂಬದ ಆರೈಕೆ ಜೊತೆಗೆ ಕಪ್ಪಿನ ಕಣಗಳ ಅಪಾಯಕಾರಿ ಮಾಲಿನ್ಯದ ನಡುವೆಯೇ ಕಡಿಮೆ ನಷ್ಟದಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡಿದ್ದಾನೆ. ಮಸಾರಿ ಭೂಮಿಯಲ್ಲಿ ಹೇರಳ ಫಸಲು ತೆಗೆಯಬಹುದಾದರೂ ಕಾರ್ಖಾನೆಗಳ ವ್ಯಾಪಕ ಮಾಲಿನ್ಯದಿಂದ ಫಸಲು ಬಂದರೂ ಅದರಲ್ಲಿ ಶೇ. 50ರಷ್ಟು ಮಾರಾಟ ಮಾಡಲು ಯೋಗ್ಯವಿಲ್ಲದಂತೆ ಆಗುತ್ತದೆ.
ಕೊಪ್ಪಳದ ನಗರಸಭೆ ಸಮೀಪದಲ್ಲಿ ಎಳೆನೀರು ಮಾರಾಟ ಮಾಡುವ ಪ್ರಮೀಳಾ ಎನ್ನುವ ಮಹಿಳೆ ತಮ್ಮ ಮಗಳನ್ನು ತಾಲ್ಲೂಕಿನ ಕಾಸನಕಂಡಿ ಗ್ರಾಮಕ್ಕೆ ವಿವಾಹ ಮಾಡಿಕೊಟ್ಟಿದ್ದು, ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆ ಮಕ್ಕಳು ಮೇಲಿಂದ ಮೇಲೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ಹೋಗಬೇಕಾಗಿದ್ದರಿಂದ ಬೇಸತ್ತ ಅಜ್ಜಿ (ಪ್ರಮೀಳಾ) ಮಗಳನ್ನು ಕಾರ್ಖಾನೆ ಬಾಧಿತ ಗ್ರಾಮವಾದ ಕಾಸನಕಂಡಿಗೆ ಕಳುಹಿಸದೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತ ಮಗಳು ಹಾಗೂ ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಾಳೆ.
ಇವು ಕೆಲವು ಉದಾಹರಣೆಗಳಷ್ಟೇ. ಕೈಗಾರಿಕೆಗಳು ಕೇಂದ್ರೀಕೃತವಾಗಿರುವ ತಾಲ್ಲೂಕಿನ ಗಿಣಿಗೇರಿ, ಕನಕಾಪುರ, ಅಲ್ಲಾನಗರ, ಬೇವಿನಹಳ್ಳಿ, ಹಿರೇಬಗನಾಳ, ಕುಣಿಕೇರಿ, ಹಾಲವರ್ತಿ, ಹಿರೇಕಾಸನಕಂಡಿ, ಬೆಳವಿನಾಳ ಹೀಗೆ 20ಕ್ಕೂ ಹೆಚ್ಚು ಗ್ರಾಮಗಳು ಕಾರ್ಖಾನೆಗಳ ಮಾಲಿನ್ಯದಿಂದ ಅಕ್ಷರಶಃ ನಲುಗಿ ಹೋಗಿವೆ. ಮಾಸಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಸುದ ಮಧ್ಯಮ ಮತ್ತು ಬೃಹತ್ ಕಾರ್ಖಾನೆಗಳಿಗೆ ಎರಡ್ಮೂರು ದಶಕಗಳಲ್ಲಿ ಭೂಮಿ ನೀಡಿದ ರೈತರೇ ಈಗ ಪರಿತಪಿಸುವಂತಾಗಿದೆ. ಈಗ ವಿಸ್ತರಣೆಗೆ ಮುಂದಾಗಿರುವ ಕಾರ್ಖಾನೆಗಳಿಗೆ ಭೂಮಿ ಕೊಟ್ಟ ರೈತರದ್ದೂ ಗಂಟಲಲ್ಲಿ ತುತ್ತು ಸಿಲುಕಿದ ಅನುಭವ.
ಮಾಲಿನ್ಯವಾಗುತ್ತದೆ ಎನ್ನುವುದು ಕಾರ್ಖಾನೆಗಳ ಆಡಳಿತ ಮಂಡಳಿಗೆ ಗೊತ್ತಿದ್ದರಿಂದಲೇ ಕಾರ್ಖಾನೆಯಿಂದ ಎಷ್ಟು ದೂರದಲ್ಲಿ ಕೃಷಿ ಚಟುವಟಿಕೆ ಮಾಡಲಾಗುತ್ತಿದೆ ಎನ್ನುವ ಆಧಾರದ ಮೇಲೆ ಒಂದಷ್ಟು ಸಮಾಧಾನಕರ ಪರಿಹಾರ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ‘ಕಾರ್ಖಾನೆಗಳ ಹಬ್’ ಆಗಿರುವ ಕೊಪ್ಪಳ–ಹೊಸಪೇಟೆಗೆ ತೆರಳುವ ಮಾರ್ಗದ ಹಳ್ಳಿಗಳಲ್ಲಿ ಮಾಲಿನ್ಯದಿಂದಾಗಿ ಜನ, ಜಾನುವಾರು ಹಾಗೂ ಕೃಷಿ ಚಟುವಟಿಕೆ ಮೇಲೆ ವ್ಯಾಪಕ ಪರಿಣಾಮ ಬೀರಿದೆ ಎನ್ನುವುದು ರೈತರ ನೋವು.
‘ನಮ್ಮೂರಿನ ಸಮೀಪದ ಕಾರ್ಖಾನೆಯ ದೂಳು ಜಿಲ್ಲಾಧಿಕಾರಿ ಕಚೇರಿ ತನಕವೂ ಹರಡುತ್ತದೆ. ಬಹುತೇಕ ಎಲ್ಲ ಕಾರ್ಖಾನೆಗಳು ರಾತ್ರಿ ಪ್ರಮಾಣದಲ್ಲಿಯೇ ಉತ್ಪಾದನೆ ಹೆಚ್ಚಿಸುತ್ತವೆ. ವಿದ್ಯುತ್ ಉಳಿಸುವ ಸಲುವಾಗಿ ಕಪ್ಪುಕಣಗಳನ್ನು ಹೊರಗಡೆ ಬಿಡುತ್ತಾರೆ. ಫೋಟೊ ಅಥವಾ ವಿಡಿಯೊ ತೆಗೆದು ಸಂಬಂಧಿಸಿದ ಕಾರ್ಖಾನೆಗಳಿಗೆ ಕಳಿಸಿದರೆ ಆಗ ನೀರು ಸಿಂಪಡಿಸಿ ಸಮಾಧಾನಪಡಿಸುತ್ತಾರೆ. ಭೂಮಿ ಕೊಟ್ಟ ರೈತರು ಒಂದಷ್ಟು ವರ್ಷಗಳ ಹಿಂದೆ ಸಮೃದ್ಧವಾಗಿ ಬೆಳೆ ತೆಗೆದ ಭೂಮಿಯಲ್ಲಿ ಕೃಷಿಯ ಹಸಿರು ನೋಡುವ ಬದಲು ಕಾರ್ಖಾನೆಗಳ ಮಾಲಿನ್ಯದ ಕಪ್ಪು ನೋಡುವಂತಾಗಿದೆ’ ಎಂದು ಹಾಲವರ್ತಿಯ ಮುತ್ತಪ್ಪ ಹಾಗು ಬಾಧಿತ ಗ್ರಾಮಗಳ ಹಲವು ರೈತರು ಬೇಸರ ವ್ಯಕ್ತಪಡಿಸಿದರು.
ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿದ್ದೇವೆ ಎಂದು ಹೇಳುತ್ತಿರುವ ಕಾರ್ಖಾನೆಗಳು ಕೂಡ ಹೆಚ್ಚು ಮಾಲಿನ್ಯ ಮಾಡುತ್ತಿವೆ. ನಮ್ಮ ಹೊಲದ ಸುತ್ತಲು ಕೆಲ ಹೊತ್ತು ಇದ್ದರೆ ಉಗುಳು ಕೂಡ ಕಪ್ಪಾಗುತ್ತದೆ.ಮುತ್ತಪ್ಪ ಹಾಲವರ್ತಿ, ಗ್ರಾಮದ ರೈತ
ಮನೆಯಲ್ಲಿ ಒಪ್ಪೊತ್ತಿನ ಊಟ ಮಾಡಿಕೊಂಡಾದರೂ ಮಗಳು ಮೊಮ್ಮಕ್ಕಳು ಕಣ್ಣಮುಂದೆಯೇ ಇರಲಿ. ಮಾಲಿನ್ಯ ವ್ಯಾಪಕವಾಗಿರುವ ಊರಿಗೆ ಹೋಗುವುದು ಮಾತ್ರ ಬೇಡಪ್ರಮೀಳಾ ಕೊಪ್ಪಳದ ನಿವಾಸಿ
ಮಾಲಿನ್ಯ ನಿಯಂತ್ರಣದ ಬಗ್ಗೆ ಮಂಡಳಿಯಲ್ಲಿ ಅಧ್ಯಯನ ವರದಿಯ ಸಮಾಲೋಚನೆ ನಡೆಯುತ್ತಿದೆ. ಬಳಿಕ ಕೇಂದ್ರ ಕಚೇರಿಯಿಂದ ಬರುವ ನಿರ್ದೇಶನದ ಅನ್ವಯ ಕ್ರಮ ವಹಿಸಲಾಗುವುದು.ವೈ.ಎಸ್. ಹರಿಶಂಕರ ಜಿಲ್ಲಾ ಪರಿಸರ ಅಧಿಕಾರಿ
ಕಾರ್ಖಾನೆಗಳ ವಿಸ್ತರಣೆಗೆ ವಿರೋಧ; ಹೋರಾಟಗಾರರ ಬೇಡಿಕೆಗಳೇನು?
ರಾಜ್ಯದ ಮುಖ್ಯಮಂತ್ರಿ ಆರೋಗ್ಯ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಖಾನೆಗಳಿಂದ ಬಾಧಿತ ಪ್ರದೇಶದ ಹಳ್ಳಿಗಳ ಜನರ ಅಹವಾಲು ಮುಕ್ತವಾಗಿ ಆಲಿಸಬೇಕು.
ಬಲ್ಡೋಟಾ ಕಿರ್ಲೋಸ್ಕರ್ ಕಲ್ಯಾಣಿ ಸ್ಟೀಲ್ ಮುಕುಂದ ಸುಮಿ ಎಕ್ಸ್ ಇಂಡಿಯಾ ಕಾರ್ಖಾನೆಗಳು ವಿಸ್ತರಣೆ ಮಾಡಬಾರದು. ಯಾವುದೇ ಹೊಸ ಕಾರ್ಖಾನೆಗಳ ಸ್ಥಾಪನೆಗೆ ಅವಕಾಶ ಕೊಡಬಾರದು.
ಕಾರ್ಖಾನೆಗಳ ಮಾಲಿನ್ಯದಿಂದ ಬೆಳೆ ಹಾಳಾಗುತ್ತಿದ್ದು ಹೊಗೆ ಸೂರಿದ ಸೊಪ್ಪೆ ತಿಂದ ದನ ಕರುಗಳು ಅತಿ ಸಾರದಿಂದ ಸಾಯುತ್ತಿವೆ. ಇದನ್ನು ತಡೆಗಟ್ಟಬೇಕು.
ಕಾರ್ಖಾನೆಗಳ ಮಾಲಿನ್ಯದಿಂದ ಬಾಧಿತವಾದ ಗ್ರಾಮಗಳಲ್ಲಿ ವಿಜ್ಞಾನಿಗಳಿಂದ ಪರಿಸರದ ಅಧ್ಯಯನ ಮಾಡಿಸಬೇಕು. ಈ ಅಧ್ಯಯನ ತಂಡದಲ್ಲಿ ಗ್ರಾಮಗಳ ಪ್ರತಿನಿಧಿಗಳು ಹೋರಾಟದ ಮುಖಂಡರು ಹಾಗೂ ಜನಪ್ರತಿನಿಧಿಗಳು ಭಾಗಿಯಾಗಬೇಕು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಬಾಧಿತ ಗ್ರಾಮಗಳ ಜನರ ಆರೋಗ್ಯ ತಪಾಸಣೆ ಆಗಬೇಕು. ಬಾಧಿತರಿಗೆ ಸರ್ಕಾರದಿಂದಲೇ ಉತ್ತಮ ಚಿಕಿತ್ಸೆಯ ವ್ಯವಸ್ಥೆಯಾಗಬೇಕು.
ತುಂಗಭದ್ರಾ ನದಿಯ ಹಿನ್ನೀರಿನ ಸಮೀಪ ಬಹಳಷ್ಟು ಕಾರ್ಖಾನೆಗಳಿದ್ದು ಮಾಲಿನ್ಯದ ನೀರನ್ನು ಸಂಸ್ಕರಿಸದೆ ನದಿಗೆ ಬಿಡುವುದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.