ಹನುಮಸಾಗರ ಸಮೀಪದ ಕಬ್ಬರಗಿ ಗ್ರಾಮದ ಕಪಿಲತೀರ್ಥ ಜಲಪಾತದಲ್ಲಿ ನೀರು ಧುಮ್ಮುಕ್ಕಿತ್ತಿರುವ
ಸಂಗ್ರಹ ಚಿತ್ರ
ಕೊಪ್ಪಳ: ಜೋರು ಮಳೆ ಬಂದಾಗ ರಮಣೀಯ ದೃಶ್ಯದ ಮೂಲಕ ಜನರನ್ನು ಆಕರ್ಷಿಸುವ ‘ಮಳೆಗಾಲ’ದ ಜಿಲ್ಲೆಯ ಏಕೈಕ ಜಲಪಾತ ಕಪಿಲತೀರ್ಥಕ್ಕೆ (ಕಪಿಲೆಪ್ಪ) ಈಗ ಅಭಿವೃದ್ಧಿಯ ಭಾಗ್ಯ ಲಭಿಸಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಲುವಾಗಿ ಅರಣ್ಯ ಇಲಾಖೆಯ ಮೂಲಕ ಜಲಪಾತದ ಸುತ್ತಲಿನ ಸ್ಥಳವನ್ನು ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.
ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಸಮೀಪದ ಕಬ್ಬರಗಿ ಗ್ರಾಮದ ಬಳಿ ಇರುವ ಕಪಿಲತೀರ್ಥ ಜಿಲ್ಲೆಯ ಏಕೈಕ ಜಲಪಾತವೆನಿಸಿದೆ. ಜೋರು ಮಳೆಬಂದಾಗ ಧುಮ್ಮಿಕ್ಕುವ ಮನಮೋಹಕ ದೃಶ್ಯ ಜನರ ಖುಷಿಗೆ ಕಾರಣವಾಗುತ್ತದೆ. ಮಳೆಗಾಲದ ಸಮಯದಲ್ಲಿ ಈ ಜಲಪಾತ ಮತ್ತು ಸುತ್ತಮುತ್ತಲಿನ ವಾತಾವರಣದ ಸೌಂದರ್ಯ ಕಣ್ತುಂಬಿಕೊಳ್ಳಲು ಜಿಲ್ಲೆ ಹಾಗೂ ನೆರೆ ಜಿಲ್ಲೆಗಳ ಜನ ಬರುವುದು ಸಾಮಾನ್ಯವಾಗಿರುತ್ತದೆ. ಅನೇಕರು ದೈನಂದಿನ ಬದುಕಿನ ಒತ್ತಡವನ್ನೂ ಈ ತಾಣದಲ್ಲಿ ಕಡಿಮೆ ಮಾಡಿಕೊಳ್ಳುತ್ತಾರೆ.
ಆದ್ದರಿಂದ 2025–26ರ ಸಾಲಿನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಯೋಜನೆಯಡಿ ₹1 ಕೋಟಿ ಮೊತ್ತದಲ್ಲಿ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿ ನಡೆಸಲು ಟೆಂಡರ್ ಕರೆಯಲಾಗಿದೆ.
ಜಲಪಾತದ ಪ್ರದೇಶ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿರುವ ಕಾರಣ ಇದೇ ಇಲಾಖೆಗೆ ಅನುದಾನ ಒದಗಿಸಲಾಗಿದೆ. ಜಲಪಾತದ ಬಳಿ ಬರುವ ಪ್ರವಾಸಿಗರಿಗೆ ಚೈನ್ ಲಿಂಕ್ ಸೌಲಭ್ಯದ ಮೂಲಕ ರಕ್ಷಣೆ ಒದಗಿಸಲು ಕ್ರಮ, ಸ್ವಾಗತ ಕಮಾನು, ಟಿಕೆಟ್ ಕೌಂಟರ್, ಭದ್ರತಾ ಸಿಬ್ಬಂದಿ ಕೊಠಡಿ, ಪುರುಷರ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಬಟ್ಟೆ ಬದಲಾಯಿಸುವ ಕೊಠಡಿಗಳು, ಜಲಪಾತಕ್ಕೆ ತೆರಳುವ ಮಾರ್ಗದಲ್ಲಿ ಪಾದಚಾರಿ ದಾರಿ, ಕಸದ ಬುಟ್ಟಿಗಳು, ವಿದ್ಯುತ್ ಸೌಲಭ್ಯ, ಜಲಪಾತದ ದಡದಲ್ಲಿ ಪ್ರವಾಸಿಗರು ವಿರಮಿಸಲು ವಿಶ್ರಾಂತಿ ಸ್ಥಳ, ಕುಡಿಯುವ ಶುದ್ಧ ನೀರಿನ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.
ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ: ಜಿಲ್ಲೆಯ ಪ್ರವಾಸೋದ್ಯಮದ ’ಹಾಟ್‌ಸ್ಪಾಟ್’ ಎನಿಸಿರುವ ಆನೆಗೊಂದಿ, ಸಾಣಾಪುರ, ಕನಕಗಿರಿ, ಕೊಪ್ಪಳ ಸೇರಿದಂತೆ ವಿವಿಧೆಡೆ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ. ಅಂಜನಾದ್ರಿಯನ್ನು ಮಾದರಿ ಕ್ಷೇತ್ರವಾಗಿ ಮಾಡಲು ಕೆಲಸಗಳು ಕೂಡ ನಡೆಯುತ್ತಿವೆ. ಈ ಕಾರ್ಯಗಳು ಚುರುಕು ಪಡೆದುಕೊಂಡರೆ ಕೊಪ್ಪಳ ಜಿಲ್ಲೆ ರಾಜ್ಯದ ಪ್ರವಾಸೋದ್ಯಮದ ಹಬ್ ಆಗಿ ಬೆಳೆಯುತ್ತದೆ.
ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಒಂದಷ್ಟು ಸ್ಥಳಗಳನ್ನು ಗುರುತಿಸಲಾಗಿದ್ದು ಕಪಿಲತೀರ್ಥ ಜಲಪಾತದ ಸುತ್ತಲಿನ ಪ್ರದೇಶದ ಅಭಿವೃದ್ಧಿ ಅರಣ್ಯ ಇಲಾಖೆಯಿಂದ ನಡೆಯಲಿದೆಡಿ. ನಾಗರಾಜ್ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.