ADVERTISEMENT

ಕೊಪ್ಪಳ ನಗರಸಭೆ ಚುನಾವಣೆ: ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಬ್ಯಾಟಿಂಗ್‌

ಶಿವಗಂಗಾ ಅಧ್ಯಕ್ಷೆ, ಆಯಿಷಾ ಉಪಾಧ್ಯಕ್ಷೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2022, 13:49 IST
Last Updated 2 ಜೂನ್ 2022, 13:49 IST
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು, ಹೊಸ ಪದಾಧಿಕಾರಿಗಳ ಬೆಂಬಲಿಗರ ಸಂಭ್ರಮ
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು, ಹೊಸ ಪದಾಧಿಕಾರಿಗಳ ಬೆಂಬಲಿಗರ ಸಂಭ್ರಮ   

ಕೊಪ್ಪಳ: ಇಲ್ಲಿನ ನಗರಸಭೆಗೆ ಉಳಿದ ಹತ್ತು ತಿಂಗಳ ಅವಧಿಗೆ ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 29ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಅಧ್ಯಕ್ಷೆಯಾಗಿ ಹಾಗೂ 19ನೇ ವಾರ್ಡ್‌ನ ಜೆಡಿಎಸ್‌ನ ಆಯಿಷಾ ರುಬಿನಾ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 31 ಸದಸ್ಯರ ಬಲದಲ್ಲಿ 15 ಜನ ಕಾಂಗ್ರೆಸ್‌, 10 ಜನ ಬಿಜೆಪಿ, ಇಬ್ಬರು ಜೆಡಿಎಸ್‌, ಮೂವರು ಪಕ್ಷೇತರರು ಮತ್ತು ಒಬ್ಬರು ವೆಲ್‌ಫೇರ್‌ ಪಕ್ಷದ ಸದಸ್ಯರು ಇದ್ದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿತ್ತು.

ಬೆಳಿಗ್ಗೆ ಚುನಾವಣಾ ಪ್ರಕ್ರಿಯೆ ಆರಂಭವಾದಾಗ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ತಲಾ ಒಬ್ಬರು ಅಭ್ಯರ್ಥಿಗಳಷ್ಟೇ ನಾಮಪತ್ರ ಸಲ್ಲಿಸಿದ್ದರು. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಅಭ್ಯರ್ಥಿಯನ್ನೂ ಕಣಕ್ಕಿಳಿಸಲಿಲ್ಲ. ಹೀಗಾಗಿ ಕಾಂಗ್ರೆಸ್‌–ಜೆಡಿಎಸ್‌ ಯಾವ ಎದುರಾಳಿಯೂ ಇಲ್ಲದೆ ಸರಾಗವಾಗಿ ಗೆಲುವಿನ ಕೇಕೆ ಹಾಕಿತು.

ADVERTISEMENT

ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು, ಹೊಸ ಪದಾಧಿಕಾರಿಗಳ ಬೆಂಬಲಿಗರು ಕುಣಿದು, ಬಣ್ಣ ಎರಚಿ ಸಂಭ್ರಮಿಸಿದರು. ಅಶೋಕ ಸರ್ಕಲ್ ಮಾರ್ಗವಾಗಿ ಮೆರವಣಿಗೆ ಮಾಡಿದರು.

ಗೋವಾದಿಂದ ಬಂದರು: ಚುನಾವಣೆಯಲ್ಲಿ ಪಕ್ಷದ ಸದಸ್ಯರನ್ನು ಬೇರೆಯವರು ಸೆಳೆಯಬಹುದು ಎನ್ನುವ ಆತಂಕದಿಂದಾಗಿ ಕಾಂಗ್ರೆಸ್‌ನ ಹಲವು ಸದಸ್ಯರು ಗೋವಾ ಪ್ರವಾಸಕ್ಕೆ ಹೋಗಿದ್ದರು. ಗದಗದಲ್ಲಿ ಒಟ್ಟಿಗೆ ಸೇರಿ ಕೊಪ್ಪಳಕ್ಕೆ ಬಂದು ಚುನಾವಣೆ ಎದುರಿಸಿದರು.

ನಗರದಲ್ಲಿ ನೂರಾರು ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳ ಈ ಪ್ರವಾಸ ಸಾರ್ವಜನಿಕ ವಲಯದಲ್ಲಿ ಟೀಕೆಗೂ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.