
ಆಸ್ತಿ ನೋಂದಣಿ
ಕೊಪ್ಪಳ: ಇಲ್ಲಿನ ನಗರಸಭೆ ವಾರ್ಡ್‌ಗಳಲ್ಲಿನ ಆಸ್ತಿಗಳನ್ನು ಇ ಖಾತಾ ತಂತ್ರಾಂಶದಲ್ಲಿ ನೋಂದಣಿ ಜನರಿಗೆ ಸುಲಭವಾಗಿಸಲು ಇಲ್ಲಿನ ನಗರಸಭೆ ವಾರ್ಡ್‌ವಾರು ಶಿಬಿರ ಆಯೋಜಿಸಲು ಮುಂದಾಗಿದೆ. ಪ್ರತಿ ಸೋಮವಾರ ಈ ಕಾರ್ಯಕ್ರಮ ನಡೆಸಲು ಮೊದಲ ಹಂತದ ವೇಳಾಪಟ್ಟಿ ರೂಪಿಸಿದೆ.
ಹಿಂದೆ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನಗರದ ಎಂಟು ಕಡೆ ಶಿಬಿರಗಳನ್ನು ಆಯೋಜಿಸಲಾಗಿತ್ತು. ಇತ್ತೀಚೆಗೆ ನಗರಸಭೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಅವರು ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೊದಲ ಸಭೆಯಲ್ಲಿ ಚರ್ಚೆ ನಡೆದಿದ್ದು ಆಸ್ತಿ ನೋಂದಣಿ ಸುಲಭವಾಗಿಸಲು ಆಂದೋಲನ ನಡೆಸಲು ತೀರ್ಮಾನಿಸಲಾಗಿದೆ.
ನಗರದ ಸಾರ್ವಜನಿಕರು ಆಯಾ ದಿನಾಂಕದಿಂದ ನಿಗದಿತ ಸ್ಥಳಗಳಿಗೆ ತೆರಳಿ ತಮ್ಮ ಆಸ್ತಿಗೆ ಸಂಬಂಧಿಸಿದ ನೋಂದಾಯಿತ ಖರೀದಿ ಪತ್ರ, ಹಕ್ಕುಪತ್ರ, ಖಾತಾ ನೋಂದಣಿ ಅಥವಾ ಬದಲಾವಣೆ ಪ್ರತಿ, 2025-26ನೇ ಸಾಲಿನ ಆಸ್ತಿ ಕರ ಪಾವತಿಸಿದ ರಸೀದಿ, ನಳದ ತೆರಿಗೆ ಪಾವತಿಯ ಪ್ರತಿ, ಆಸ್ತಿ ಮಾಲೀಕರ ಮತದಾರರ ಗುರುತಿನ ಚೀಟಿ, ಪ್ಯಾನ್, ಡಿ.ಎಲ್ ಅಥವಾ ಪಡಿತರ ಚೀಟಿ, ಆಸ್ತಿ ಮಾಲೀಕರ-ಭಾವಚಿತ್ರ, ಆಸ್ತಿಯ ಭಾವಚಿತ್ರ, ಎನ್.ಎ ಆದೇಶ ಪ್ರತಿ, ಅನುಮೋದಿತ ಲೇಔಟ್ ಪ್ರತಿ ಹೀಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದರೆ ಇ-ಆಸ್ತಿ ತಂತ್ರಾಂಶದಲ್ಲಿ ಕಾನೂನಾತ್ಮಕವಾಗಿ ಇರುವವರಿಗೆ ಸುಲಭವಾಗಿ ನಮೂನೆ-3 ಸಿಗಲಿದೆ.
ಪ್ರಸ್ತುತ ಕಾನೂನುಬದ್ಧವಾಗಿಯೇ ಇದ್ದ ಆಸ್ತಿ ದಾಖಲೆಗಳನ್ನು ಪಡೆದುಕೊಳ್ಳಲು ಜನ ನಿತ್ಯ ನಗರಸಭೆ ಅಲೆದಾಡಬೇಕಾದ ಪರಿಸ್ಥಿತಿಯಿದೆ. ಆಸ್ತಿಗಳ ಮಾಲೀಕರು ಬಂದರೆ ನಗರಸಭೆ ಸಿಬ್ಬಂದಿ ಇರುತ್ತಿರಲಿಲ್ಲ. ಸಿಬ್ಬಂದಿ ಇದ್ದಾಗ ಕಚೇರಿಗೆ ಬರಲು ಸಾರ್ವಜನಿಕರಿಗೆ ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಜನರಿಗೆ ತಮ್ಮ ಆಸ್ತಿಯ ದಾಖಲೆ ಪಡೆದುಕೊಳ್ಳಲು ತಿಂಗಳಾನುಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿಯಿತ್ತು. ಶಿಬಿರದ ಆಯೋಜನೆಯಿಂದಾಗಿ ಜನರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.