
ಕೊಪ್ಪಳ: ಉತ್ತಮ ಬೆಲೆ ಲಭಿಸದೆ ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಅನುಕೂಲ ಕಲ್ಪಿಸಲು ಸರ್ಕಾರ ಆರಂಭಿಸಿರುವ ಖರೀದಿ ಕೇಂದ್ರಗಳ ಕಠಿಣ ಮಾನದಂಡಗಳು ಜಿಲ್ಲೆಯ ಭತ್ತ ಬೆಳೆಗಾರರಿಗೆ ಕಂಟಕವಾಗಿ ಪರಿಣಮಿಸಿವೆ. ಹೀಗಾಗಿ ಖರೀದಿ ಕೇಂದ್ರಗಳು ಆರಂಭವಾಗಿ ತಿಂಗಳಾದರೂ ರೈತರಿಗೆ ಹೆಚ್ಚು ಪ್ರಯೋಜನವಾಗಿಲ್ಲ.
2025-26ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಭತ್ತ ಸಾಮಾನ್ಯ ₹2,369, ಭತ್ತ ಗ್ರೇಡ್-ಎ ₹2389 ದರ ನಿಗದಿಪಡಿಸಲಾಗಿದೆ. ಜಿಲ್ಲೆಯಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಖರೀದಿ ಏಜೆನ್ಸಿಯಾಗಿದ್ದು ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ಅ. 31ರ ವರೆಗೆ ರೈತರ ನೋಂದಣಿ ಕಾರ್ಯ ನಡೆದಿದ್ದು, ಪ್ರತಿ ರೈತರಿಂದ ಪ್ರತಿ ಎಕರೆಗೆ 25 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್ ಖರೀದಿಗೆ ಅವಕಾಶವಿದೆ.
ಆದರೆ ಗ್ರೇಡ್‌ಗಳಿಗೆ ಅನುಗುಣವಾಗಿ ಭತ್ತ ಇರಬೇಕು, ನೋಂದಣಿ ಮಾಡಿಕೊಳ್ಳಬೇಕು, ಎಫ್‌ಎಕ್ಯೂ ಗುಣಮಟ್ಟಕ್ಕೆ ಅನುಗುಣವಾಗಿರಬೇಕು, ಖರೀದಿ ಮಿತಿ ಹೇರಿಕೆ, ಸಂಸ್ಕರಣೆ, ಭತ್ತ ಮಾರಾಟವಾದ ಬಳಿಕ ಹಣ ಬರುವ ತನಕ ಕಾಯುವುದು ಹೀಗೆ ಹಲವು ಮಾನದಂಡಗಳ ಕಾರಣಗಳಿಂದಾಗಿ ರೈತರು ಖರೀದಿ ಕೇಂದ್ರಗಳ ಗೊಡವೆಗೆ ಹೋಗುತ್ತಿಲ್ಲ.
ಜಿಲ್ಲೆಯ ಗಂಗಾವತಿ, ಕೊಪ್ಪಳದ ಕೆಲಭಾಗ ಹಾಗೂ ಕಾರಟಗಿಯಲ್ಲಿ ಹೆಚ್ಚು ಭತ್ತ ಬೆಳೆಯಲಾಗುತ್ತಿದೆ. ಮಾರುಕಟ್ಟೆಯಲ್ಲಿ ಬೆಂಬಲ ಬೆಲೆಗಿಂತಲೂ ಹೆಚ್ಚು ಬೆಲೆ ಲಭಿಸುತ್ತಿರುವುದು ಮತ್ತು ರೈತರ ಅಗತ್ಯತೆಗಳು ಬೇರೆಯೇ ಇರುವ ಕಾರಣ ಖರೀದಿ ಕೇಂದ್ರಗಳು ಇದ್ದೂ ಇಲ್ಲದಂತಾಗಿವೆ.
ಇದರ ಜೊತೆಗೆ ಭತ್ತದ ಕೊಯ್ದು ಆದ ತಕ್ಷಣವೇ ಚೀಲಗಳಿಗೆ ತುಂಬಿ ಮಾರಾಟ ಮಾಡಿದರೆ ಬೆಲೆ ಕಡಿಮೆ ಸಿಗುತ್ತದೆ. ಕೆಲವು ದಿನ ಒಣಗಿಸಿ ಬಳಿಕ ಮಾರಿದರೆ ಉತ್ತಮ ಬೆಲೆ ಲಭಿಸುತ್ತದೆ. ವರ್ಷಪೂರ್ತಿ ಕೃಷಿ ಚಟುವಟಿಕೆ, ಗೊಬ್ಬರ ಖರೀದಿಸಲು ಕೈಗಡ ಸಾಲ ಮಾಡಿರುತ್ತಾರೆ. ಹೊರಗಡೆ ಮಾರಿದರೆ ತಕ್ಷಣವೇ ಹಣ ಸಿಗುತ್ತದೆ. ಖರೀದಿ ಕೇಂದ್ರದಲ್ಲಿ ಹಣ ತಡವಾಗಿ ಸಿಗುತ್ತದೆ, ಅವರ ಮಾನದಂಡಗಳನ್ನು ಪಾಲಿಸುತ್ತ ಹೋದರೆ ಬೆಲೆಯೂ ಕಡಿಮೆಯಾಗುತ್ತದೆ ಎಂದು ರೈತರು ಹೇಳುತ್ತಾರೆ.
ನಮ್ಮ ಭಾಗದಲ್ಲಿ ಭತ್ತ ಖರೀದಿ ಕೇಂದ್ರದಿಂದ ರೈತರಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಮಂಡ್ಯ ಮೈಸೂರು ಹಾಗೂ ಹಾಸನ ಭಾಗದಲ್ಲಿ ಹೆಚ್ಚು ಬೆಂಬಲ ಬೆಲೆ ಕೇಳುತ್ತಾರೆ. ಅಲ್ಲಿನ ಜನರಿಗೆ ಮಾತ್ರ ಕೇಂದ್ರಗಳ ಉಪಯೋಗ ಆಗುತ್ತದೆ.ಸಾವಿತ್ರಿ ಪುರುಷೋತ್ತಮ ಅಕ್ಕಿ ಗಿರಣಿ ಮಾಲೀಕರ ಸಂಘ ರಾಜ್ಯಾಧ್ಯಕ್ಷ
ರಾಜ್ಯದ ಭತ್ತ ಖರೀದಿ ಕೇಂದ್ರಗಳ ಮಾನದಂಡಗಳು ರೈತರಿಗೆ ಕಂಟಕವಾಗಿವೆ. ಬೆಂಬಲ ಬೆಲೆ ಜೊತೆಗೆ ತೆಲಂಗಾಣ ₹500 ಹೆಚ್ಚುವರಿಯಾಗಿ ನೀಡುತ್ತಿದ್ದು ಅದೇ ರೀತಿ ರಾಜ್ಯ ಸರ್ಕಾರವೂ ಹೆಚ್ಚುವರಿ ಹಣ ಕೊಡಲಿ.ವೆಂಕಟರಾವ್ ನಾಡಗೌಡ ಮಾಜಿ ಸಚಿವ
ಕೃಷಿ ಚಟುವಟಿಕೆ ಕೈಗೊಳ್ಳಲು ರಸಗೊಬ್ಬರದ ಅಂಗಡಿಯವರು ಹಾಗೂ ಹಲವರ ಬಳಿ ಕೈಗಡ ಸಾಲ ಪಡೆದಿರುತ್ತೇವೆ. ಫಸಲು ಬಂದ ತಕ್ಷಣವೇ ಮಾರಾಟ ಮಾಡಿ ಸಾಲ ವಾಪಸ್ ಕೊಡಬೇಕು. ಖರೀದಿ ಕೇಂದ್ರದ ಮಾನದಂಡಕ್ಕೆ ಅನುಗುಣವಾಗಿ ಮಾರಾಟ ಕಷ್ಟ.ಪಾಮಣ್ಣ ನಾಯಕ ಹೊಸಕೇರಿ ಗ್ರಾಮದ ರೈತ
ಭತ್ತಕ್ಕೆ ಪರ್ಯಾಯ ಬೆಳೆ ಬೆಳೆಯಲು ಸಲಹೆ
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಎರಡನೇ ಬೆಳೆಗೆ ನೀರಿಲ್ಲದೇ ಇರುವುದರಿಂದ ಭತ್ತಕ್ಕೆ ಪರ್ಯಾಯ ಕೆಲವು ಬೆಳೆ ಬೆಳೆಯಬೇಕು ಎಂದು ಕೊಪ್ಪಳ ಕೃಷಿ ಇಲಾಖೆ ಹಾಗೂ ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಉಳಿದಿರುವ ತೇವಾಂಶದಿಂದ ಹಸಿರೆಲೆ ಡಯಾಂಚಾ ಸೆಣಬು ಪಿಳ್ಳೆಪೆಸರು ಕಡಿಮೆ ನೀರಿರುವ ಪ್ರದೇಶದಲ್ಲಿ ಶೇಂಗಾ ಹೆಸರು ಉದ್ದು ಸೂರ್ಯಕಾಂತಿ ಅಲಸಂದಿ ಹಾಗೂ ಸಿರಿಧಾನ್ಯ ಬೆಳೆಯಬಹುದಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.