ADVERTISEMENT

ಕೊಪ್ಪಳ ಜನರಿಗೆ ದೂಳು ತಿನ್ನಿಸಲು ಜಪಾನ್‌ಗೆ ಹೋಗಿದ್ದೀರಾ: ಅಲ್ಲಮಪ್ರಭು ಬೆಟ್ಟದೂರು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 6:46 IST
Last Updated 14 ಸೆಪ್ಟೆಂಬರ್ 2025, 6:46 IST
ಕೊಪ್ಪಳದ ಅಶೋಕ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು
ಕೊಪ್ಪಳದ ಅಶೋಕ ವೃತ್ತದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು   

ಕೊಪ್ಪಳ: ಕಾರ್ಖಾನೆಗಳ ಕೇಂದ್ರೀಕರಣ ಹಾಗೂ ವಿಸ್ತೀರ್ಣ ವಿರೋಧಿಸಿ ನಗರದ ಅಶೋಕ ವೃತ್ತದಲ್ಲಿ ಶನಿವಾರ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯಿಂದ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ್ ಮಹಾವೀರ್ ಅಳ್ಳಳ್ಳಿ ಅವರ ಮೂಲಕ ಮನವಿ ಸಲ್ಲಿಸಲಾಯಿತು.

ಸಮಿತಿಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ‘ಜನ ಬಹು ದಿನಗಳಿಂದ ಕಾರ್ಖಾನೆಗಳ ಕೇಂದ್ರೀಕರಣ ಹಾಗೂ ವಿಸ್ತೀರ್ಣ ವಿರೋಧಿಸಿ ನಿರಂತರ ಹೋರಾಟದಲ್ಲಿ ತೊಡಗಿದ್ದಾರೆ. ಈ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರೊಂದಿಗೆ ಜಿಲ್ಲೆಯ ಹೋರಾಟಗಾರರ ನಿಯೋಗ ಮುಖ್ಯಮಂತ್ರಿ ಭೇಟಿ ನೀಡಿದಾಗ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರು. ಬಲ್ಡೋಟಾ ಬಿ.ಎಸ್.ಪಿ.ಎಲ್ ವಿಸ್ತರಣೆ ತಡೆದಿದ್ದಾರೆ. ಮುಖ್ಯಮಂತ್ರಿಗಳ ಈ ನಿರ್ಣಯವನ್ನು ಜಿಲ್ಲೆಯ ಜನ ಸ್ವಾಗತಿಸಿದ್ದರು. ಆದರೆ ಕೃಷ್ಣಾ ನದಿಗೆ ಬಾಗಿನ ಅರ್ಪಿಸಲು ಬಸಾಪುರ ವಿಮಾನ ನಿಲ್ದಾಣದಲ್ಲಿ ಇಲ್ಲಿನ ಜನರ ಹಾಗೂ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳ ಅಭಿಪ್ರಾಯವನ್ನು ಮನ್ನಿಸಿ ಜನರೊಂದಿಗೆ ನಾವಿರುತ್ತೇವೆ ಎಂದು ಹೇಳಿ, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡಿ ತೋರಿಸಿದ್ದರು. ಇತ್ತ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಜಪಾನ್ ದೇಶಕ್ಕೆ ಹೋಗಿ ಹಟಕ್ಕೆ ಬಿದ್ದವರಂತೆ ಪರಿಸರ ಹಾನಿ ಮಾಡುವ ಕಾರ್ಖಾನೆಗಳನ್ನು ಕೊಪ್ಪಳಕ್ಕೆ ತಂದೇ ತರುತ್ತೇನೆ ಎನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಇದರಿಂದ ಕೊಪ್ಪಳ ಜನರಲ್ಲಿ ಸರ್ಕಾರದ ನಡೆ ಕುರಿತು ಅಪನಂಬಿಕೆ ಉಂಟಾಗುತ್ತಿದೆ’ ಎಂದರು.

ಪರಿಸರ ಹಾನಿ ಮಾಡುವ, ಜನರ ಆರೋಗ್ಯಕ್ಕೆ ಮುಳುವಾದ ಕಾರ್ಖಾನೆಗಳನ್ನು ಇಲ್ಲಿಂದ ಹೊರಗೆ ಹಾಕಿ, ಬಲ್ಡೋಟಾ ಬಿ.ಎಸ್.ಪಿ.ಎಲ್. ವಿಸ್ತರಣೆ ಬೇಡ, ಬಸಾಪುರ ಕೆರೆಯನ್ನು ಗ್ರಾಮದ ಕೆರೆ ಎಂದು ಘೋಷಣೆ ಮಾಡಬೇಕು. ಜನರ ಆರೋಗ್ಯ ಹಾಗೂ ಪರಿಸರದ ಕಾಳಜಿ ಕಡೆ ಸರ್ಕಾರ ಗಮನ ಹರಿಸ ಬೇಕು. ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ರಾಸಾಯನಿಕ ವಿಷ ತ್ಯಾಜ್ಯದ ಹೊಗೆ ಉಗುಳುವ ಕಾರ್ಖಾನೆಗಳ ಬದಲು ಜವಳಿ ಪಾರ್ಕ್, ಆಹಾರ ಸಂಸ್ಕರಣಾ ಘಟಕ, ಪ್ಯಾಕಿಂಗ್ ಇಂಡಸ್ಟ್ರಿ, ಆಟೊಮೊಬೈಲ್ ಇಂಜಿನೀಯರಿಂಗ್ ಇಂಡಸ್ಟ್ರಿ, ಐಟಿ, ಬಿಟಿಯಂಥಹ ಪರಿಸರ ಸ್ನೇಹಿ ಉದ್ದಿಮೆಗಳನ್ನು ಇಲ್ಲಿ ಸ್ಥಾಪನೆ ಮಾಡಿ. ಇಲ್ಲವೇ ದೇವನಹಳ್ಳಿಯಲ್ಲಿ ಸ್ಥಾಪಿಸಲು ಯೋಜಿಸಿದ್ದ ವೈಮಾನಿಕ ರಕ್ಷಣಾ ಘಟಕವನ್ನು ಇಲ್ಲಿಗೆ ತಂದು ಈ ಪ್ರದೇಶ ಅಭಿವೃದ್ಧಿಪಡಿಸುವುದಾದರೆ ಕೊಪ್ಪಳ ಜನರು ಎಲ್ಲಾ ರೀತಿಯ ಸಹಕಾರ ನೀಡುತ್ತಾರೆ ಎಂದರು.

ಬಸವರಾಜ ಶೀಲವಂತರ, ಕೆ.ಬಿ.ಗೋನಾಳ, ಮೂಕಪ್ಪ ಮೇಸ್ತ್ರಿ, ಎಸ್.ಎ.ಗಫಾರ್, ಡಿ.ಎಂ. ಬಡಿಗೇರ, ಚನ್ನಬಸಪ್ಪ ಅಪ್ಪಣ್ಣವರ, ಹಂಚಾಳಪ್ಪ ಇಟಗಿ, ಮುದುಕಪ್ಪ ಎಂ. ಹೊಸಮನಿ, ಬಂದೇನವಾಜ್ ಮನಿಯಾರ, ಮಖಬೂಲ್ ರಾಯಚೂರು, ಶಿವಪ್ಪ ಹಡಪದ, ವಿನಾಯಕ ಕರಡಿ, ಮಹಾಂತೇಶ ಕೊತಬಾಳ, ಗಾಳೆಪ್ಪ ಮುಂಗೋಲಿ, ಹನುಮಂತಪ್ಪ ಚಿಂಚಲಿ, ರಾಮಲಿಂಗಯ್ಯ ಶಾಸ್ತ್ರಿಮಠ, ಜಾಫರ್ ತಟ್ಟಿ, ಯಮನೂರಪ್ಪ ಹಾಲಳ್ಳಿ, ಗವಿಸಿದ್ದಪ್ಪ ಹಲಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.