
ಕೊಪ್ಪಳ: ಸಾಹಿತ್ಯ, ಸಾಂಸ್ಕೃತಿಕ, ಕಲೆ, ರಂಗಭೂಮಿ, ಸರ್ಕಾರಿ ಜಯಂತಿಗಳು ಹೀಗೆ ಎಲ್ಲ ಪ್ರಮುಖ ಕಾರ್ಯಕ್ರಮಗಳಿಗೆ ವೇದಿಕೆಯಾಗುವ ಜಿಲ್ಲಾ ಕೇಂದ್ರದ ಪ್ರಮುಖ ಸ್ಥಳದಲ್ಲಿರುವ ಸಾಹಿತ್ಯ ಭವನ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಮೂರು ದಶಕಗಳ ಹಿಂದೆ ನಿರ್ಮಾಣವಾದ ಈ ಕಟ್ಟಡ ಈಗ ಶಿಥಿಲಾವಸ್ಥೆಗೆ ತಲುಪಿದೆ.
ಐತಿಹಾಸಿಕ ಅಶೋಕ ವೃತ್ತದ ಬಳಿ ಹಾಗೂ ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಸಾಹಿತ್ಯ ಭವನವಿರುವ ಕಾರಣ ಯಾವುದೇ ಕಾರ್ಯಕ್ರಮಗಳಾದರೂ ನೂರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಸರ್ಕಾರದಿಂದ ಆಚರಿಸಲಾಗುವ ಎಲ್ಲ ಜಯಂತಿಗಳಿಗೆ ಈ ಭವನವೇ ವೇದಿಕೆ ಒದಗಿಸುತ್ತದೆ. ವಿವಿಧ ಕಲಾ ತಂಡಗಳು, ಶಾಲಾ, ಕಾಲೇಜುಗಳ ಕಾರ್ಯಕ್ರಮಗಳು ನಡೆಯುವುದು ಕೂಡ ಇದೇ ಭವನದಲ್ಲಿ.
ರಂಗಾಸಕ್ತರು, ಹೋರಾಟಗಳನ್ನು ನಡೆಸುವ ಸಂಘಟನೆಯವರು ನಡೆಸುವ ಸಮಾವೇಶಗಳಿಗೆ ಇದುವರೆಗೆ ಸಾಹಿತ್ಯ ಭವನ ಸಾಕ್ಷಿಯಾಗಿದೆ. ಜಿಲ್ಲಾ ಕೇಂದ್ರದ ಮಧ್ಯಭಾಗದಲ್ಲಿರುವುದರಿಂದ ರಂಗಭೂಮಿ ಕಲಾವಿದರು ಇಲ್ಲಿಯೇ ನಾಟಕ ಪ್ರದರ್ಶನ ನೀಡುತ್ತಾರೆ. ಆದರೆ ಸರಿಯಾದ ಧ್ವನಿ, ಬೆಳಕು, ಸ್ವಚ್ಛತೆ ವ್ಯವಸ್ಥೆಯಿಲ್ಲ. ಮೈಕ್‌ನಲ್ಲಿ ಮಾತನಾಡಿದರೆ ಪ್ರತಿಧ್ವನಿಸುತ್ತದೆ. ಹೀಗಾಗಿ ಎಷ್ಟೇ ಒಳ್ಳೆಯ ಕಾರ್ಯಕ್ರಮವಾದರೂ ಅನುಪಯುಕ್ತ ವ್ಯವಸ್ಥೆಯಿಂದ ಕಾರ್ಯಕ್ರಮಗಳ ಸಂಘಟಕರು ಬೇಸರಗೊಳ್ಳುವುದು ತಪ್ಪುತ್ತಿಲ್ಲ.
ಕಾರ್ಯಕ್ರಮಕ್ಕೆ ಬಂದ ಪ್ರೇಕ್ಷಕರಿಗೆ ಸರಿಯಾದ ಶೌಚಾಲಯ ಸೌಲಭ್ಯ, ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ವಿದ್ಯುತ್ ತಂತಿಗಳು ಎಲ್ಲೆಂದರಲ್ಲಿ ಕಾಣುತ್ತವೆ. ಚಾವಣಿಯ ಸಿಮೆಂಟ್ ಪದರು ಕಳಚಿ ಬೀಳುತ್ತಿವೆ. ಸೀಲಿಂಗ್‌ನ ಬಹುತೇಕ ಕಡೆ ಸಿಮೆಂಟ್ ಕಳಚಿ ಕಬ್ಬಿಣದ ರಾಡುಗಳು ರಾರಾಜಿಸುತ್ತಿವೆ. ನಾಟಕ ಪ್ರದರ್ಶನದ ಸಂದರ್ಭದಲ್ಲಿ ಕಲಾವಿದರು ಶೃಂಗಾರಗೊಳ್ಳುವ ಕೊಠಡಿಗಳು ಇದ್ದೂ ಇಲ್ಲದಂತಾಗಿವೆ ಎನ್ನುವುದು ರಂಗಭೂಮಿ ಕಲಾವಿದರ ಬೇಸರ.
ಉಪವಿಭಾಧಿಕಾರಿ ಕಚೇರಿ ಅಧೀನದಲ್ಲಿರುವ ಸಾಹಿತ್ಯ ಭವನ ಸಾಂಸ್ಕೃತಿಕ ಮನಸ್ಸುಗಳಿಗೆ ಬೇಕಾದ ರೀತಿಯಲ್ಲಿ ಸೌಲಭ್ಯಗಳನ್ನು ಒಳಗೊಂಡಿಲ್ಲ. ನಾಟಕ ಪ್ರದರ್ಶನಗಳಿಗೆ ಅಗತ್ಯವಾದ ಬೆಳಕಿನ ವ್ಯವಸ್ಥೆ ಮತ್ತು ಮೈಕ್ ಸಿಗುವುದಿಲ್ಲ. ಈ ಸಾಮಗ್ರಿಗಳನ್ನು ಮತ್ತು ಅದನ್ನು ನಿರ್ವಹಣೆ ಮಾಡುವವರನ್ನು ಪ್ರತ್ಯೇಕವಾಗಿ ಹಣ ಕೊಟ್ಟು ಹೊರಗಿನಿಂದ ಕರೆಯಿಸಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಮುಖ್ಯರಸ್ತೆಯ ಪಕ್ಕದಲ್ಲಿಯೇ ಭವನವಿರುವ ಕಾರಣ ವಾಹನಗಳ ನಿಲುಗಡೆಗೆ ವ್ಯವಸ್ಥೆ ಇಲ್ಲದಂತಾಗಿದೆ. ಮತ್ತೆ ರಸ್ತೆಯ ಬದಿಯಲ್ಲಿಯೇ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಬೇಕಾದ ಅನಿವಾರ್ಯತೆಯಿದೆ.
ಇತ್ತೀಚೆಗೆ ರಂಗಭೂಮಿ ಟ್ರಸ್ಟ್ ವತಿಯಿಂದ ನಿಜಮಹಾತ್ಮ ಬಾಬಾಸಾಹೇಬ್ ಎಂಬ ನಾಟಕ ಪ್ರದರ್ಶನವಾಯಿತು. ಅದಕ್ಕೂ ಮೊದಲು ಶಿವಮೊಗ್ಗ ಹಾಗೂ ಕಲಬುರಗಿಯ ವೃತ್ತಿಪರ ತಂಡಗಳಿಂದ ನಾಟಕ ನಡೆದವು. ಈ ತಂಡಗಳು ಸ್ವತಃ ತಾವೇ ಧ್ವನಿ ವ್ಯವಸ್ಥೆ ಮಾಡಿಕೊಂಡಿದ್ದರೂ ಇಲ್ಲಿನ ಮೂಲಸೌಲಭ್ಯಗಳ ಕೊರತೆ ಅವರನ್ನು ಬಲುವಾಗಿ ಕಾಡಿದವು. ನಾಟಕ ಪ್ರದರ್ಶನದ ಬಳಿಕ ರಂಗಭೂಮಿ ಟ್ರಸ್ಟ್ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ’ಸಾಹಿತ್ಯ ಭವನ ತ್ವರಿತವಾಗಿ ದುರಸ್ತಿಯಾಗಬೇಕಿದೆ. ಅವ್ಯವಸ್ಥೆಯಾದರೆ ಕಲಾವಿದರು, ಪ್ರೇಕ್ಷಕರಿಗೂ ಬೇಸರವಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದರು.
ಆದ್ದರಿಂದ ಜಿಲ್ಲಾಡಳಿತ ಎಲ್ಲ ಸೌಲಭ್ಯಗಳು ಒಂದೇ ವೇದಿಕೆಯಲ್ಲಿ ಸಿಗುವಂತೆ ಮಾಡಬೇಕಾಗಿದೆ ಎನ್ನುವುದು ಸಾಹಿತ್ಯ ಪ್ರಿಯರ, ಸಂಗೀತಾಸಕ್ತರ ಹಾಗೂ ನಾಟಕ ಕಲಾವಿದರ ಆಗ್ರಹವಾಗಿದೆ.
ಸಾಹಿತ್ಯ ಭವನದಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಆಗಬೇಕಾಗಿದೆ. ಸರಿಯಾಗಿ ನಿರ್ವಹಣೆ ಮಾಡುವ ಹಾಗೂ ತಾಂತ್ರಿಕವಾಗಿ ತಿಳಿದುಕೊಂಡವರು ಇದ್ದರೆ ಸಂಘಟಕರಿಗೆ ಅನುಕೂಲವಾಗುತ್ತದೆ. ರಿಯಾಯಿತಿ ದರದಲ್ಲಿ ಭವನ ಬಾಡಿಗೆ ಕೊಟ್ಟರೆ ಹೆಚ್ಚು ಕಾರ್ಯಕ್ರಮ ನಡೆಸಲು ಸಾಧ್ಯವಾಗುತ್ತದೆಲಕ್ಷ್ಮಣ ಪೀರಗಾರ ರಂಗಕರ್ಮಿ
ಭವನ ಅವ್ಯವಸ್ಥೆಯಿಂದ ಕೂಡಿರುವ ಕಾರಣ ರಂಗಭೂಮಿ ಚಟುವಟಿಕೆ ಕಡಿಮೆಯಾಗುತ್ತಿವೆ. ಬಾಡಿಗೆ ಜಾಸ್ತಿಯಾಗಿದೆ. ಕೊಪ್ಪಳದ ಕೇಂದ್ರಭಾಗದಲ್ಲಿರುವ ಕಾರಣ ಉತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕುರಂಗನಾಥ ಕೋಳೂರು ರಂಗಕರ್ಮಿ
ಆದಷ್ಟು ಬೇಗನೆ ರಂಗಮಂದಿರ ಕಾರ್ಯಪೂರ್ಣಗೊಳಿಸಿ ಸಾಹಿತ್ಯಿಕ ರಂಗಭೂಮಿ ಚಟುವಟಿಕೆ ನಡೆಸಲು ಅಲ್ಲಿ ಅವಕಾಶ ಕೊಡಲಾಗುವುದು. ಬಳಿಕ ಸಾಹಿತ್ಯ ಭವನ ನವೀಕರಣ ಮಾಡಬೇಕೊ ಪುನರ್ ನಿರ್ಮಿಸಬೇಕೊ ಎನ್ನುವುದರ ಬಗ್ಗೆ ಎಲ್ಲರೊಂದಿಗೆ ಸಮಾಲೋಚಿಸಿ ನಿರ್ಧಾರಕ್ಕೆ ಬರಲಾಗುವುದುಡಾ.ಸುರೇಶ ಇಟ್ನಾಳ ಜಿಲ್ಲಾಧಿಕಾರಿ
ಸಾಹಿತ್ಯ ಸಮ್ಮೇಳನದ ನೆನಪಿನ ಕಟ್ಟಡ ಕೊಪ್ಪಳದಲ್ಲಿ 1993ರಲ್ಲಿ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ಸಾಹಿತ್ಯ ಭವನವನ್ನುನಿರ್ಮಿಸಲಾಗಿದೆ. 2017ರಲ್ಲಿ ನವೀಕರಣಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.