
ಕೊಪ್ಪಳ: ಬಲ್ದೋಟ ಸಮೂಹ ಸಂಸ್ಥೆ ಜಿಲ್ಲಾಕೇಂದ್ರದ ಸಮೀಪದಲ್ಲಿ ಇಂಟಿಗ್ರೇಟೆಡ್ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದ್ದು, ಕೂಡಲೇ ಸ್ಥಾಪಿಸುವಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ ಕಾರ್ಖಾನೆಗಾಗಿ ಭೂಮಿ ಕಳೆದುಕೊಂಡ ನಿರಾಶ್ರಿತರ ರೈತರ ಒಕ್ಕೂಟದಿಂದ ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.
ಅಶೋಕ ವೃತ್ತದಿಂದ ಜಿಲ್ಲಾಡಳಿತ ಭವನದ ತನಕ ಪಾದಯಾತ್ರೆ ನಡೆಸಿ ‘ಉಕ್ಕಿನ ಕಾರ್ಖಾನೆ ಸ್ಥಾಪಿಸಿ ಇಲ್ಲವೇ ನಮಗೆಲ್ಲ ಸರ್ಕಾರಿ ನೌಕರಿ ಕೊಡಿ’ ಎಂದು ಒತ್ತಾಯಿಸಿದರು.
ಹೋರಾಟದ ನೇತೃತ್ವ ವಹಿಸಿದ ಹನುಮಂತಪ್ಪ ಕೌದಿ ಮಾತನಾಡಿ ‘ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಕೊಪ್ಪಳದಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಅವಕಾಶ ಕಲ್ಪಿಸಿಕೊಡಬೇಕು. ಆಡಳಿತ ಮಂಡಳಿ ಪರಿಸರ ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು. ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡಬೇಕು. ಕಾರ್ಖಾನೆ ಆರಂಭಿಸಲು ನೆರವಾಗಬೇಕು’ ಎಂದು ಮನವಿ ಮಾಡಿದರು.
ಒಕ್ಕೂಟದ ನಾಗರಾಜ್ ಗುರಿಕಾರ, ಕೆಮಪ್ಪ ಇಟಗಿ,, ಹನುಮಗೌಡ ಮಲಿಗೌಡ್ರ ಹನುಮನಗೌಡ ರೆಡ್ಡಿ, ಆನಂದ ಕಿನ್ನಾಳ ಭರಮಪ್ಪಗೊರವರ, ಪ್ರಾಣೇಶ್ ಹಾಲವರ್ತಿ, ಬಸವರಾಜ ಬಡಿಗೇರ, ಇರ್ಫಾನ್ ಸರ್ದಾರ್, ಮಹಿಬೂಬ್ ವಾಲಿಕಾರ್, ಭರಮಪ್ಪ ಗೊರವರ, ಮರ್ದಾನ್ ಅಲಿ, ದೇವಮ್ಮ ಹೊಸಮನಿ, ಪರದೇಘರ್, ಮಹಿಬೂಬ್ ಬಾಗಿಲಿ, ನಾಗರಾಜ್ ಚಿಲವಾಡಗಿ, ಆಸ್ಗರ್, ಉಸ್ಮಾನ್ ವಾಲಿಕಾರ್, ಅನ್ವರ್ ಪರದೆಗರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕೊಪ್ಪಳ: ಜಿಲ್ಲಾ ಬಚಾವೊ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆಯು ಬಲ್ಡೋಟಾ, ಕಲ್ಯಾಣಿ, ಕಿರ್ಲೋಸ್ಕರ್, ಮುಕುಂದ ಸುಮಿ ಮತ್ತು ಎಕ್ಸ್ ಇಂಡಿಯಾ ಕಾರ್ಖಾನೆಗಳ ವಿಸ್ತರಣೆಗೆ ಅನುಮತಿ ಕೊಡಬಾರದು ಎಂದು ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟ ಹೋರಾಟ ಗುರುವಾರ 14 ದಿನಗಳನ್ನು ಪೂರ್ಣಗೊಳಿಸಿತು.
ಧರಣಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಂಬಲ ವ್ಯಕ್ತಪಡಿಸಿದ್ದು ಸಂಘದ ರಾಜ್ಯ ಉಪಾಧ್ಯಕ್ಷ ಹನುಮಂತಪ್ಪ ಹೊಳೆಯಾಚೆ ಮಾತನಾಡಿ ‘ಕಾರ್ಖಾನೆಗಳು ಈಗಿಲ್ಲಿ ಮಾಡಿರುವ ಅನಾಹುತಕ್ಕೆ ಇಲ್ಲಿನ ರಾಜಕಾರಣಿಗಳೇ ಕಾರಣ. ಹಳ್ಳಿಗಳು ಬದುಕುಳಿಯಲು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗವಿಮಠದ ಸ್ವಾಮೀಜಿ ಮೌನ ಮುರಿದು ಮಾತಾಡಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಶ್ರೀನಿವಾಸ ಭೋವಿ. ಪ್ರೊ. ಎಚ್.ಎಂ. ಮಂಜುನಾಥ, ವೇದಿಕೆ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಕೆ.ಬಿ. ಗೋನಾಳ, ಮಂಜುನಾಥ ಗೊಂಡಬಾಳ, ಬಸವರಾಜ ಶೀಲವಂತರ, ಬಸವರಾಜ ನರೇಗಲ್, ಗಾಳೆಪ್ಪ ಮುಂಗೋಲಿ, ಮಹಾದೇವಪ್ಪ ಎಸ್. ಮಾವಿನಮಡು, ಎಸ್.ಎ, ಗಫಾರ್, ಡಿ.ಎಂ ಬಡಿಗೇರ. ಶಂಭುಲಿಂಗಪ್ಪ ಹರಗೇರಿ, ಪುಟ್ಟರಾಜ ಪಾಟೀಲ್, ವಸಂತ ಎಮ್ಮೇರ್, ಎಸ್.ಬಿ. ರಾಜೂರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.