ADVERTISEMENT

ಏಕಕಾಲಕ್ಕೆ ಪರೀಕ್ಷೆ, ಮೌಲ್ಯಮಾಪನ: ಇಕ್ಕಟ್ಟಿಗೆ ಸಿಲುಕಿದ ಕಾಲೇಜು ಸಿಬ್ಬಂದಿ

ಕೃಷ್ಣದೇವರಾಯ ವಿ.ವಿ.: ಇಕ್ಕಟ್ಟಿಗೆ ಸಿಲುಕಿದ ಕಾಲೇಜು ಸಿಬ್ಬಂದಿ

ಪ್ರಮೋದ
Published 26 ಆಗಸ್ಟ್ 2022, 19:30 IST
Last Updated 26 ಆಗಸ್ಟ್ 2022, 19:30 IST
ಕೃಷ್ಣದೇವರಾಯ ವಿ.ವಿ
ಕೃಷ್ಣದೇವರಾಯ ವಿ.ವಿ   

ಕೊಪ್ಪಳ: ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಏಕಕಾಲದಲ್ಲಿ ಪರೀಕ್ಷೆ ಮತ್ತು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಿಗದಿ ಮಾಡಿರುವ ಕಾರಣ ಪ್ರಾಚಾರ್ಯರು ಹಾಗೂ ಪ್ರಾಧ್ಯಾಪಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಆ. 29ರಿಂದ ನಾಲ್ಕು ಮತ್ತು ಆರನೇ ಸೆಮಿಸ್ಟರ್‌ ಪರೀಕ್ಷೆಗಳು ಆರಂಭವಾಗಲಿವೆ. ಕೆಲ ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿದ್ದು ಪರೀಕ್ಷಾ ಕೇಂದ್ರದ ನಿರ್ವಹಣೆ ಸೇರಿದಂತೆ ಅನೇಕ ಕೆಲಸಗಳು ಇರುತ್ತವೆ.

ಇದೇ ಸಮಯದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮಾದರಿಯಲ್ಲಿ ನಡೆದ ಮೊದಲ ಸೆಮಿಸ್ಟರ್‌ ಪರೀಕ್ಷೆಯ ಮೌಲ್ಯಮಾಪನಕ್ಕೆ ಬರುವಂತೆ ಸೂಚಿಸಲಾಗಿದೆ. ಬಹಳಷ್ಟು ಕಾಲೇಜುಗಳು ಅತಿಥಿ ಉಪನ್ಯಾಸಕರ ಮೇಲೆ ಅವಲಂಬನೆಯಾಗಿದ್ದು, ಮೌಲ್ಯಮಾಪನ ಮತ್ತು ಪರೀಕ್ಷೆ ಎರಡನ್ನೂ ಒಟ್ಟಿಗೆ ನಿಭಾಯಿಸುವುದು ಹೇಗೆ ಎನ್ನುವ ಪ್ರಶ್ನೆ ಪ್ರಾಚಾರ್ಯರನ್ನು ಕಾಡುತ್ತಿದೆ. ಈ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಿವೆ.

ADVERTISEMENT

‘ಪ್ರಜಾವಾಣಿ’ ಜೊತೆ ಮಾತನಾಡಿದ ಪ್ರಾಚಾರ್ಯರೊಬ್ಬರು ‘ಮೊದಲ ಸೆಮಿಸ್ಟರ್‌ ಪರೀಕ್ಷೆ ನಡೆದು ಮೂರು ತಿಂಗಳಾದರೂ ಮೌಲ್ಯಮಾಪನ ಮಾಡಲು ಹೇಳಿಲ್ಲ. ಈಗನಾಲ್ಕು ಮತ್ತು ಆರನೇ ಸೆಮಿಸ್ಟರ್‌ಗಳ ಪರೀಕ್ಷೆ ದಿನಾಂಕ ನಿಗದಿ ಮಾಡಿ ಮೌಲ್ಯಮಾಪನಕ್ಕೆ ಪ್ರಾಧ್ಯಾಪಕರನ್ನು ಕಳುಹಿಸುವಂತೆ ತಿಳಿಸಿದ್ದಾರೆ. ಸಿಬ್ಬಂದಿ ಇಲ್ಲದೆ ಪರೀಕ್ಷಾ ಜವಾಬ್ದಾರಿ ನಿಭಾಯಿಸುವುದು ಹೇಗೆ’ ಎಂದು ಪ್ರಶ್ನಿಸಿದರು.

‘25ರಿಂದಲೇ ಮೌಲ್ಯಮಾಪನಕ್ಕೆ ಬರುವಂತೆ ಪ್ರಾಧ್ಯಾಪಕರಿಗೆ ಸೂಚಿಸಲಾಗಿದೆ. ಕೆಲ ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಇದ್ದಾರೆ. ಎಲ್ಲಾ ಕಾಲೇಜುಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ರವೇಶ ಪತ್ರ ಆನ್‌ಲೈನ್‌ ಮೂಲಕ ಬಂದಿಲ್ಲ. ಕೆಲವನ್ನು ನಾವೇ ಆನ್‌ಲೈನ್‌ ಮೂಲಕ ಕೊಡಬೇಕಾಗಿದೆ. ಮೊದಲ ಸೆಮಿಸ್ಟರ್‌ನ ಪರೀಕ್ಷೆ ಮುಗಿದ ಕೆಲ ದಿನಗಳಲ್ಲಿಯೇ ಮೌಲ್ಯಮಾಪನ ಮುಗಿಸಿದ್ದರೆ ಈಗ ಸಮಸ್ಯೆಯಾಗುತ್ತಿರಲಿಲ್ಲ’ ಎಂದು ಪ್ರಾಧ್ಯಾಪಕರೊಬ್ಬರು ಅಭಿಪ್ರಾಯಪಟ್ಟರು.

‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕ್ರಮ‘

ಕೊಪ್ಪಳ: ’ಎರಡು ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಯಲಿದೆ. ಖಾಲಿ ಇರುವ ಪ್ರಾಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರನ್ನು ಮೌಲ್ಯಮಾಪನಕ್ಕೆ ಕಳುಹಿಸುವಂತೆ ಹೇಳಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಪರೀಕ್ಷೆ ನಡೆಸಲು ಯಾವುದೇ ತೊಂದರೆಯಾಗುವುದಿಲ್ಲ’ ಎಂದು ವಿ.ವಿ.ಯಮೌಲ್ಯಮಾಪನ ಕುಲಸಚಿವ ಡಾ ರಮೇಶ ಓಲೇಕಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.