ಕೊಪ್ಪಳ: ಸಾರಿಗೆ ನೌಕರರ ಸಂಘಟನೆಗಳು ಮುಷ್ಕರ ಆರಂಭಿಸಿರುವುದರಿಂದ ಯಾವುದೇ ಸರ್ಕಾರಿ ಬಸ್‌ಗಳು ಜಿಲ್ಲಾಕೇಂದ್ರದಲ್ಲಿ ರಸ್ತೆಗಿಳಿದಿಲ್ಲ. ಇದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಅದರಲ್ಲಿಯೂ ಪರೀಕ್ಷೆ ನಿಗದಿಯಾಗಿರುವ ಕೊಪ್ಪಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ.
ಮಂಗಳವಾರ ಕೊಪ್ಪಳ ವಿ.ವಿ.ಯ ಸ್ನಾತಕೋತ್ತರ ತರಗತಿಗಳ ಎರಡನೇ ಸೆಮಿಸ್ಟರ್ ಪರೀಕ್ಷೆ ನಿಗದಿಯಾಗಿದೆ. ವಿ.ವಿ. ಕ್ಯಾಂಪಸ್ ಇರುವ ಕುಕನೂರು ತಾಲ್ಲೂಕಿನ ತಳಕಲ್‌ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಆವರಣ, ಯಲಬುರ್ಗಾದಿಂದ ಹೊರವಲಯದಲ್ಲಿರುವ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಗಂಗಾವತಿಯಲ್ಲಿ ವಿ.ವಿ. ಕೇಂದ್ರಗಳು ಇವೆ. ಈ ಎಲ್ಲ ಕಡೆಯೂ ಪರೀಕ್ಷೆಗಳು ಇದ್ದು ಗ್ರಾಮೀಣ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರಬೇಕಿದೆ.
ಸಾರಿಗೆ ನೌಕರರ ಸಂಘಟನೆಗಳ ಮುಷ್ಕರದ ವಿಷಯವನ್ನು ವಿದ್ಯಾರ್ಥಿಗಳು ಸೋಮವಾರವೇ ವಿ.ವಿ. ಅಧಿಕಾರಿಗಳ ಗಮನಕ್ಕೆ ತಂದರೂ ’ಜಿಲ್ಲಾಧಿಕಾರಿ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ. ಸಾರಿಗೆ ಸೌಲಭ್ಯ ಹೊಂದಿಸಿಕೊಂಡು ಪರೀಕ್ಷೆಗೆ ಬರುವುದು ನಿಮ್ಮ ಜವಾಬ್ದಾರಿ’ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ. ’ಬಸ್‌ಗಳೇ ಇಲ್ಲವಾದರೆ ಪರೀಕ್ಷೆಗೆ ಹೋಗುವುದು ಹೇಗೆ’ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ಒಂದೆಡೆ ಮಳೆ ಮತ್ತೊಂದರೆ ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳು ಪರೀಕ್ಷೆ ಸಮಯವಾದರೂ ತಮ್ಮೂರಿನಲ್ಲಿಯೇ ಉಳಿಯುವಂತಾಗಿದೆ.
ಖಾಸಗಿ ವ್ಯವಸ್ಥೆ:
ಪ್ರಯಾಣಿಕರ ಅನುಕೂಲಕ್ಕಾಗಿ ಪೂರ್ವಭಾವಿ ಸಭೆ ನಡೆಸಿದ್ದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರು ಖಾಸಗಿ ವಾಹನ ಚಾಲಕರಿಗೆ ಸಹಕಾರ ನೀಡುವಂತೆ ಹೇಳಿದ್ದರು. ಅದರಂತೆ ಒಂದಷ್ಟು ಖಾಸಗಿ ವಾಹನಗಳು ಇಲ್ಲಿನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನ ಕರೆದುಕೊಂಡು ಹೋಗುತ್ತಿವೆ. ಖಾಸಗಿ ವಾಹನಗಳು ಕೂಡ ಜಿಲ್ಲೆ ಮತ್ತು ಅಕ್ಕಪಕ್ಕದ ಜಿಲ್ಲೆಯ ಊರುಗಳಿಗೆ ಮಾತ್ರ ತೆರಳುತ್ತಿವೆ.
‘ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್‌ನಲ್ಲಿ ತೆರಳಬಹುದು ಎಂದುಕೊಂಡು ಕೊಪ್ಪಳದಿಂದ ಹೂವಿನಹಡಗಲಿಗೆ ಹೊರಟಿದ್ದೆ. ಈಗ ಇಲ್ಲಿ ಒಂದೂ ಬಸ್ ಇಲ್ಲ. ಏನು ಮಾಡುವುದು ತೋಚದಾಗಿದೆ’ ಎಂದು ಮಹಿಳೆಯೊಬ್ಬರು ತಿಳಿಸಿದರು.
ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ವಸ್ತಿ ಇರಲು ತೆರಳಿದ್ದ ಬಸ್‌ಗಳು ಕೇಂದ್ರಿಯ ಬಸ್ ನಿಲ್ದಾಣಕ್ಕೆ ವಾಪಸ್ ಆಗಿದ್ದು, ಅವುಗಳ ಚಾಲಕರು ಕೂಡ ಕರ್ತವ್ಯಕ್ಕೆ ಹಾಜರಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ ಬಸ್ ನಿಲ್ದಾಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.