
ಕುಕನೂರು: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಜನರು ಭಾನುವಾರ ಮಹಾಶಿವರಾತ್ರಿ ಹಬ್ಬವನ್ನು ಭಕ್ತಿ–ಭಾವದಿಂದ ಆಚರಿಸಿದರು.
ಶಿವಾಲಯಗಳಲ್ಲಿ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಆವರಣವನ್ನು ವಿವಿಧ ಹೂವುಗಳು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. ಕುಟುಂಬಸಮೇತ ಬಂದು ದೇವರ ದರ್ಶನ ಪಡೆದು ಪುನೀತ ಭಾವ ತಳೆದರು. ಉಪವಾಸ ವ್ರತ ಆಚರಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ಇಲ್ಲಿನ ನವಲಿಂಗೇಶ್ವರ ಮಂದಿರದಲ್ಲಿ ನೂರಾರು ಭಕ್ತರು ಶಿವನಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ಇಲ್ಲಿನ ಬಸ್ ನಿಲ್ದಾಣದ ಬಳಿವಿರುವ ಚಳ್ಳೇಶ್ವರ ದೇವಾಲಯ, ಇಟಗಿಯ ಮಹಾದೇವ ದೇವಾಲಯ ಹೇಗೆ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಶಿವನ ಪೂಜೆ ಹಾಗೂ ಪ್ರಾರ್ಥನೆ ನಡೆದವು.
ಮೂರ್ತಿಗೆ ಜಲಾಭಿಷೇಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ, ಬಿಲ್ವ ಪತ್ರಾರ್ಚನೆ, ಕುಂಕುಮಾರ್ಚನೆ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆದವು. ಬಿಲ್ವಪತ್ರೆ, ಪುಷ್ಪ, ಹಾಲು ತಂದಿದ್ದ ಭಕ್ತರು ದೇವರ ಮೂರ್ತಿಗೆ ಅಭಿಷೇಕ ಮಾಡಿಸಿದರು.
ದೇಗುಲಗಳಲ್ಲಿ ರಾತ್ರಿ ಜಾಗರಣೆ ಆರಂಭಗೊಂಡಿತು. ಭಜನೆ ಮೂಲಕ ಶಿವಾಲಯಗಳಲ್ಲಿ ಶಿವನಾಮ ಸ್ಮರಣೆ ಮೊಳಗಿತು. ಬೆಳಿಗ್ಗೆ ಪೂಜೆ ಸಲ್ಲಿಸಿದ್ದ ಭಕ್ತರು, ರಾತ್ರಿ ದೇಗುಲಗಳಲ್ಲಿ ವ್ಯವಸ್ಥೆ ಮಾಡಿದ್ದ ಜಾಗರಣೆ ಮತ್ತು ಶಿವಯೋಗ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.