
ಕುಷ್ಟಗಿ: ಪ್ರಯಾಣಿಕರ ಅನುಕೂಲಕ್ಕೆ ಇಲ್ಲಿಯ ಬಸ್ ನಿಲ್ದಾಣದಲ್ಲಿ ವಿಚಾರಣಾ ಕೌಂಟರ್‌ಗಳನ್ನು ನಿರ್ಮಿಸಲಾಗಿದೆ. ಆದರೆ ನಿಲ್ದಾಣ ಉದ್ಘಾಟನೆಗೊಂಡು ಮೂರು ವರ್ಷ ಕಳೆದರೂ ಅವು ಬಾಗಿಲು ತೆರೆದಿಲ್ಲ. ಸರ್ಕಾರದ ಲಕ್ಷಾಂತರ ಹಣ ಪೋಲಾಗಿರುವ ಬಗ್ಗೆ ಜನರಲ್ಲಿ ಅಸಮಾಧಾನವಿದೆ.
ರಾಯಚೂರು, ವಿಜಯಪುರ, ಹುಬ್ಬಳ್ಳಿ, ಕೊಪ್ಪಳ ಮತ್ತು ಹೊಸಪೇಟೆ ಕಡೆಗೆ ಸಂಚರಿಸುವ ಬಸ್‌ಗಳಿಗೆ ಕುಷ್ಟಗಿ ನಿಲ್ದಾಣ ಸಂಪರ್ಕ ಕೊಂಡಿಯಾಗಿದೆ. ನಿತ್ಯ ನೂರಾರು ಬಸ್‌ಗಳು, ಸಹಸ್ರ ಸಂಖ್ಯೆ ಪ್ರಯಾಣಿಕರಿಂದಾಗಿ ಸದಾ ಜನಜಂಗುಳಿ ಇರುತ್ತದೆ. ಅದೇ ರೀತಿ ಕಿಸೆಗಳ್ಳರಿಗೂ ಈ ನಿಲ್ದಾಣ ಆಯಕಟ್ಟಿನ ಜಾಗ. ಆದರೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಕಂಡುಬಂದಿದೆ.
ಜನರ ಸಮಸ್ಯೆಗೆ ತಕ್ಷಣ ನೆರವಾಗುವುದು, ಮಾಹಿತಿಗಾಗಿ ಪೊಲೀಸ್ ಚೌಕಿ ಮತ್ತು ವಿಚಾರಣಾ ಕೇಂದ್ರಗಳನ್ನು ತೆರೆಯಲಾಗಿದೆ. ಈ ಸುಸಜ್ಜಿತ ಕೌಂಟರ್‌ಗಳಲ್ಲಿ ಪೊಲೀಸ್ ಮತ್ತು ಸಾರಿಗೆ ಸಿಬ್ಬಂದಿ ಒಂದು ದಿನವೂ ಕುಳಿತು ಕರ್ತವ್ಯ ನಿರ್ವಹಿಸಿಲ್ಲ. ಅಷ್ಟೇ ಏಕೆ ಉದ್ಘಾಟನೆಯಾದಾಗಿನಿಂದ ಒಂದು ದಿನವೂ ಇವುಗಳ ಕದ ತೆರೆದಿಲ್ಲ. ಒಳಗೆ ಧೂಳು, ಕಸ ಕಡ್ಡಿ ಆವರಿಸಿದ್ದು ಎರಡೂ ಇಲಾಖೆಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂಬ ಆರೋಪ ಸಾರ್ವಜನಿಕರದ್ದು.
ಬಸ್‌ಗಳ ಬರಹೋಗುವಿಕೆ ಮತ್ತಿತರೆ ಅಗತ್ಯ ಸಂದರ್ಭದಲ್ಲಿ ಸಂಪರ್ಕಿಸಲು ಪ್ರಯಾಣಿಕರು ದಪ್ಪನೆ ಅಕ್ಷರಗಳಲ್ಲಿ ಬರೆದಿರುವ ವಿಚಾರಣೆ ಕೇಂದ್ರಕ್ಕೆ ಹೋದರೆ ಅಲ್ಲಿ ಯಾರೊಬ್ಬರೂ ಇರದ ಕಾರಣ ಶಪಿಸುತ್ತ ಬರುತ್ತಾರೆ. ಇನ್ನು ತುರ್ತು ಸಂದರ್ಭದಲ್ಲಿ ಮಾಹಿತಿ ನೀಡಲು ಹೋದರೆ ಪೊಲೀಸ್ ಚೌಕಿಯೂ ಖಾಲಿ. ಒಂದು ದಿನವೂ ಇವು ಬಳಕೆಯಾಗುತ್ತಿಲ್ಲವೆಂದರೆ ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿ ನಿರ್ಮಿಸಿರುವುದಾದರೂ ಏಕೆ ಎಂಬ ಪ್ರಶ್ನೆ ಪ್ರಯಾಣಿಕರದು. ಅಗತ್ಯವಿಲ್ಲದಿದ್ದರೆ ಅವುಗಳನ್ನು ತೆರವುಗೊಳಿಸಬೇಕಿತ್ತು. ಶೋಕಿಗಾಗಿ ಹಾಗೇ ಉಳಿಸಿಕೊಂಡಿರುವುದೇಕೆ ಎಂದೆ ಪ್ರಯಾಣಿಕರು 'ಪ್ರಜಾವಾಣಿ' ಬಳಿ ಅಸಮಾಧಾನ ಹೊರಹಾಕಿದರು.
ಪೊಲೀಸರು ಎಲ್ಲಿ ಇರುತ್ತಾರೊ ಗೊತ್ತಿಲ್ಲ ಕಳ್ಳತನ ನಡೆದಾಗ ಅವರನ್ನು ಹುಡುಕಿಕೊಂಡು ಹೋಗಬೇಕು, ಪೊಲೀಸ್ ಠಾಣೆಗೆ ಕರೆ ಮಾಡಿದರೆ ಪೊಲೀಸರೂ ಬೇಗನೆ ಬರುವುದಿಲ್ಲ. ಇನ್ನು ಬಸ್‌ಗಳ ಬಗ್ಗೆ ಮಾಹಿತಿ ಪಡೆಯಲು ನಿಲ್ದಾಣದ ಮೂಲೆಯಲ್ಲಿನ ಹಳೆ ಕೊಠಡಿಯಲ್ಲಿ ಕುಳಿತ ನಿಯಂತ್ರಕರ ಬಳಿ ಓಡೋಡಿ ಹೋಗಬೇಕು. ಮರಳಿ ಬರುವಷ್ಟರಲ್ಲಿ ಬಸ್‌ಗಳು ಹೋಗಿರುತ್ತವೆ. ಇದನ್ನು ಸಾರಿಗೆ ಇಲಾಖೆಯವರು ಅರ್ಥ ಮಾಡಿಕೊಳ್ಳಬೇಕಿತ್ತಲ್ಲವೆ ಎಂದೆ ಪ್ರಯಾಣಿಕರಾದ ವೀರೇಶ ಮಠಪತಿ, ಪ್ರಹ್ಲಾದ ಜೋಷಿ ಹೇಳಿದರು.
ಸಿಬ್ಬಂದಿ ಕೊರತೆ ಕಾರಣಕ್ಕೆ ಕೌಂಟರ್‌ಗಳಲ್ಲಿ ನಿಯಂತ್ರಕರು ಇರುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ.ನೀಲಪ್ಪ ನಾಸಿಪುಡಿ ಘಟಕ ವ್ಯವಸ್ಥಾಪಕ
ಪೊಲೀಸರು ಕೌಂಟರ್ ಒಳಗಿದ್ದರೆ ಕಿಸೆಗಳ್ಳರಿಗೆ ಅನುಕೂಲವಾಗುತ್ತದೆ. ಹಾಗಾಗಿ ಪೊಲೀಸರು ನಿಲ್ದಾಣದಲ್ಲಿ ಅಲ್ಲಲ್ಲಿ ಗಸ್ತು ತಿರುಗುತ್ತಿರುತ್ತಾರೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣ ವರದಿಯಾಗಿಲ್ಲ.ಹನುಮಂತಪ್ಪ ತಳವಾರ ಸಬ್ ಇನ್‌ಸ್ಪೆಕ್ಟರ್
ಉಪಯೋಗವಿಲ್ಲವೆಂದಾದರೆ ಕೌಂಟರ್‌ಗಳನ್ನು ನಿರ್ಮಿಸುವ ಅಗತ್ಯ ಇರಲಿಲ್ಲ. ಅನಗತ್ಯವಾಗಿ ಸರ್ಕಾರದ ಹಣ ಖರ್ಚು ಮಾಡಲಾಗಿದೆಈಶ್ವರಪ್ಪ ಬಲಕುಂದಿ ಪ್ರಯಾಣಿಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.