ADVERTISEMENT

ಕುಷ್ಟಗಿ–ಯಶವಂತಪುರವರೆಗೆ ರೈಲು ಸೇವೆ; ರೈಲ್ವೆ ಸಚಿವರಿಗೆ ಮನವಿ

ಸಚಿವ ಸೋಮಣ್ಣ ಸಕಾರಾತ್ಮಕ ಸ್ಪಂದನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 3:02 IST
Last Updated 13 ಜುಲೈ 2025, 3:02 IST
ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಹೊಸಪೇಟೆಯಲ್ಲಿ ಶುಕ್ರವಾರ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು
ಕುಷ್ಟಗಿ ರೈಲ್ವೆ ಹೋರಾಟ ಸಮಿತಿಯವರು ಹೊಸಪೇಟೆಯಲ್ಲಿ ಶುಕ್ರವಾರ ರೈಲ್ವೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದರು   

ಕುಷ್ಟಗಿ: ಪಟ್ಟಣದಿಂದ ಯಶವಂತಪುರ ಸೇರಿದಂತೆ ವಿವಿಧ ಕಡೆ ರೈಲು ಸೇವೆ ಒದಗಿಸುವಂತೆ ಇಲ್ಲಿಯ ರೈಲ್ವೆ ಹೋರಾಟ ಸಮಿತಿ ರೈಲ್ವೆ ಸಚಿವರಿಗೆ ಮನವಿ ಮಾಡಿದೆ.

ಹೊಸಪೇಟೆಯಲ್ಲಿ ಶುಕ್ರವಾರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿದ ಹೋರಾಟ ಸಮಿತಿಯವರು ಮನವಿ ಸಲ್ಲಿಸಿದರು.

ಸದ್ಯ ಪಟ್ಟಣದಿಂದ ಬೆಳಗಿನ ಅವಧಿಯಲ್ಲಿ ಕೇವಲ ಒಂದು ರೈಲು ಮಾತ್ರ ಹುಬ್ಬಳ್ಳಿವರೆಗೆ ಸಂಚರಿಸುತ್ತಿದ್ದು, ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಗದಗ–ವಾಡಿ ರೈಲ್ವೆ ಮಾರ್ಗ, ನಿಲ್ದಾಣಗಳು ಉಳಿದ ಅವಧಿಯಲ್ಲಿ ಬಿಕೊ ಎನ್ನುತ್ತಿವೆ. ಹಾಗಾಗಿ ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿವರೆಗೆ ಪ್ಯಾಸೆಂಜರ್‌ ರೈಲು ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಬೆಂಗಳೂರು ತಲುಪಲು ಕುಷ್ಟಗಿ, ಯಲಬುರ್ಗಾ, ಕುಕನೂರು ಭಾಗದ ಹಾಗೂ ಸುತ್ತಲಿನ ಪಟ್ಟಣ, ಗ್ರಾಮಾಂತರ ಪ್ರದೇಶದ ಜನರು ದುಬಾರಿ ಪ್ರಯಾಣ ದರದ ಸಾರಿಗೆ ವ್ಯವಸ್ಥೆಯನ್ನೇ ಅವಲಂಬಿಸಿದ್ದು, ಯಶವಂತಪುರದವರೆಗೆ ನೇರ ರೈಲು ಸಂಚರಿಸಲು, ಬೆಂಗಳೂರು–ಹೊಸಪೇಟೆ ಮತ್ತು ಹರಿಹರ–ಹೊಸಪೇಟೆ ರೈಲುಗಳನ್ನು ತಳಕಲ್‌ ಮಾರ್ಗವಾಗಿ ಕುಷ್ಟಗಿವರೆಗೆ ವಿಸ್ತರಿಸಬೇಕು. ಮತ್ತು ಕುಷ್ಟಗಿ, ನರಗುಂದ, ಘಟಪ್ರಭಾ ಹಾಗೂ ಚಿತ್ರದುರ್ಗ, ಆಲಮಟ್ಟಿ ನೂತನ ರೈಲ್ವೆ ಮಾರ್ಗಗಳ ತಾಂತ್ರಿಕ ಸಮೀಕ್ಷೆಗೆ ಅನುಮೋದನೆ ನೀಡಬೇಕು’ ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಸಚಿವ ಸೋಮಣ್ಣ ಕೆಲವೇ ವರ್ಷಗಳ ಅವಧಿಯಲ್ಲಿ ಕುಷ್ಟಗಿವರೆಗೂ ರೈಲು ಓಡಿಸಲು ಕ್ರಮ ಕೈಗೊಳ್ಳಲಾಗಿದೆ. ಉಳಿದ ಬೇಡಿಕೆಗಳನ್ನು ಪರಿಶೀಲಿಸಲಾಗುವುದೆಂದು ಹೇಳಿದರು ಎಂದು ಸಮಿತಿ ತಿಳಿಸಿದೆ.

ಈ ಸಂದರ್ಭದಲ್ಲಿ ರೈಲ್ವೆ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ವೀರೇಶ ಬಂಗಾರಶೆಟ್ಟರ, ಮಹಾಂತೇಶ ಮಂಗಳೂರು, ಎಸ್‌.ಎನ್‌.ಘೋರ್ಪಡೆ, ಮಂಜುನಾಥ ಮಹಾಲಿಂಗಪುರ, ಭರತೇಶ ಜೋಷಿ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.