
ಕುಷ್ಟಗಿ ತಾಲ್ಲೂಕು ದೋಟಿಹಾಳ ಅವಧೂತ ಶುಕಮುನಿಸ್ವಾಮಿ ಮಹಾರಥೋತ್ಸವ ಮಂಗಳವಾರ ಸಹಸ್ರ ಸಂಖ್ಯೆ ಭಕ್ತರ ಮಧ್ಯೆ ನೆರವೇರಿತು
ಕುಷ್ಟಗಿ: ಸಾಮರಸ್ಯದ ಜಾತ್ರೆ ಎಂದು ಹೆಸರಾಗಿರುವ ತಾಲ್ಲೂಕಿನ ಅವಧೂತ ಶುಕಮುನಿಸ್ವಾಮಿ ಜಾತ್ರಾ ಮಹೋತ್ಸವದ ನಿಮಿತ್ತ ಮಂಗಳವಾರ ಮಹಾರಥೋತ್ಸವ ಸಂಭ್ರಮ ಮತ್ತು ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.
ಕಳೆದ ಒಂದು ವಾರದಿಂದಲೂ ನಡೆದ ಮುತ್ತ್ಯಾನ ಪಲ್ಲಕ್ಕಿ ರಥಬೀದಿಗೆ ಬಂದ ನಂತರ ಮಹಾರಥೋತ್ಸವಕ್ಕೆ ಶಾಸಕ ದೊಡ್ಡನಗೌಡ ಪಾಟೀಲ ಚಾಲನೆ ನೀಡಿದರು. ರಥಬೀದಿಯಲ್ಲಿ ನೆರೆದಿದ್ದ ಭಕ್ತರು ಹರ್ಷೋದ್ಗಾರದೊಂದಿಗೆ ರಥ ಎಳೆದರು.
ದೋಟಿಹಾಳ ಕೇಸೂರು ಹಾಗೂ ಸುತ್ತಲಿನ ನಗರ ಪಟ್ಟಣಗಳು ಹಾಗೂ ನೆರೆರಾಜ್ಯಗಳ ಜನರೂ ಸೇರಿದಂತೆ ಸಹಸ್ರ ಸಂಖ್ಯೆ ಭಕ್ತರು ಅವಧೂತ 'ಶುಕಮುನಿ ಮುತ್ತ್ಯಾ'ನ ರಥಕ್ಕೆ ಉತ್ತತ್ತಿ ಎಸೆಯುವ ಮೂಲಕ ರಥೋತ್ಸವವನ್ನು ಕಣ್ತುಂಬಿಕೊಂಡರು. ಮಹಿಳೆಯರು, ಮಕ್ಕಳು, ಪ್ರತಿನಿಧಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಸೇರಿದಂತೆ ಅಪಾರ ಜನಸಮೂಹ ಸಂಭ್ರಮದ ಜಾತ್ರಾ ಮಹೋತ್ಸವಕ್ಕೆ ಸಾಕ್ಷಿಯಾಯಿತು.
ಜಾತ್ರೆ ನಿಮಿತ್ತ ಶುಕಮುನಿ ಮಠದಲ್ಲಿ ಪಂಚಾಮೃತ ಅಭಿಷೇಕ, ಮಹಾಅಭಿಷೇಕ ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಭಕ್ತರು ವಿವಿಧ ರೀತಿಯಲ್ಲಿ ಹರಕೆ ತೀರಿಸಿದರು. ವಿವಿಧ ಗ್ರಾಮಗಳ ಬಹಳಷ್ಟು ರೈತಾಪಿ ಜನರು ಎತ್ತಿನಗಾಡಿ, ಇತರೆ ವಾಹನಗಳ ಮೂಲಕ ರಥೋತ್ಸವಕ್ಕೆ ಆಗಮಿಸಿದ್ದರಿಂದ ಬಹಳಷ್ಟು ನೂಕುನುಗ್ಗಲು ಉಂಟಾಗಿತ್ತು. ಮಿತಿಮೀರಿದ ವಾಹನಗಳಿಂದಾಗಿ ರಸ್ತೆಸಂಚಾರಕ್ಕೆ ಅಡ್ಡಿಯಾಗಿತ್ತು.
ಮಾಜಿ ಸಂಸದ ಸಂಗಣ್ಣ ಕರಡಿ, ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ತಹಶೀಲ್ದಾರ್ ಅಶೋಕ ಶಿಗ್ಗಾವಿ, ಡಾ.ಬಸವರಾಜ ಕ್ಯಾವಟರ್, ಮಹಾಂತೇಶ ಬದಾಮಿ, ಲಾಡ್‌ಸಾಬ್ ಕೊಳ್ಳಿ ಉಪಸ್ಥಿತರಿದ್ದರು. ರಾತ್ರಿ ಸಾಮಾಜಿಕ ನಾಟಕ, ವಿವಿಧ ರಸಮಂಜರಿ, ಸಂಗೀತ ಕಾರ್ಯಕ್ರಮಗಳು ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.