ADVERTISEMENT

ಕುಷ್ಟಗಿ: ಲಾಡ್ಜ್‌ ಚರಂಡಿಯಲ್ಲಿ ಮೃತದೇಹ ಪತ್ತೆ, ಕೊಲೆ ಶಂಕೆ

ರಾಯಲ್‌ ಬಾರ್‌ ಮತ್ತು ರೆಸ್ಟಾರಂಟ್‌ ಬಳಿ ಘಟನೆ ಮೃತನ ಸಂಬಂಧಿಕರಿಂದ ದಿಢೀರ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 5:18 IST
Last Updated 21 ಜನವರಿ 2026, 5:18 IST
ಕುಷ್ಟಗಿ ಕೊಪ್ಪಳ ರಸ್ತೆಯ ರಾಯಲ್‌ ಲಾಡ್ಜ್‌ ಬಳಿ ವ್ಯಕ್ತಿಯ ಸಾವಿನ ಹಿನ್ನೆಲೆಯಲ್ಲಿ ನೂರಾರು ಜನರು ನೆರೆದಿದ್ದರು
ಕುಷ್ಟಗಿ ಕೊಪ್ಪಳ ರಸ್ತೆಯ ರಾಯಲ್‌ ಲಾಡ್ಜ್‌ ಬಳಿ ವ್ಯಕ್ತಿಯ ಸಾವಿನ ಹಿನ್ನೆಲೆಯಲ್ಲಿ ನೂರಾರು ಜನರು ನೆರೆದಿದ್ದರು   

ಕುಷ್ಟಗಿ: ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ರಾಯಲ್‌ ಬಾರ್‌ ಮತ್ತು ರೆಸ್ಟಾರೆಂಟ್‌ಗೆ ಸೇರಿದ ಚರಂಡಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಈ ಸಾವು ಅನುಮಾನಾಸ್ಪದವಾಗಿದೆ ಎಂದು ಆಕ್ರೋಶಗೊಂಡ ಮೃತನ ಸಂಬಂಧಿಕರು ಮತ್ತು ಸಾರ್ವಜನಿಕರು ಲಾಡ್ಜ್‌ದಲ್ಲಿ ದಿಢೀರ್‌ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆದಿದೆ.

ಮೃತಪಟ್ಟಿರುವ ವ್ಯಕ್ತಿ ತಾಲ್ಲೂಕಿನ ನಿಡಶೇಸಿ ಗ್ರಾಮದ ಹನುಮಗೌಡ ಶಂಕರಗೌಡ ಪೊಲೀಸ್‌ಪಾಟೀಲ (45) ಎಂದು ಗುರುತಿಸಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಅಲ್ಲಿಗೆ ಬಂದ ಬಹಳಷ್ಟು ಜನರು ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು. ಅಲ್ಲದೇ, ಕೆಲವರು ದಾಂಧಲೆ ನಡೆಸಿ ಗಾಜುಗಳನ್ನು ಒಡೆದಿದ್ದು ಕಂಡುಬಂದಿತು. ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಘಟನೆಗೆ ಸಂಬಂಧಿಸಿದಂತೆ ವಸತಿಗೃಹದ ಕೆಲ ಸಿಬ್ಬಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಗಂಗಾವತಿ ಉಪ ವಿಭಾಗದ ಡಿವೈಎಸ್‌ಪಿ ನ್ಯಾಮಗೌಡರ, ಪ್ರಭಾರ ಸಿಪಿಐ ಆಂಜನೇಯ, ಸಬ್‌ ಇನ್‌ಸ್ಪೆಕ್ಟರ್‌ ಹನುಮಂತಪ್ಪ ತಳವಾರ ಸ್ಥಳಕ್ಕೆ ಭೇಟಿ ನೀಡಿದರು. ಅಲ್ಲದೆ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಕೆಲ ಸಾಕ್ಷ್ಯಗಳನ್ನು ಸಂಗ್ರಹಿಸಿದರು.

ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾಗಲೇ ಪ್ರತಿಭಟನೆಗಿಳಿದ ಜನರು ಸಾವಿಗೆ ನ್ಯಾಯಕೊಡಿಸದೆ ಮುಚ್ಚಿಹಾಕುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಅಲ್ಲದೇ ಮೃತದೇಹವನ್ನು ಕೊಂಡೊಯ್ಯದೆ ಲಾಡ್ಜ್‌ ಮುಂದೆಯೇ ದಹನ ಮಾಡುತ್ತೇವೆ. ಪೊಲೀಸ್‌ ಠಾಣೆ ಮುಂದೆ ಧರಣಿ ಕುಳಿತುಕೊಳ್ಳುತ್ತೇವೆ ಎಂದೂ ಬೆದರಿಕೆಯೊಡ್ಡಿದ್ದು ಸ್ಥಳದಲ್ಲಿ ಕೇಳಿಬಂದಿತು.

ADVERTISEMENT

ಘಟನೆ ವಿವರ: ಸ್ಥಳದಲ್ಲಿ ದೊರೆತ ಮಾಹಿತಿ ಪ್ರಕಾರ ನಿಡಶೇಸಿ ಗ್ರಾಮದ ಮೃತ ವ್ಯಕ್ತಿ ಕಾರು ಚಾಲಕನಾಗಿದ್ದು ಜ.16ರ ರಾತ್ರಿ ಇತರರೊಂದಿಗೆ ಬಾರ್‌ಗೆ ಬಂದು ಮದ್ಯ ಸೇವಿಸಿದ್ದಾನೆ. ನಿಯಂತ್ರಣ ತಪ್ಪಿ ಚರಂಡಿಯಲ್ಲಿ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದೆ. ಮೃತನ ದೇಹದ ಯಾವುದೇ ಭಾಗದಲ್ಲಿ ಗಾಯದ ಗುರುತುಗಳಿಲ್ಲ. ಲಾಡ್ಜ್‌ ಬಳಿ ರಕ್ತದ ಕಲೆಗಳಿದ್ದರೂ ಇನ್ನೊಬ್ಬ ವ್ಯಕ್ತಿಯೂ ಮದ್ಯ ಸೇವಿಸಿ ಬಿದ್ದು ಗಾಯಗೊಂಡಿದ್ದರಿಂದ ರಕ್ತ ಬಿದ್ದಿದೆ. ಅಲ್ಲದೇ ಸಿಸಿ ಟಿವಿ ಕ್ಯಾಮೆರಾದಲ್ಲಿ ಲಭ್ಯವಾಗಿರುವ ದೃಶ್ಯಗಳ ಪ್ರಕಾರ ಮೃತ ವ್ಯಕ್ತಿ ನಡೆದುಕೊಂಡು ಹೋಗಿ ತಾನೇ ಬಿದ್ದಿರುವುದು ಕಂಡುಬರುತ್ತಿದೆ ಎಂದು ಪೊಲೀಸರು ತಿಳಿಸಿದರು.

ಆದರೆ ಅದನ್ನು ಅಲ್ಲಗಳೆದ ಸಂಬಂಧಿಕರು, ಮದ್ಯ ಸೇವಿಸಿ ಯಾರಾದರೂ ವಸತಿಗೃಹದಲ್ಲಿ ಸಣ್ಣಪುಟ್ಟ ಜಗಳ ಮಾಡಿದರೆ ತಕ್ಷಣ ಪೊಲೀಸರನ್ನು ಕರೆಯಿಸುವ ಸಿಬ್ಬಂದಿ ಇಂಥ ಘಟನೆ ನಡೆದಿದ್ದರೂ ಪೊಲೀಸರಿಗೆ ಬೆಳಗಾಗುವವರೆಗೂ ಮಾಹಿತಿ ನೀಡಿಲ್ಲ. ಘಟನೆ ಮುಚ್ಚಿಹಾಕುವ ಕುತಂತ್ರ ನಡೆಸಿದ್ದು ಸಾಕ್ಷ್ಯನಾಶಪಡಿಸಲು ಯತ್ನಿಸಿರುವುದು ಸ್ಪಷ್ಟವಾಗಿದೆ. ಕೈ ಮತ್ತು ಕಾಲುಗಳು ಮೇಲೆ ಕಾಣುವ ರೀತಿಯಲ್ಲಿ ಮೃತದೇಹ ಕಾಣುತ್ತಿದ್ದರೂ ಪೊಲೀಸರಿಗೆ ಯಾವುದೇ ಮಾಹಿತಿ ನೀಡದ ಲಾಡ್ಜ್‌ನ ಸಿಬ್ಬಂದಿ ಎಂದಿನಂತೆ ಮಂಗಳವಾರ ಬೆಳಿಗ್ಗೆ ಪೂಜೆ ನಡೆಸಿ ಬಾರ್‌ ಮತ್ತು ರೆಸ್ಟಾರೆಂಟ್‌ ವ್ಯವಹಾರ ನಡೆಸಲು ಮುಂದಾಗಿ ಏನೂ ಗೊತ್ತಿಲ್ಲ ಎಂಬಂತೆ ನಡೆದುಕೊಂಡಿದ್ದಾರೆ. ಲಾಡ್ಜ್‌ ಸಿಬ್ಬಂದಿಯೇ ಕೊಲೆ ಮಾಡಿ ಶವ ಚರಂಡಿಗೆ ಎಸೆದಿದ್ದಾರೆ. ಇಷ್ಟಾದರೂ ನೀವು ಲಾಡ್ಜ್ ಪರವಾಗಿ ಮಾತನಾಡುತ್ತಿದ್ದೀರಿ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ಪಿಎಸ್‌ಐ ಹನುಮಂತಪ್ಪ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಪರಿಶೀಲನೆ ನಡೆದ ನಂತರವಷ್ಟೇ ನಿಖರ ಕಾರಣ ಗೊತ್ತಾಗುತ್ತದೆ. ಯಾರಿಗೂ ಅನ್ಯಾಯ ಮಾಡುವುದಿಲ್ಲ, ದೂರು ಕೊಟ್ಟರೆ ಅದನ್ನೂ ಪ್ರಕರಣ ದಾಖಲಿಸುತ್ತೇವೆ ಎಂದು ಸಮಾಧಾನ ಪಡಿಸುತ್ತಿದ್ದುದು ಕಂಡುಬಂದಿತು.

ಘಟನೆ ನಂತರ ಬಾರ್ ಮತ್ತು ರೆಸ್ಟಾರಂಟ್‌ಗೆ ಜನರು ಬರುವುದನ್ನು ನಿರ್ಬಂಧಿಸಿದ ಪೊಲೀಸರು ಅಲ್ಲಿಯ ಎಲ್ಲ ಕೋಣೆಗಳು, ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದರು. ತಡರಾತ್ರಿವರೆಗೂ ಪ್ರಕರಣ ದಾಖಲಾಗಿರಲಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಪಿಎಸ್‌ಐ ಸಂಬಂಧಿಕರು ದೂರು ಕೊಟ್ಟರೆ ಎಫ್‌ಐಆರ್‌ ದಾಖಲಿಸಿ ಬೇರೆ ಆಯಾಮಗಳಲ್ಲಿ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.

ಪೊಲೀಸರೊಂದಿಗೆ ಸಾರ್ವಜನಿಕರು ವಾಗ್ವಾದಕ್ಕಿಳಿದಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.