
ಗಂಗಾವತಿ: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಉದ್ದೇಶದಿಂದ ಆರಂಭಿಸಿದ ಆನೆಗೊಂದಿ ಉತ್ಸವ ಒಂದು ವರ್ಷ ನಡೆದರೆ ಎರಡ್ಮೂರು ವರ್ಷ ನಡೆಯುವುದೇ ಇಲ್ಲ. ಇದು ರಾಜ್ಯ ಸರ್ಕಾರ, ಕ್ಷೇತ್ರದ ಜನಪ್ರತಿನಿಧಿಗಳ, ಜಿಲ್ಲಾಡಳಿತದ ನಿರ್ಲಕ್ಷ್ಯವೇ ಕಾರಣ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.
ಕೋವಿಡ್ ಹೊರತುಪಡಿಸಿ, ಹಂಪಿ ಉತ್ಸವ ಆಚರಣೆಗೆ ಈವರೆಗೆ ಯಾವ ಅಡೆತಡೆಯೂ ಉಂಟಾಗಿಲ್ಲ. ಆನೆಗೊಂದಿ ಉತ್ಸವ ಆಚರಣೆಗೆ ಮಾತ್ರ ಸರ್ಕಾರ ಮತ್ತು ಜನಪ್ರತಿನಿಧಿಗಳ ಮೀನಮೇಷ, ತಾರತಮ್ಯ ನೀತಿ ಪ್ರತಿವರ್ಷ ಕಂಡು ಬರುತ್ತದೆ.
ಈಗಾಗಲೇ ಹಂಪಿ ಉತ್ಸವ ಆರಂಭವಾಗಿದೆ. ಹಂಪಿ ಉತ್ಸವದ ವೈಭವ ಕಣ್ತುಂಬಿಕೊಳ್ಳಲು ಸಾಗಾರೋಪಾದಿಯಲ್ಲಿ ಜನರು ವಿಜಯನಗರ ಜಿಲ್ಲೆಯತ್ತ ಹರಿದು ಬಂದಿದ್ದಾರೆ. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಸೇರಿ ಎಲ್ಲರೂ ಸರ್ಕಾರದ ಆಡಳಿತ ಬಗ್ಗೆ ಹೊಗಳಿ ಹೊಗಳಿ ಮಾತನಾಡಿದ್ದಾರೆ.
ಮುಖ್ಯಮಂತ್ರಿ ಉತ್ಸವ ಉದ್ಘಾಟನಾ ವೇದಿಕೆ ಕಾರ್ಯಕ್ರಮದಲ್ಲಿ ಪ್ರತಿವರ್ಷ ನವಂಬರ್ ತಿಂಗಳಲ್ಲೇ ಹಂಪಿ ಉತ್ಸವ ಆಯೋಜಿಸುವುದಾಗಿ ಭರವಸೆ ನೀಡಿದ್ದು, ಇದೇ ವರ್ಷದಲ್ಲಿ ನವೆಂಬರ್ 3, 4 ಮತ್ತು 5ರಂದು ಮತ್ತೊಮ್ಮೆ ಹಂಪಿ ಉತ್ಸವ ನಡೆಸುವುದಾಗಿ ಘೋಷಣೆ ಮಾಡಿದ್ದಾರೆ. ವಿಜಯನಗರ ಸಾಮ್ರಾಜ್ಯದ ಪ್ರಮುಖ ಭಾಗವೇ ಆದ ಆನೆಗೊಂದಿಗೆ ಹಂಪಿಯಷ್ಟು ಪ್ರಾಮುಖ್ಯತೆ ಲಭಿಸುತ್ತಿಲ್ಲ ಎನ್ನುವುದು ಇಲ್ಲಿನ ಇತಿಹಾಸ ಪ್ರಿಯರ ಬೇಸರಕ್ಕೆ ಕಾರಣವಾಗಿದೆ.
ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿ. ಇಲ್ಲಿ ರಾಮಾಯಣ ಕಾಲದ ಅಂಜನಾದ್ರಿ, ಋಷಿಮುಖ ಪರ್ವತ, ಪಂಪಾಸರೋವರ ಇದೆ. ಹಾಗೇ ವಿಜಯನಗರ ಸಾಮ್ರಾಜ್ಯದ 64 ಸಾಲಿನ ಕಲ್ಲಿನ ಮಂಟಪ, ಗವಿರಂಗನಾಥ ದೇವಸ್ಥಾನ, ಕಲ್ಲಿನ ಸೇತುವೆ, ಚಿಂತಾಮಣಿ, ತಳವಾರಗಟ್ಟ, ಕೆಂಪೇಗೌಡನ ಸೆರೆವಾಸಕ್ಕೆ ಹಾಕಿದ ಸ್ಥಳ ಸೇರಿ ಹಲವು ಮಂಟಪ, ದೇವಾಲಯಗಳಿವೆ. ಉತ್ಸವ ನಡೆದಾಗ ಐತಿಹಾಸಿಕ ಈ ತಾಣಗಳ ಮೇಲೂ ಬೆಳಕು ಚೆಲ್ಲಲಾಗುತ್ತಿತ್ತು. ಈಗ ಆ ಕೆಲಸವೂ ಆಗುತ್ತಿಲ್ಲ.
ದಿವಂಗತ ಎಂ.ಪಿ ಪ್ರಕಾಶ ಅವರ ನೇತೃತ್ವದಲ್ಲಿ 1998ರಲ್ಲಿ ಆನೆಗೊಂದಿ ಉತ್ಸವ ಆರಂಭವಾಗಿತ್ತು. 1999, 2003, 2009, 2011, 2015, 2017, 2020, 2024ರಲ್ಲಿ ಮಾತ್ರ ನಡೆದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹಾಗೂ ಗಂಗಾವತಿ ಬಿಜೆಪಿ ಪಕ್ಷದ ಶಾಸಕ ಜಿ.ಜನಾರ್ದನರೆಡ್ಡಿ ನಡುವೆ ರಾಜ್ಯ ರಾಜಕೀಯ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಆಗಾಗ ವಾಗ್ದಾಳಿ ನಡೆಯುತ್ತಲೇ ಇರುತ್ತದೆ. ಈ ಕಾರಣಕ್ಕೆ ಆನೆಗೊಂದಿ ಉತ್ಸವ ಆಚರಣೆಗೆ ಆಸಕ್ತಿ ತೋರುತ್ತಿಲ್ಲ ಎನ್ನುವುದು ರೆಡ್ಡಿ ಬೆಂಬಲಿಗರ ಆರೋಪವಾಗಿದೆ.
ಸರ್ಕಾರ ಹಂಪಿ ಜೊತೆಗೆ ಆನೆಗೊಂದಿ ಉತ್ಸವಕ್ಕೂ ಅನುದಾನ ಬಿಡುಗಡೆ ಮಾಡಿ ಆಚರಿಸಬೇಕಿತ್ತು. ಈ ಉತ್ಸವ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆಜಿ.ಜನಾರ್ದನರೆಡ್ಡಿ ಗಂಗಾವತಿ ಶಾಸಕ
ಆನೆಗೊಂದಿ ವಿಜಯನಗರ ಸಾಮ್ರಾಜ್ಯದ ಆತ್ಮವಿದ್ದಂತೆ. ಅದನ್ನು ಬಿಟ್ಟು ಕೇವಲ ಹಂಪಿ ಉತ್ಸವ ಆಚರಣೆ ಮಾಡಿ ಆನೆಗೊಂದಿ ಉತ್ಸವ ನಿರ್ಲಕ್ಷಿಸುವುದು ಸರಿಯಲ್ಲ. ಸರ್ಕಾರ ತಕ್ಷಣವೇ ಉತ್ಸವ ಆಯೋಜಿಸಬೇಕುಶರಣಬಸಪ್ಪ ಕೋಲ್ಕಾರ, ಸಂಶೋಧಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.