ADVERTISEMENT

ಕುಷ್ಟಗಿ: ಭೂ ಮಂಜೂರಾತಿಗೆ ‘ತಬರ’ನಾದ ಯೋಧ

ಲೋಕಾಯುಕ್ತದಲ್ಲಿ ಸ್ವಯಂ ದೂರು ದಾಖಲಾದ ನಂತರ ಭೂಮಿ ಮಂಜೂರು

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 4:06 IST
Last Updated 22 ಜನವರಿ 2026, 4:06 IST
ಹುಲ್ಲಪ್ಪ ಇಲಾಳ
ಹುಲ್ಲಪ್ಪ ಇಲಾಳ   

ಕುಷ್ಟಗಿ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ದೇಶದ ರಕ್ಷಣೆಗೆ ಬದುಕು ಮುಡುಪಾಗಿಟ್ಟು ನಿವೃತ್ತಿಯಾದ ಸೈನಿಕನಿಗೆ ಅವಕಾಶವಿದ್ದರೂ ಭೂಮಿ ಮಂಜೂರು ಮಾಡುವಲ್ಲಿ ಸತಾಯಿಸಿದ ತಹಶೀಲ್ದಾರರು ಮತ್ತು ಉಪ ವಿಭಾಗಾಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಸ್ವಯಂ ದೂರು ದಾಖಲಿಸಿಕೊಂಡ ನಂತರವಷ್ಟೇ ಮಂಜೂರಾತಿ ನೀಡಿದ್ದಾರೆ.

ತಾಲ್ಲೂಕಿನ ಕಾಟಾಪುರ ಗ್ರಾಮದ ಹುಲ್ಲಪ್ಪ ರಂಗಪ್ಪ ಇಲಾಳ ಸೇವೆಯಿಂದ ನಿವೃತ್ತಿಯಾದ ನಂತರ 1985ರಿಂದಲೂ ಸರ್ಕಾರದ ಆದೇಶದಂತೆ ಭೂಮಿ ಮಂಜೂರು ಮಾಡುವಂತೆ ಕೋರಿ ಅರ್ಜಿ ಸಲ್ಲಿಸುತ್ತ ಬಂದಿದ್ದರು. ಲೋಕಾಯುಕ್ತರು ಬಿಸಿ ಮುಟ್ಟಿಸುತ್ತಿದ್ದಂತೆ ಎಚ್ಚರಗೊಂಡ ಕಂದಾಯ ಇಲಾಖೆ ಗ್ರಾಮದ 127ನೇ ಸರ್ವೆ ಸಂಖ್ಯೆಯ ಜಮೀನಿನಲ್ಲಿ 2 ಎಕರೆ ಜಮೀನನ್ನು ವ್ಯವಸಾಯದ ಉದ್ದೇಶಕ್ಕೆ ಮಂಜೂರು ಮಾಡಿ ಜಿಲ್ಲಾಧಿಕಾರಿ ಕಳೆದ ಜ.11ರಂದು ಆದೇಶ ಹೊರಡಿಸಿದ್ದಾರೆ. ನಾಲ್ಕು ದಶಕಗಳ ನಿರಂತರ ಕಚೇರಿಗಳಿಗೆ ಅಲೆದಾಡಿದ ಯೋಧ ಹುಲ್ಲಪ್ಪ ಭೂಮಿ ಪಡೆಯುವುದಕ್ಕೂ ಹೋರಾಟ ನಡೆಸಿದ್ದು ಅಂತೂ ಜಿಲ್ಲಾಡಳಿತ ತಬರನ ಕಥೆಗೆ ಮುಕ್ತಿ ದೊರಕಿಸಿಕೊಟ್ಟಿದೆ.

1980ರಲ್ಲಿ ಸೇನೆಗೆ ಸೇರಿದ ರಂಗಪ್ಪ ಇಂದಿರಾಗಾಂಧಿ ಪ್ರಧಾನಿ ಆಗಿದ್ದಾಗ ಪಂಜಾಬಿನ ಅಮೃತಸರದ ಸಿಖ್ಖರ ಪವಿತ್ರ ಗುರುದ್ವಾರದಲ್ಲಿ ಅಡಗಿದ್ದ ಭಿಂದ್ರನ್‌ವಾಲೆ ಹುಟ್ಟಡಗಿಸಲು ನಡೆಸಿದ 'ಅಪರೇಷನ್‌ ಬ್ಲೂ ಸ್ಟಾರ್‌' ಕಾರ್ಯಾಚರಣೆಯಲ್ಲಿಯೂ ಭಾಗಿಯಾಗಿ ಗುಂಡೇಟಿನಿಂದ ಗಾಯಗೊಂಡಿದ್ದರು. ನಂತರ 1984ರಲ್ಲಿ ಸೇವೆಯಿಂದ ನಿವೃತ್ತಿಗೊಂಡಿದ್ದರು. 1985ರ ನ.19ರಂದು ಭೂ ಮಂಜೂರಾತಿಗೆ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದ ರಂಗಪ್ಪ ಅಂದಿನಿಂದ ಇಲ್ಲಿವರೆಗೂ ನಡೆಸಿದ ಪ್ರಯತ್ನ ಅಷ್ಟಿಷ್ಟಲ್ಲ. ರಾಜ್ಯದ ಇದೇ ರೀತಿಯ ಬಾಕಿ ಇರುವ ಅನೇಕ ಪ್ರಕರಣಗಳ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಎದುರಾಳಿಗಳಿಗೆ ನೋಟಿಸ್‌ ನೀಡಿದ್ದರು.

ADVERTISEMENT

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಜಿಲ್ಲೆಯಲ್ಲಿ ಭೂ ಮಂಜೂರಾತಿಗೆ ಸಂಬಂಧಿಸಿದ ಅನೇಕ ಅರ್ಜಿಗಳಿದ್ದು 10 ಜನ ಯೋಧರಿಗೆ ಭೂಮಿ ಮಂಜೂರು ಮಾಡಿ ಆದೇಶ ಹೊರಡಿಸಿರುವುದಾಗಿ ತಿಳಿಸಿದರು. ವೈಯಕ್ತಿಕ ಬದುಕು ತ್ಯಜಿಸಿ ಮತ್ತು ಕುಟುಂಬದಿಂದ ದೂರ ಉಳಿದು ಸೇವೆ ಮಾಡಿರುವ ಮಾಜಿ ಸೈನಿಕರಿಗೆ ಗೌರವ ನೀಡುವ ಒಳ್ಳೆಯ ಉದ್ದೇಶದಿಂದ ಈ ಪ್ರಕರಣ ಕೈಗೆತ್ತಿಕೊಂಡಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಅರ್ಹರಾಗಿರುವ ಮಾಜಿ ಸೈನಿಕರಿಗೆ ಭೂಮಿ ಮಂಜೂರು ಮಾಡುವ ಮೂಲಕ ಒಂದೇ ಹಂತದಲ್ಲಿ 2–3 ತಿಂಗಳಲ್ಲಿ ಎಲ್ಲ ಅರ್ಜಿಗಳನ್ನೂ ವಿಲೇವಾರಿ ಮಾಡಿ ಅರ್ಜಿ ಬಾಕಿ ಉಳಿಯದಂತೆ ಕ್ರಮ ವಹಿಸುತ್ತೇವೆ
ಸುರೇಶ ಇಟ್ನಾಳ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.