ADVERTISEMENT

ಕನಕಗಿರಿ | ಮೆಕ್ಕೆಜೋಳ: ಬೆಲೆ ಕುಸಿತ, ಮಳೆಯ ಹೊಡೆತ

ಹೆಚ್ಚಿನ ಪ್ರಮಾಣದಲ್ಲಿ ಆವಕ: ಪ್ರತಿ ಕ್ವಿಂಟಲ್‌ಗೆ ₹1,850 ಮಾರಾಟ

ಪ್ರಜಾವಾಣಿ ವಿಶೇಷ
Published 25 ಅಕ್ಟೋಬರ್ 2025, 6:44 IST
Last Updated 25 ಅಕ್ಟೋಬರ್ 2025, 6:44 IST
ಕನಕಗಿರಿ ಸಮೀಪದ ಸುಳೇಕಲ್ ಗ್ರಾಮದ ಡಾಂಬರು ರಸ್ತೆಯಲ್ಲಿ ರೈತರು ಮೆಕ್ಕೆಜೋಳ ಹಸನು ಮಾಡುತ್ತಿರುವುದು
ಕನಕಗಿರಿ ಸಮೀಪದ ಸುಳೇಕಲ್ ಗ್ರಾಮದ ಡಾಂಬರು ರಸ್ತೆಯಲ್ಲಿ ರೈತರು ಮೆಕ್ಕೆಜೋಳ ಹಸನು ಮಾಡುತ್ತಿರುವುದು   

ಕನಕಗಿರಿ: ತಾಲ್ಲೂಕಿನ ಚಿಕ್ಕಡಂಕನಕಲ್, ಜೀರಾಳ ಗ್ರಾಮ ಪಂಚಾಯಿತಿ ಹೊರತುಪಡಿಸಿದರೆ ಉಳಿದ ಎಲ್ಲಾ ಪ್ರದೇಶ ಸಂಪೂರ್ಣ ಮಳೆ ಆಧಾರಿತವಾಗಿದೆ. ತಾಲ್ಲೂಕಿನಲ್ಲಿ ಈ ಸಲ ಮುಂಗಾರು ಮಳೆ‌ ಉತ್ತಮವಾಗಿ ಸುರಿದಿದೆ. ರೈತರು ವಿವಿಧ ಬೆಳೆಗಳನ್ನು ಬೆಳೆದಿದ್ದರೂ ಅವುಗಳಿಗೆ ಉತ್ತಮ‌ ಬೆಲೆ ಸಿಗದ ಹಿನ್ನೆಲೆಯಲ್ಲಿ ಕಂಗಾಲಾಗಿದ್ದಾರೆ.

ಪಂಪ್‌ಸೆಟ್ ಹಾಗೂ ಮಳೆಯಾಶ್ರಿತ ರೈತರು ಸಜ್ಜೆ, ಜೋಳ, ಸೂರ್ಯಕಾಂತಿ, ಗೋವಿನಜೋಳ, ಶೇಂಗಾ(ಕಡಲೆ), ಹೆಸರು, ಅಲ್ಪಸ್ವಲ್ಪ ಮಡಿಕೆ, ಔಡಲ ಬೆಳೆಗಳನ್ನು ಬೆಳೆದಿದ್ದಾರೆ. ಸಜ್ಜೆ ಹಾಗೂ ಗೋವಿನಜೋಳದ ಫಸಲು ರೈತರ ಕೈಸೇರಿದೆ. ಆದರೆ ರೈತರ ಫಸಲು ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆ ಬೆಲೆ ಕುಸಿತ ಕಂಡಿರುವುದು ಸಂಕಷ್ಟಕ್ಕೆ ದೂಡಿದೆ. ಕಳೆದ ತಿಂಗಳಿಂದಲೂ ಗೋವಿನಜೋಳ ಕಟಾವು ಮಾಡಿರುವ ರೈತರು ಹೊಲದಲ್ಲಿರುವ ಖಣ, ಗಂಗಾವತಿ, ಕೊಪ್ಪಳ ರಸ್ತೆಗಳಲ್ಲಿ ಹಾಗೂ ಎಪಿಎಂಸಿಯ ಎಲ್ಲಾ ಸಿಸಿ ರಸ್ತೆಗಳಲ್ಲಿ ಗೋವಿನ ಜೋಳವನ್ನು ಹಸನು ಮಾಡಿ ಒಣಗಿಸುತ್ತಿರುವುದು ಕಂಡುಬಂದಿದೆ.

ಆರಂಭದಲ್ಲಿ ಕ್ವಿಂಟಲ್ ಗೋವಿನಜೋಳಕ್ಕೆ ₹2,200-₹2,500 ದರ ಇತ್ತು. ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದ್ದಂತೆ ದರ ಕುಸಿತ ಕಂಡಿದೆ. ಸದ್ಯ ಕ್ವಿಂಟಲ್ ಗೋವಿನ‌ಜೋಳಕ್ಕೆ ₹1,850‌ ಇದೆ. ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಬಂದಿದ್ದರೂ ಖರೀದಿಸುವವರು ಇಲ್ಲವಾಗಿದ್ದಾರೆ. ಅನಿವಾರ್ಯವಾಗಿ ಸಿಕ್ಕ ಬೆಲೆಗೆ ದಲ್ಲಾಳಿ ವರ್ತಕರಿಗೆ ಮಾರಾಟ‌ ಮಾಡುವಂತಹ ಪರಿಸ್ಥಿತಿ ಇದೆ ಎಂದು ರೈತರು ಅಳಲು ತೋಡಿಕೊಂಡರು.

ADVERTISEMENT

ಕೆಲ ದಲ್ಲಾಳಿ ವರ್ತಕರು ಸಹ ರೈತರಿಂದ ಖರೀದಿಗೆ ಹಿ‌ಂದೇಟು ಹಾಕುತ್ತಿರುವುದರಿಂದ ರೈತರು ನೇರವಾಗಿ ಖರೀದಿದಾರರಿಗೆ ಗೋವಿ‌ನ ಜೋಳ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇಲ್ಲಿಯೇ ಉತ್ತಮ‌ ಬೆಲೆ ಸಿಗುತ್ತಿರುವುದರಿಂದ ತಾಲ್ಲೂಕು ಮಾತ್ರವಲ್ಲದೆ ಪಕ್ಕದ ಕೊಪ್ಪಳ, ಗಂಗಾವತಿ,‌ ಕುಷ್ಟಗಿ ತಾಲ್ಲೂಕುಗಳ ಕೊನೆಯ ಭಾಗದ ರೈತರು ಕೂಡ ಇಲ್ಲಿನ ಎಪಿಎಂಸಿಗೆ ಧಾನ್ಯಗಳನ್ನು ಮಾರಾಟ ಮಾಡಲು ತರುತ್ತಿದ್ದಾರೆ ಎಂದು ದಲ್ಲಾಳಿ ವರ್ತಕರು ತಿಳಿಸುತ್ತಾರೆ.

ಸದ್ಯ ಪಟ್ಟಣದ ಎಪಿಎಂಸಿ ಒಳಗೊಂಡಂತೆ ತಿಪ್ಪನಾಳ, ಸೂಳೇಕಲ್, ಅರಳಹಳ್ಳಿ, ನವಲಿ, ಹಿರೇಖೇಡ, ಹುಲಿಹೈದರ, ಮುಸಲಾಪುರ, ಗೌರಿಪುರ ಸೇರಿದಂತೆ ಇತರೆ ಗ್ರಾಮಗಳ ರಸ್ತೆ ಹಾಗೂ‌ ಲೇಔಟ್‌ಗಳ ಸಿಸಿ, ಡಾಂಬರೀಕರಣ ರಸ್ತೆಗಳಲ್ಲಿ ಗೋವಿನಜೋಳ ಒಣಗಿಸುತ್ತಿರುವುದು‌ ಕಂಡುಬಂದಿದೆ.

‘ಗೋವಿನಜೋಳದ ಆವಕ ಕಡಿಮೆಯಿದ್ದಾಗ ಪ್ರತಿ ಕ್ವಿಂಟಲ್‌ಗೆ ₹2,500ಕ್ಕೆ ಮಾರಾಟವಾಗುತ್ತಿತ್ತು. ದಿನ ಕಳೆದಂತೆ ಮಾರುಕಟ್ಟೆಗೆ ಫಸಲು ಹೆಚ್ಚಿನ ಪ್ರಮಾಣದಲ್ಲಿ ಆವಕ ಆಗುತ್ತಿರುವುದರಿಂದ ಬೆಲೆ ಕಡಿಮೆಯಾಗಿದೆ. ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿಯೂ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೋವಿನಜೋಳ ಬೆಳೆದಿರುವುದರಿಂದ ಹಾಗೂ ಮಾರುಕಟ್ಟೆಗೆ ಒಮ್ಮೆಲೆ ಫಸಲು ಆವಕ ಆಗುವುದರಿಂದ ಬೆಲೆ ಕಡಿಮೆಯಾಗಿದೆ’ ಎಂದು ರೈತ ಭೀಮನಗೌಡ ಜೀರಾಳ ತಿಳಿಸುತ್ತಾರೆ.

ಇಡೀ ವಾರ ಕಾಡಿದ ವರುಣ

ಕಳೆದ ಐದಿನೈದು ದಿನಗಳ ಹಿಂದೆ ಗೋವಿನಜೋಳ ಕಟಾವು ಮಾಡಿ ಒಣಗಿಸಲು ಶುರು ಮಾಡಿದಾಗ ಇಡೀ ವಾರ ಮಳೆ ಸುರಿಯಿತು. ಹಗಲು– ರಾತ್ರಿ ಎನ್ನದೆ ಬೆಳೆ ಕಾದು ಸಿಕ್ಕ ದರಕ್ಕೆ ಮಾರಾಟ ಮಾಡಿದ್ದೇವೆ. ಸಜ್ಜೆ, ಮೆಕ್ಕೆಜೋಳ ಬೆಳೆದ ರೈತರ ಪರಿಸ್ಥಿತಿ ಹೇಳತೀರದು ಎಂದು ರೈತರು ದುಃಖದಿಂದ ಹೇಳಿದರು.

‘ಹೊಲವನ್ನು ಹದಗೊಳಿಸುವುದು, ಬೀಜ-ಗೊಬ್ಬರ, ಆಳು, ಕಸ ಕಡ್ಡಿ ತೆಗೆಯುವುದು, ಕುಂಟಿ ಹೊಡೆಯುವುದು, ಕಟಾವು ಮಾಡುವುದು ಸೇರಿದಂತೆ ಎಕರೆಗೆ ಸುಮಾರು ₹15 ಸಾವಿರದಿಂದ ₹20 ಸಾವಿರ ಖರ್ಚಾಗುತ್ತದೆ. ರೈತನ ಶ್ರಮಕ್ಕೆ ಬೆಲೆ ಇಲ್ಲದಂತಾಗಿದೆ’ ಎಂದು ಹನುಮಂತಪ್ಪ ಅಳಲು ತೋಡಿಕೊಂಡಿದ್ದಾರೆ.

‘ಇದು ಒಂದು ವರ್ಷದ ಮಾತು ಅಲ್ಲ, ಪ್ರತಿವರ್ಷ ಮಾರುಕಟ್ಟೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ ಬೆಲೆ ಕಡಿಮೆಯಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಭರಪೂರ ಭರವಸೆ ನೀಡುವ ರಾಜಕಾರಣಿಗಳು ರೈತನ ಫಸಲಿಗೆ ವೈಜ್ಞಾನಿಕ ಬೆಲೆ ಕೊಡಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಪ್ರತಿ ಬಾರಿ ರೈತರ ಫಸಲು ಮಾರುಕಟ್ಟೆಗೆ ಬರುತ್ತಿದ್ದಂತೆ ಖರೀದಿದಾರರು ದಿಢೀರ್‌ ಬೆಲೆ ಕಡಿಮೆ ಮಾಡುತ್ತಾರೆ. ಸಾಲ ಮಾಡಿ ಬಿತ್ತನೆ ಮಾಡಿರುವ ರೈತರು ಸಾಲ ತೀರಿಸಿದರೆ ಸಾಕು ಎಂಬ ಹತಾಶೆಯಿಂದ ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಾರೆ’ ಎಂದು ಯಂಕೋಬ ಹೇಳಿದರು.

‘ಕೇಂದ್ರ ಸರ್ಕಾರ ಒಟ್ಟು 2,400 ಮೆಕ್ಕೆಜೋಳ ಬೆಂಬಲ ಕೇಂದ್ರ ಆರಂಭಿಸಿದ್ದು ಕನಕಗಿರಿಯಲ್ಲಿಯೂ ಒಂದು ಕೇಂದ್ರ ತೆರೆಯಬೇಕು’ ಎಂದು ಮಹಾಂತೇಶ ಸಜ್ಜನ್ ಮನವಿ ಮಾಡಿಕೊಂಡರು.

ಮೆಕ್ಕೆಜೋಳವು ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿರುವುದರಿಂದ‌ ದರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೀಗಾಗಿ ಖರೀದಿದಾರರು ಮುಂದೆ ಬರುತ್ತಿಲ್ಲ.
-ಮಹಾಂತೇಶ ಸಜ್ಜನ್, ಅಧ್ಯಕ್ಷ ದಲ್ಲಾಳಿ ವರ್ತಕರ ಸಂಘ ಕನಕಗಿರಿ
ಈ ವರ್ಷ ಸಜ್ಜೆ ಮೆಕ್ಕೆಜೋಳ ಬೆಳೆದ ರೈತರ ಪರಿಸ್ಥಿತಿ ದೇವರೇ ಬಲ್ಲ ಎನ್ನುವಂತಾಗಿದೆ. ಸರ್ಕಾರ ಬೆಂಬಲ ಬೆಲೆ ನೀಡಿ ಸಂಕಷ್ಟಕ್ಕೆ ಸ್ಪಂದಿಸಬೇಕು
-ಭೀಮನಗೌಡ, ರೈತ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಕನಕಗಿರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.