ADVERTISEMENT

ಮಕ್ಕಳ ಚಿಕಿತ್ಸೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ: ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

ಕೋವಿಡ್ 3ನೇ ಅಲೆ ಎದುರಿಸಲು ಪೂರ್ವಭಾವಿ ಸಿದ್ಧತಾ ಸಭೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 3:13 IST
Last Updated 11 ಜೂನ್ 2021, 3:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಪ್ಪಳ: ಕೋವಿಡ್ 3ನೇ ಅಲೆ ಸಂದರ್ಭದಲ್ಲಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಬೇಕಾಗುವ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲೆ ಯಲ್ಲಿ ಕೊರೊನಾ ಸಂಭಾವ್ಯ ಮೂರನೇ ಅಲೆಯಿಂದ ಮಕ್ಕಳ ರಕ್ಷಣೆ ಹಾಗೂ ಆರೈಕೆಗೆ ಕೈಗೊಳ್ಳ ಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಆಯೋಜಿಸ ಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಮೂರನೇ ಅಲೆ ಅಂಗವಾಗಿ ಹೆಚ್ಚಿನ ಮಕ್ಕಳು ಬಾಧಿತರಾಗುವ ಸಾಧ್ಯತೆ ಇರುವುದರಿಂದ ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಬೆಡ್‌ಗಳ ವ್ಯವಸ್ಥೆ, ಆಮ್ಲಜನಕ, ವೆಂಟಿಲೇಟರ್ ಸೇರಿದಂತೆ ಅಗತ್ಯ ಸಿದ್ಧತೆ ಕೈಗೊಳ್ಳಿ. ಮಕ್ಕಳ ತಜ್ಞರನ್ನು ನೇಮಕ ಮಾಡಿಕೊಂಡು ರೀತಿಯ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಜಿಲ್ಲೆಯಲ್ಲಿ ಕೋವಿಡ್‌ನಿಂದ ತಂದೆ ಅಥವಾ ತಾಯಿಯನ್ನು ಕಳೆದುಕೊಂಡು ಏಕ ಪೋಷಕತ್ವದಲ್ಲಿರುವ 98 ಮಕ್ಕಳಿದ್ದು, ಅವರಿಗೆ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿ. ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರದಿಂದ ಬಾಲ ಸೇವಾ ಯೋಜನೆ ಜಾರಿಗೊಳಿಸಿದ್ದು, ಮಾಸಾಶನ, ಉಚಿತ ಶೈಕ್ಷಣಿಕ ಸೌಲಭ್ಯ, ಲ್ಯಾಪ್‌ಟಾಪ್ ಸೌಲಭ್ಯವಿದೆ ಎಂದು ಅವರು ಹೇಳಿದರು.

ಅನಾಥರಾಗುವ ಮಕ್ಕಳ ಭವಿಷ್ಯ ರೂಪಿಸಲು ದತ್ತು ನಿಯಮ, ಕಾನೂನು ಅನುಸಾರ ಯಾರಾದರೂ ದಾನಿಗಳು, ಸಂಘ-ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಭವಿಷ್ಯ ರೂಪಿಸಲು ಮುಂದೆ ಬಂದಲ್ಲಿ ದತ್ತು ನಿಯಮ ಪ್ರಕಾರ ಅವರಿಗೆ ಸರ್ಕಾರದಿಂದ ಸಹಕಾರ ಕಲ್ಪಿಸಲಾಗುವುದು.

ಹೆಣ್ಣು ಮಕ್ಕಳು ಅನಾಥವಾಗಿದ್ದಲ್ಲಿ 21 ವರ್ಷದವರಾಗಿದ್ದಲ್ಲಿ ಅಂತವರ ಭವಿಷ್ಯಕ್ಕಾಗಿ ಸರ್ಕಾರ ₹1 ಲಕ್ಷ ನೆರವನ್ನು ಸಹ ನೀಡುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ಕೋವಿಡ್‌ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳ ಸಮೀಕ್ಷೆಯನ್ನು ಸೂಕ್ತ ರೀತಿಯಲ್ಲಿ ಮಾಡಿ ವರದಿ ಸಲ್ಲಿಸಿ. ಕೋವಿಡ್ ಹೊರತುಪಡಿಸಿ ಬೇರಾವುದೇ ಕಾಯಿಲೆ, ಕಾರಣಗಳಿಂದ ಅನಾಥವಾದ ಮಕ್ಕಳ ಸಮೀಕ್ಷೆಯನ್ನೂ ಮಾಡಿ ಎಂದು ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಇದುವರೆಗೂ 2,347 ಮಕ್ಕಳಿಗೆ ಕೋವಿಡ್ ಸೋಂಕು ತಗುಲಿದ್ದು, ಪ್ರಸ್ತುತ 292 ಸಕ್ರಿಯ ಪ್ರಕರಣ ಇವೆ. ನಿಯಮಾನುಸಾರ ಸೋಂಕಿತ ಮಕ್ಕಳಿಗೆ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಹಾಗೂ ಹೋ ಐಸೋಲೇಷನ್‌ನಲ್ಲಿ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದೆ.

0-10 ವರ್ಷದೊಳಗಿನ ಮಕ್ಕಳಿಗೆ ಪಾಲಕರ ಅವಶ್ಯಕತೆ ಇರುವುದರಿಂದ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಮಕ್ಕಳೊಂದಿಗೆ ಅವರ ಪಾಲಕರು ಇರಲು ವ್ಯವಸ್ಥೆ ಮಾಡಬೇಕು. 10-18 ವರ್ಷದ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಸೂಚನೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ, ಡಿಎಚ್ಒಡಾ.ಲಿಂಗರಾಜು ಟಿ. ಅವರಿಂದ ಮಕ್ಕಳಲ್ಲಿ ಕಾಣಿಸುವ ಸೋಂಕಿನ ಬಗ್ಗೆ ಮಾಹಿತಿ ಪಡೆದರು.

ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತಿ ಸಿಇಒರಘುನಂದನ್ ಮೂರ್ತಿ, ಎಸ್ಪಿ ಟಿ.ಶ್ರೀಧರ್,ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.