ಅಳವಂಡಿ (ಕೊಪ್ಪಳ ಜಿಲ್ಲೆ): ತೊಗಲುಗೊಂಬೆಯಾಟದಲ್ಲಿ ಮಾಡಿದ ಸಾಧನೆಗೆ ಪದ್ಮಶ್ರೀ ಗೌರವ ಪಡೆದಿರುವ ತಾಲ್ಲೂಕಿನ ಮೋರನಾಳ ಗ್ರಾಮದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರ ಪ್ರತಿಭೆಗೆ ಮೇಘಾಲಯ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ಮನಸೋತರು.
ರಾಜ್ಯಪಾಲರು ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಅಜ್ಜಿಯನ್ನು ಸನ್ಮಾನಿಸಿ ಮೇಘಾಲಯ ರಾಜಭವನದ ಉಡುಗೊರೆ ನೀಡಿದರು. ಕಲೆಯ ವೈಶಿಷ್ಟತೆ, ಹಿನ್ನಲೆ ಮತ್ತು ಗೊಂಬೆಯಾಟ ಆಡಿಸುವ ವಿಧಾನಗಳ ಬಗ್ಗೆ ತಿಳಿದುಕೊಂಡರು. ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ಹೇಳುವ ತೊಗಲುಗೊಂಬೆಯಾಟದ ಕೆಲವು ಹಾಡುಗಳನ್ನು ಅಜ್ಜಿ ಹಾಗೂ ಅವರ ಪುತ್ರ ಕೇಶಪ್ಪ ಶಿಳ್ಳೇಕ್ಯಾತರ ಹಾಡಿದರು.
ಅಜ್ಜಿ ಹಾಗೂ ಅವರ ಕುಟುಂಬದವರು ಹಾಡಿದ ಹಾಡುಗಳನ್ನು ಮನತುಂಬಿ ಆಲಿಸಿದ ರಾಜ್ಯಪಾಲರು ಮೆಚ್ಚುಗೆ ವ್ಯಕ್ತಪಡಿಸಿ ’ಮೇಘಾಲಯದ ರಾಜಭವನದಲ್ಲಿ ಈ ಕಲೆ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಇದೇ ಕಲಾವಿದರನ್ನು ಕರೆಯಿಸಬೇಕು’ ಎಂದು ತಮ್ಮ ವಿಶೇಷ ಕರ್ತವ್ಯಾಧಿಕಾರಿಗೆ ನಿರ್ದೇಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.