ADVERTISEMENT

ಡಿ.ಜೆ. ಅಬ್ಬರಕ್ಕೆ ಹೆಜ್ಜೆಹಾಕಿದ ಶಾಸಕ ದಢೇಸಗೂರ

ಜಾತ್ರೆ: ಗಂಗೆಸ್ಥಳದ ಅದ್ದೂರಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 16:11 IST
Last Updated 4 ಸೆಪ್ಟೆಂಬರ್ 2022, 16:11 IST
ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಭಾನುವಾರ ಶರಣಬಸವೇಶ್ವರ ಪುರಾಣ ಮಂಗಲದ ನಿಮಿತ್ತ ನಡೆದ ಗಂಗೆಸ್ಥಳಕ್ಕೆ ಹೋಗಿಬರುವ ಮೆರವಣಿಗೆಯಲ್ಲಿ ಸೇರಿದ್ದ ಜನ
ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಭಾನುವಾರ ಶರಣಬಸವೇಶ್ವರ ಪುರಾಣ ಮಂಗಲದ ನಿಮಿತ್ತ ನಡೆದ ಗಂಗೆಸ್ಥಳಕ್ಕೆ ಹೋಗಿಬರುವ ಮೆರವಣಿಗೆಯಲ್ಲಿ ಸೇರಿದ್ದ ಜನ   

ಕಾರಟಗಿ (ಕೊಪ್ಪಳ ಜಿಲ್ಲೆ): ಪಟ್ಟಣದಲ್ಲಿ ಶ್ರಾವಣ ಮಾಸದ ನಿಮಿತ್ತ ಒಂದು ತಿಂಗಳು ನಡೆದಿದ್ದ 48ನೇ ವರ್ಷದ ಶರಣಬಸವೇಶ್ವರ ಪುರಾಣ ಮಂಗಲದ ನಿಮಿತ್ತ ಗಂಗೆಸ್ಥಳಕ್ಕೆ ಹೋಗಿಬರುವ ಮೆರವಣಿಗೆ ಭಾನುವಾರ ಸಾವಿರಾರು ಭಕ್ತರ ನಡುವೆ ಸಂಭ್ರಮದಿಂದ ನಡೆಯಿತು.

ಕಾಲುವೆಯಲ್ಲಿ ಗಂಗಾಪೂಜೆ ನೆರವೇರಿಸಿದ ಬಳಿಕ ನಡೆದ ಮೆರವಣಿಗೆಯಲ್ಲಿ ಪಲ್ಲಕ್ಕಿ ಸೇವೆ, ಪೂರ್ಣಕುಂಭ, ಕಳಸ ಹೊತ್ತ ಮಹಿಳೆಯರು, ಪಲ್ಲಕ್ಕಿ ಉತ್ಸವ ನಡೆದವು. ಕೋವಿಡ್‌ ಕಾರಣದಿಂದ ಹಿಂದಿನ ಎರಡು ವರ್ಷ ಸಾಂಕೇತಿಕವಾಗಿ ಮಾತ್ರ ಜಾತ್ರೆ ನಡೆದಿತ್ತು. ಈ ಬಾರಿ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಶರಣಬಸವೇಶ್ವರ, ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಪೂಜೆ, ಅಲಂಕಾರ, ಅರ್ಚನೆ, ರುದ್ರಾಭಿಷೇಕ ಜರುಗಿದವು. ಅರ್ಚಕರಾದ ಮುತ್ತಯ್ಯಸ್ವಾಮಿ ಹಿರೇಮಠ, ಶಿವಪುತ್ರಯ್ಯಸ್ವಾಮಿ ಹಿರೇಮಠ ಮತ್ತವರ ಕುಟುಂಬದ ಸದಸ್ಯರಿಂದ ನಡೆದವು.

ADVERTISEMENT

ಶ್ರೀಗಳ ಆಗಮನ: ಹೆಬ್ಬಾಳ ಬೋಳೋಡಿ ಬಸವೇಶ್ವರ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯ, ಅರಳಳ್ಳಿ ಗವಿಸಿದ್ದೇಶ್ವರ ತಾತ, ಹಿರೇಮಠದ ಮರುಳಸಿದ್ದಯ್ಯಸ್ವಾಮಿ, ತಲೆಖಾನ
ಮಠದ ವೀರಭದ್ರೇಶ್ವರ ಶರಣ ಸಾನ್ನಿಧ್ಯ ವಹಿಸಿ, ಭಕ್ತರಿಗೆ ಶುಭ ಕೋರಿದರು.

ಮೆರವಣಿಗೆಯ ಡಿ.ಜೆ. ಅಬ್ಬರಕ್ಕೆ ಶಾಸಕ ಬಸವರಾಜ ದಢೇಸುಗೂರ ಹಾಗೂ ಮಾಜಿ ಸಚಿವ ಶಿವರಾಜ್‌ ತಂಗಡಗಿ ತಮ್ಮ ಬೆಂಬಲಿಗರೊಂದಿಗೆ ಹೆಜ್ಜೆ ಹಾಕಿದ್ದ ಗಮನ ಸೆಳೆಯಿತು. ಸೋಮವಾರ ಶರಣಬಸವೇಶ್ವರರ ಬೆಳ್ಳಿಮೂರ್ತಿಗಳೊಂದಿಗೆ ಜೋಡು ರಥೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.