
ಗಂಗಾವತಿ: ‘ಸಾಮೂಹಿಕ ವಿವಾಹಗಳಿಂದ ಕುಟುಂಬಗಳಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಎಲ್ಲರೂ ಇದರ ಉಪಯೋಗ ಪಡೆಯಬೇಕು. ಎಲ್ಲರೂ ಧರ್ಮದ ಮಾರ್ಗದಲ್ಲಿ ನಡೆಯಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ’ ಹೇಳಿದರು.
ನಗರದ ಹೊಸಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಶಿವಸಿದ್ಧ ಬೀರಲಿಂಗೇಶ್ವರ ದೇವಸ್ಥಾನದ ನೂತನ ರಥೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹೊಸಳ್ಳಿ ಗ್ರಾಮಸ್ಥರು ಧರ್ಮ ಜಾಗೃತಿಗಾಗಿ ದೇವಾಲಯಕ್ಕೆ ನೂತನ ರಥೋತ್ಸವ, ಸಾಮೂಹಿಕ ವಿವಾಹ ಸೇರಿದಂತೆ ಜನರಿಗೆ ಒಳಿತಾಗುವ ಕಾರ್ಯಕ್ರಮ ಮಾಡುತ್ತಿರುವುದು ಸಂತಸದ ವಿಷಯ. ಈ ಹಿಂದೆ ನಮ್ಮ ತಂದೆ ಈ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ನಾನೀಗ ನೂತನ ರಥೋತ್ಸವ ಲೋಕಾರ್ಪಣೆಗೆ ಆಗಮಿಸಿದ್ದೇನೆ’ ಎಂದರು.
ಸಚಿವ ಶಿವರಾಜ ತಂಗಡಗಿ ದೇವಸ್ಥಾನದ ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ₹50ಲಕ್ಷ ಅನುದಾನ ಮಂಜೂರು ಮಾಡಿದ್ದು, ನಾನು ಸಹ ನನ್ನ ವಿವೇಚನಾ ನಿಧಿಯಿಂದ ₹10 ಲಕ್ಷ ಹಣ ಮಂಜೂರು ಮಾಡುತ್ತಿದ್ದೇನೆ. ಇದರ ಉಪಯೋಗದ ಜೊತೆಗೆ ಮಕ್ಕಳಿಗೆ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಿಕೊಡಬೇಕು. ಇನ್ನೂ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳನ್ನು ಬಳಸಿಕೊಳ್ಳಬೇಕು’ ಎಂದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ‘ಹೊಸಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ದೇವಸ್ಥಾನದ ಜೊತೆಗೆ ನೂತನ ರಥ ನಿರ್ಮಿಸಿ, ಜಾತ್ರೆಯ ನಿಮಿತ್ತ ಸಾಮೂಹಿಕ ವಿವಾಹಗಳು ಏರ್ಪಡಿಸಿ, ಧರ್ಮ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಗಂಗಾವತಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಹಾವೇರಿಯಲ್ಲಿ ನಡೆದ ಸಾವಿರ ದಿನಗಳ ಕಾರ್ಯಕ್ರಮದಲ್ಲಿ 2.20 ಲಕ್ಷ ಫಲಾನುಭವಿಗಳಿಗೆ ಭೂಮಿ ಹಕ್ಕು ಪತ್ರವಿರಿಸಲಾಗಿದೆ. ಈ ಸಾಧನೆಯನ್ನು ವಿಪಕ್ಷದವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ’ ಎಂದರು.
ಸಾಮೂಹಿಕ ವಿವಾಹದಲ್ಲಿ 12 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೊಟ್ಟೂರು ಸ್ವಾಮೀಜಿ, ಹೆಬ್ಬಾಳದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಕೊಳಗೇರಿ ಅಭಿವೃದ್ಧಿ ಮಂಡಳಿ ನಿರ್ದೇಶಕ ರಾಮಕೃಷ್ಣರೊಳ್ಳಿ, ರಾಜವಂಶಸ್ಥೆ ಲಲಿತಾರಾಣಿ, ನೆಕ್ಕಂಟಿ ಸೂರಿಬಾಬು, ರೆಡ್ಡಿ ಶ್ರೀನಿವಾಸ, ದೇವಪ್ಪ ಕಟ್ಟಿಮನಿ, ವೆಂಕಟಕೃಷ್ಣ ನಾನಿ, ನಾಗವೇಣಿ, ತಿಪ್ಪೇರುದ್ರಸ್ವಾಮಿ, ಫಕೀರಯ್ಯ, ಎಮ್ಮಿ ಪಕೀರಪ್ಪ, ಡ್ಯಾಗಿ ರುದ್ರೇಶ, ಅಯ್ಯಣ್ಣ ರಾಯಚೂರು, ವಿಠಲಾಪೂರ ಯಮನಪ್ಪ, ಕೆ.ನಾಗೇಶಪ್ಪ, ದಾದೆಸಾಬ, ಶಾಮೀದ್ ಸಾಬ, ಲಿಂಗಪ್ಪ ದೊಡ್ಮನಿ, ಸೋಮನಾಥ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.