ಕೊಪ್ಪಳ: ನಗರದಲ್ಲಿ ಶುಕ್ರವಾರ ನಡೆದ ಮುಹಮ್ಮದ್ ಪೈಗಂಬರರ ಜಯಂತ್ಯುತ್ಸವದ ಮೆರವಣಿಗೆ ವೇಳೆ ಮುಸ್ಲಿಮರು ಇಲ್ಲಿನ ಗಡಿಯಾರ ಕಂಬದ ಗಜಾನನ ಮಿತ್ರ ಮಂಡಳಿಯ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದರು.
ಮೆರವಣಿಗೆಯ ಜೊತೆಗೆ ಬಂದ 7ನೇ ವಾರ್ಡಿನ ವಾಹೀದ್ ಸೋಂಪೂರ್ ಮತ್ತು ಸಂಗಡಿಗರು ಗಣಪತಿ ಪ್ರತಿಷ್ಠಾಪಿಸಿದ್ದ ಸ್ಥಳಕ್ಕೆ ಭೇಟಿ ನೀಡಿ, ಹೂವಿನ ಹಾರ ಹಾಕಿ, ಆರತಿ ಬೆಳಗಿ ಪೂಜೆ ಸಲ್ಲಿಸಿದರು.
ಬಳಿಕ ಪ್ರಸಾದ ಸೇವಿಸಿ, ಪರಸ್ಪರರು ಹಬ್ಬಕ್ಕೆ ಶುಭಾಶಯವ ವಿನಿಮಯ ಮಾಡಿಕೊಂಡರು. ಸ್ಥಳದಲ್ಲಿದ್ದ ಅಜ್ಜಪ್ಪ ಸ್ವಾಮಿ ಮತ್ತು ಸಿದ್ದಪ್ಪಜ್ಜ ಹಿರೇಮಠ ಪೂಜೆ ಕೈಗೊಳ್ಳಲು ಸಹಕಾರ ನೀಡಿದರು.
‘ಕೊಪ್ಪಳ ಕಾ ಯುವರಾಜ’ ಗಣಪತಿ ಮಂಡಳಿಯವರು ಗಾಂಧಿ ವೃತ್ತದ ಬಳಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮುಸ್ಲಿಮರಿಗಾಗಿ ಅನ್ನ ಸಂತರ್ಪಣೆಯನ್ನು ಏರ್ಪಡಿಸಿದ್ದರು. ಮುಸಲ್ಮಾನರಿಗೆ ಪಲಾವ್, ಸೋನ್ ಪಾಪಡಿ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಹಿಂದೂ–ಮುಸ್ಲಿಮರ ಈ ಸೌಹಾರ್ದದ ನಡೆಗೆ ಸಾರ್ವಜನಿಕರಿಂದ ಹಾಗೂ ಪೊಲೀಸರಿಂದ ಮೆಚ್ಚುಗೆ ವ್ಯಕ್ತವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.