ADVERTISEMENT

ನರಸೀಪುರ: 14, 15ರಂದು ಶರಣ ಸಂಸ್ಕೃತಿ ಉತ್ಸವ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 6:37 IST
Last Updated 5 ಡಿಸೆಂಬರ್ 2025, 6:37 IST
ಕೊಪ್ಪಳದ ಭಾಗ್ಯನಗರದಲ್ಲಿ ಮಂಗಳವಾರ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮಿ ಅವರನ್ನು ಸನ್ಮಾನಿಸಿದರು
ಕೊಪ್ಪಳದ ಭಾಗ್ಯನಗರದಲ್ಲಿ ಮಂಗಳವಾರ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮಿ ಅವರನ್ನು ಸನ್ಮಾನಿಸಿದರು   

ಕೊಪ್ಪಳ: ಹಾವೇರಿ ಜಿಲ್ಲೆಯ ಸುಕ್ಷೇತ್ರ ನರಸೀಪುರದಲ್ಲಿ ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ, ವಚನ ಗ್ರಂಥ ಮಹಾರಥೋತ್ಸವ, ಅಂಬಿಗರ ಚೌಡಯ್ಯನವರ ಶಿಲಾಮಂಟಪ, ಕಂಚಿನ ಪುತ್ಥಳಿ ಲೋಕಾರ್ಪಣೆ ಹಾಗೂ ಮಹರ್ಷಿ ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ ಕಾರ್ಯಕ್ರಮ ಜ. 14 ಹಾಗೂ 15ರಂದು ನಡೆಯಲಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮಿ ತಿಳಿಸಿದರು.

ಭಾಗ್ಯನಗರದ ಗಂಗಾಪರಮೇಶ್ವರಿ ಸಮುದಾಯ ಭವನದಲ್ಲಿ ಮಂಗಳವಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ‘14ರಂದು ಚೌಡಯ್ಯನವರ ತೊಟ್ಟಿಲೋತ್ಸವ, ಐಕ್ಯಮಂಟಪ ಪೂಜೆ, ರಕ್ತದಾನ ಶಿಬಿರ, ಸಾಮೂಹಿಕ ವಿವಾಹ, ಶಾಂತಮುನಿ ಶ್ರೀಗಳ 10ನೇ ಸ್ಮರಣೋತ್ಸವ, ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ, ವಚನ ಕಂಠಪಾಠ ಸ್ಪರ್ಧೆ, ಐತಿಹಾಸಿಕ ಗಂಗಾರತಿ, ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದರು.

‘15ರಂದು ಧರ್ಮ ಧ್ವಜಾರೋಹಣ, ಧರ್ಮ ಸಭೆ, ಶಿಲಾಮಂಟಪ, ಕಂಚಿನ ಪುತ್ಥಳಿ ಲೋಕಾರ್ಪಣೆ, ವೇದವ್ಯಾಸ ಕಲ್ಯಾಣ ಮಂಟಪ ಉದ್ಘಾಟನೆ, ಅಂಬಿಗರ ಚೌಡಯ್ಯನವರ 906ನೇ ಜಯಂತ್ಯುತ್ಸವ, ಪೀಠರೋಹಣ ದಶಮಾನೋತ್ಸವ, ಸಂಜೆ ವಚನ ಗ್ರಂಥ ಮಹಾರಥೋತ್ಸವ ನೆರವೇರಲಿದೆ ಎಂದು ತಿಳಿಸಿದರು’ ಎಂದು ಹೇಳಿದರು. 

ADVERTISEMENT

‘ಬೇರೆ ಸಮುದಾಯಗಳು ಒಗ್ಗಟ್ಟಾಗಿ ರಾಜಕೀಯ ಶಕ್ತಿ ಪಡೆದು ಅಭಿವೃದ್ಧಿ ಕಾಣುತ್ತಿವೆ. ರಾಜಕೀಯವಾಗಿ ಸಮಾಜ ಸಂಪೂರ್ಣ ಶೂನ್ಯಾವಸ್ಥೆಗೆ ಬಂದಿದೆ. ನಮ್ಮ ಕೂಗು ಕೇಳುವವರು ಯಾರೂ ಇಲ್ಲದಂತಾಗಿದೆ. ನಾಯಕರು ಸರಿಯಾದ ಮಾರ್ಗವನ್ನು ಸಮಾಜಕ್ಕೆ ತೋರಿಸಬೇಕು. ಗುರುಗಳ ಮಾತು ಪಾಲಿಸಬೇಕು. ಅಂಬಿಗರ ಸಮಾಜ ಆರ್ಥಿಕವಾಗಿ ಮೇಲೆ ಬರಬೇಕು. ಮಠ ಬೆಳೆದರೆ ಸಮಾಜ ಬೆಳೆಯುತ್ತದೆ ಎಂದರು’ ಎಂದು ಸಲಹೆ ನೀಡಿದರು. 

ಸಮುದಾಯದ ಮುಖಂಡರಾದ ಸೋಮಣ್ಣ ಬಾರಕೇರ, ಹುಲಗಪ್ಪ ಬಾರಕೇರ, ರಾಜು ಕಲೆಗಾರ, ಯಮನಪ್ಪ ಕಬ್ಬೇರ್, ರಮೇಶಪ್ಪ ಕಬ್ಬೇರ್, ಮಾರ್ಕಂಡೆಪ್ಪ, ಉದಯ್ ಕಬ್ಬೇರ್, ಮಾರುತಿ ತಳವಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.