ADVERTISEMENT

ಮಹಿಳಾ ಸ್ನೇಹಿ ಯೋಜನೆ: ಕಿನ್ನಾಳ ಗ್ರಾಮ ಪಂಚಾಯಿತಿಗೆ ರಾಷ್ಟ್ರೀಯ ಪುರಸ್ಕಾರ

ಕೇಂದ್ರದಿಂದ ಪ್ರಶಸ್ತಿ ಪಡೆದ ಕಲ್ಯಾಣ ಕರ್ನಾಟಕದ ಭಾಗದ ಏಕೈಕ ಗ್ರಾಮ ಪಂಚಾಯಿತಿ ಕಿನ್ನಾಳ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 5:53 IST
Last Updated 12 ಡಿಸೆಂಬರ್ 2024, 5:53 IST
ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮ ಪಂಚಾಯಿತಿಯ ನೋಟ
ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮ ಪಂಚಾಯಿತಿಯ ನೋಟ   

ಕೊಪ್ಪಳ: ಮಹಿಳಾ ಸ್ನೇಹಿ ಯೋಜನೆಗಳನ್ನು ರೂಪಿಸುವಲ್ಲಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮ ಪಂಚಾಯಿತಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದ್ದು, ಕೇಂದ್ರದ ರಾಷ್ಟ್ರೀಯ ಪಂಚಾಯಿತಿ ಪುರಸ್ಕಾರಕ್ಕೆ ಭಾಜನವಾಗಿದೆ.

2022–23ನೇ ಸಾಲಿನಲ್ಲಿ ಆಯಾ ಪಂಚಾಯಿತಿಗಳು ಮಾಡಿದ ಸಾಧನೆಯನ್ನು ಪರಾಮರ್ಶಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು.

ವಿವಿಧ ವಿಷಯಗಳನ್ನು ಆಧರಿಸಿ ಒಂಬತ್ತು ವಿಭಾಗದಲ್ಲಿ ಒಂಬತ್ತು ಪಂಚಾಯಿತಿಗಳನ್ನು ಭಾರತ ಸರ್ಕಾರದ ಪಂಚಾಯತ್‌ ರಾಜ್‌ ಮಂತ್ರಾಲಯಕ್ಕೆ ಶಿಫಾರಸು ಮಾಡಲಾಗಿತ್ತು. ಅದರಲ್ಲಿ ಕಿನ್ನಾಳ ಗ್ರಾ.ಪಂ.ಗೆ ಮಹಿಳಾ ಸ್ನೇಹಿ ವಿಭಾಗದಲ್ಲಿ ಪುರಸ್ಕಾರ ಲಭಿಸಿದೆ. ಪ್ರತಿ ವಿಭಾಗದಲ್ಲಿಯೂ ಪ್ರಶಸ್ತಿ ಪಡೆದ ಪಂಚಾಯಿತಿಗೆ ದೀನ್‌ ದಿಯಾಳ್‌ ಉಪಾಧ್ಯಾಯ ಗೌರವ ನೀಡಲಾಗಿದೆ. ಪ್ರತಿ ವಿಭಾಗದಲ್ಲಿಯೂ ರಾಜ್ಯದಲ್ಲಿ ಮೊದಲು ಮೂರು ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿತ್ತು. ಅವುಗಳಿಗೆ ರಾಜ್ಯದ ಪರಿಣಿತರ ತಂಡ ಎಲ್ಲ ಪಂಚಾಯಿತಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕವೇ ಈ ಆಯ್ಕೆ ನಡೆದಿದೆ.

ADVERTISEMENT

ಬಡತನ ಮುಕ್ತ ಮತ್ತು ಜೀವನೋಪಾಯ ಚಟುವಟಿಕೆ ಹೆಚ್ಚಿಸಿದ ಪಂಚಾಯಿತಿ, ಆರೋಗ್ಯಕರ, ಮಕ್ಕಳ ಸ್ನೇಹಿ, ಸಾಕಷ್ಟು ಕುಡಿಯುವ ನೀರು ಒದಗಿಸಿರುವ ಸ್ವಾವಲಂಬಿ, ಶುಚಿತ್ವ ಹಾಗೂ ಹಸಿರು, ಸಾಕಷ್ಟು ಮೂಲ ಸೌಕರ್ಯ ಹೊಂದಿರುವ, ಸಾಮಾಜಿಕ ಭದ್ರತೆ ಒದಗಿಸಿರುವ, ಉತ್ತಮ ಆಡಳಿತ ಹೊಂದಿರುವ ಮತ್ತು ಮಹಿಳಾ ಸ್ನೇಹಿ ಪಂಚಾಯಿತಿ ಹೀಗೆ ಒಂಬತ್ತು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ವಿಶೇಷವೆಂದರೆ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಈ ಬಾರಿ ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾದ ಏಕೈಕ ಪಂಚಾಯಿತಿ ಇದಾಗಿದೆ. ಈ ವಿಭಾಗದಲ್ಲಿ ಆಯ್ಕೆಯಾದ ರಾಜ್ಯದ ಏಕೈಕ ಗ್ರಾ.ಪಂ. ಕೂಡ ಇದು.  

ರಾಹುಲ್‌ ರತ್ನಂ ಪಾಂಡೆಯ
ಕಿನ್ನಾಳ ಗ್ರಾಮ ಪಂಚಾಯಿತಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿದ್ದು ಜಿಲ್ಲೆಯ ಹೆಮ್ಮೆ ಹೆಚ್ಚಿಸಿದ. ಈ ಪಂಚಾಯಿತಿಯ ಕೆಲಸ ಉಳಿದ ಎಲ್ಲರಿಗೂ ಮಾದರಿಯಾಗಲಿ
ರಾಹುಲ್‌ ರತ್ನಂ ಪಾಂಡೆಯಜಿಲ್ಲಾ ಪಂಚಾಯಿತಿ ಸಿಇಒ, ಕೊಪ್ಪಳ

ನವದೆಹಲಿಯ ವಿಜ್ಞಾನ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕಿನ್ನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕರಿಯಮ್ಮ, ಉಪಾಧ್ಯಕ್ಷ ದುರುಗಪ್ಪ ಡಂಬರ ಹಾಗೂ ಪಿಡಿಒ ಪರಮೇಶ್ವರಯ್ಯ ತೆಳಗಡೆಮಠ ಭಾಗಿಯಾದರು.

ನವದೆಹಲಿಯಲ್ಲಿ ಬುಧವಾರ ನಡದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಿನ್ನಾಳ ಗ್ರಾಮ ಪಂಚಾಯಿತಿ ಸಿಬ್ಬಂದಿ

ಶಸ್ತಿಗೆ ಆಯ್ಕೆಯಾಗಲು ಕಾರಣವಾದ ಅಂಶಗಳು

  • ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಿಗೆ ಪ್ರತ್ಯೇಕವಾಗಿ ₹8,21,600 ಸಹಾಯಧನವಾಗಿ ಪಾವತಿ. ಇದರಲ್ಲಿ  ದನದ ಕೊಟ್ಟಿಗೆ, ಕುರಿಗಳ ಕೊಟ್ಟಿಗೆ, ಕೃಷಿ ಹೊಂಡ ನಿರ್ಮಾಣ, ಹಳ್ಳಗಳ ನಿರ್ಮಾಣ, ಹೊಲಗಳಲ್ಲಿ, ಕೇಸರಿ ಹೊಂಡಗಳ ಮತ್ತು ಮನೆಗಳ ನಿರ್ಮಾಣ

  • ಕಿನ್ನಾಳ ಗ್ರಾಮದಲ್ಲಿ ವಸತಿ ರಹಿತರಿಗೆ ವಸತಿ ನಿರ್ಮಾಣಕ್ಕೆ ₹ 48 ಲಕ್ಷ ವೆಚ್ಚದಲ್ಲಿ ಮಹಿಳೆಯರ ಹೆಸರಿನಲ್ಲಿ ಮನೆಗಳ ಮಂಜೂರು

  • ಕಿನ್ನಾಳ ಗ್ರಾಮದಲ್ಲಿ ಸ್ವ-ಸಹಾಯ ಸಂಘದ ಕಟ್ಟಡ ನಿರ್ಮಾಣಕ್ಕೆ ₹13 ಲಕ್ಷ ವೆಚ್ಚ

  • ಗ್ರಾಮದಲ್ಲಿ ಶಾಲೆ ಹಾಗೂ ಅಂಗನವಾಡಿಗಳ ನಿರ್ವಹಣೆಗೆ ₹5 ಲಕ್ಷ ವೆಚ್ಚ

  • ಡಿಜಿಟಲ್‌ ಗ್ರಂಥಾಲಯದ ಅಭಿವೃದ್ಧಿಗೆ₹ ₹7.65 ಲಕ್ಷ ಬಳಕೆ

  • ಮಹಿಳಾ ಸ್ನೇಹಿ ಸಮುದಾಯ ಶೌಚಾಲಯಗಳ ನಿರ್ಮಾಣ

  • ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ಎಂಟು ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ಹಾಗೂ ಮೂತ್ರಾಲಯ ನಿರ್ಮಾಣ

  • 245 ಸ್ವಸಹಾಯ ಸಂಘಗಳು ರಚನೆ. ಈ ಸಂಘಗಳಿಂದ ಕಿನ್ನಾಳ ಕಲೆ ತಯಾರಿಸುವುದು, ಕೈ ಮಗ್ಗ ನೇಯ್ಗೆ ಆರಂಭ

  • ಮಹಿಳಾ ಸುರಕ್ಷತೆಗಾಗಿ ಮುಖ್ಯ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು

ದಕ್ಷಿಣ ಮೀರಿಸಿದ ಉತ್ತರದ ಜಿಲ್ಲೆ
ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳ ವಿಚಾರದಲ್ಲಿ ರಾಜ್ಯದಲ್ಲಿ ದಕ್ಷಿಣ ಭಾಗದ ಜಿಲ್ಲೆಗಳೇ ಪ್ರಾಬಲ್ಯ ಮೆರೆಯುತ್ತಿದ್ದವು. ಮಂಡ್ಯ, ಮೈಸೂರು, ಮಂಗಳೂರು ಭಾಗದ ಜಿಲ್ಲೆಗಳಿಗೆ ದೊಡ್ಡ ಮಟ್ಟದ ಪ್ರಶಸ್ತಿ ಲಭಿಸಿತ್ತಿದ್ದವು. ಮೊದಲ ಬಾರಿಗೆ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿಯ ಹೆಗ್ಗಳಿಕೆ ಲಭಿಸಿದೆ. ‘ಮಹಿಳಾ ಸ್ನೇಹಿ ವಿಭಾಗದಲ್ಲಿ ಕಿನ್ನಾಳ ಪಂಚಾಯಿತಿ ರಾಷ್ಟ್ರೀಯ ಮಟ್ಟದಲ್ಲಿ ಗೌರವ ಪಡೆದಿದ್ದು ಅತ್ಯಂತ ಹೆಮ್ಮೆಯ ವಿಷಯ. ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲು ಹಾಗೂ ಹೊಸ ಯೋಜನೆಗಳನ್ನು ರೂಪಿಸಲು ಈ ಪ್ರಶಸ್ತಿ ಪ್ರೇರಣೆಯಾಗಲಿದೆ’ ಎಂದು ಕೊಪ್ಪಳ ತಾಲ್ಲೂಕು ಪಂಚಾಯಿತಿ ಇಒ ದುಂಡಪ್ಪ ತುರಾದಿ ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.