
ಮುನಿರಾಬಾದ್: ಸಮೀಪದ ಲಿಂಗದಹಳ್ಳಿಯ ಡಾ.ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆಯಲ್ಲಿ ಈಚೆಗೆ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಅಲ್ಬೆಂಡಾಜೋಲ್ ಮಾತ್ರೆಯನ್ನು ನುಂಗಿಸಲಾಯಿತು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಆರೋಗ್ಯ ಅಧಿಕಾರಿ (ಡಿಎಒ) ಟಿ.ಲಿಂಗರಾಜು ಮಾತನಾಡಿ, ‘ಜಂತುಹುಳು ನಿವಾರಣೆ ನಿಟ್ಟಿನಲ್ಲಿ 1ರಿಂದ19 ವರ್ಷ ವಯಸ್ಸಿನ ಮಕ್ಕಳಲ್ಲಿ ಜಂತು ಹುಳು ಬಾಧಿಸಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ವರ್ಷದಲ್ಲಿ ಎರಡು ಬಾರಿ ಮಾತ್ರೆಯನ್ನು ಎಲ್ಲಾ ಶಾಲೆ, ಕಾಲೇಜು ಮತ್ತು ವಸತಿ ಶಾಲೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಇದು ಮಕ್ಕಳಲ್ಲಿನ ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ತಡೆಗಟ್ಟುತ್ತದೆ’ ಎಂದರು.
ಜಿಲ್ಲಾ ಆರ್‌ಸಿಎಚ್ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಪ್ರಕಾಶ ಮಾತನಾಡಿ, ‘ವಿದ್ಯಾರ್ಥಿಗಳು ವೈಯಕ್ತಿಕ ಸ್ವಚ್ಛತೆ ಕಡೆಗೆ ಗಮನ ಕೊಡಬೇಕು. ಊಟಕ್ಕೆ ಮುನ್ನ ಹಾಗೂ ಶೌಚದ ನಂತರ ಸಾಬೂನು ಬಳಸಿ ಕಡ್ಡಾಯವಾಗಿ ಕೈ ತೊಳೆಯುವ ರೂಢಿ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ವಸತಿ ಶಾಲೆಯ ಪ್ರಾಚಾರ್ಯ ದ್ಯಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ತಾಲ್ಲುಕು ವೈದ್ಯಾಧಿಕಾರಿ ಡಾ.ರಾಮಾಂಜನಿ, ಆಡಳಿತ ವೈದ್ಯಧಿಕಾರಿ ಡಾ.ಕರಿಯಮ್ಮ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವಿ.ಪಿ.ಶಿವಾನಂದ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಗಂಗಮ್ಮ, ಆಶಾ ಮೇಲ್ವಿಚಾರಕಿ ಸಂಧ್ಯಾ, ಜಿಲ್ಲಾ ಸಂಯೋಜಕ ಮೆಹಬೂಬ್, ಶಿಕ್ಷಕರು, ಸಿಬ್ಬಂದಿ ಇದ್ದರು. ಶಿಕ್ಷಕ ದೇವರಾಜ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.