ADVERTISEMENT

ಸೈಬರ್‌ ವಂಚನೆಗಳಿಗೆ ಬೀಳದ ಲಗಾಮು

ಆಮಿಷಗಳಿಗೆ ಮಾರು ಹೋಗುತ್ತಿರುವ ಜನ; ಹಣ ಲೂಟಿ, ಮಾನ ಹರಾಜು

ಪ್ರಮೋದ
Published 17 ಜುಲೈ 2022, 3:15 IST
Last Updated 17 ಜುಲೈ 2022, 3:15 IST

ಕೊಪ್ಪಳ: ಅಭಿನಂದನೆಗಳು; ನಿಮ್ಮ ಹೆಸರು ಅದೃಷ್ಟವಂತರ ಕೂಪನ್‌ನಲ್ಲಿ ಆಯ್ಕೆಯಾಗಿದೆ. ನಿಮ್ಮ ವಿಳಾಸ ಹಾಗೂ ದಾಖಲೆ ನೀಡಿದರೆ ಮನೆ ಬಾಗಿಲಿಗೆ ಕಾರು ತಲುಪಿಸುತ್ತೇವೆ.

–ಹೀಗೊಂದು ಧ್ವನಿ ಅತ್ತಲಿಂದ ಹೇಳುತ್ತಿದ್ದರೆ ಫೋನ್‌ ಸ್ವೀಕರಿಸಿದವರಿಗೆ ಖುಷಿಯೊ ಖುಷಿ. ಹಿಂದೂ ಮುಂದೂ ಯೋಚಿಸದೆ ವಿಳಾಸ ಹೇಳಿ ಬಿಡುತ್ತಾರೆ.

ಆ ಕಡೆಯ ವ್ಯಕ್ತಿ ಕಾರಿನ ಮೌಲ್ಯ, ವಿಶೇಷತೆಗಳು ಎಲ್ಲವನ್ನೂ ಎಳೆಎಳೆಯಾಗಿ ಬಿಡಿಸಿ ಹೇಳಿ ಆಸೆ ತುಂಬುತ್ತಾನೆ. ಸೇವಾಶುಲ್ಕವೆಂದು ₹500 ತುಂಬಿದರೆ ಸಾಕು ಕಾರುಕಳುಹಿಸುತ್ತೇವೆ ಎನ್ನುತ್ತಾನೆ. ಇಷ್ಟೊಂದು ಕಡಿಮೆ ಮೊತ್ತಕ್ಕೆ ಕಾರು ಸಿಗುತ್ತದೆಯಲ್ಲ ಎನ್ನುವ ಆಸೆಗೆ ಮರು ಮಾತಿಲ್ಲದೆ ಫೋನ್‌ ಸ್ವೀಕರಿಸಿದ ವ್ಯಕ್ತಿ ಹಣ ಕೊಡುತ್ತಾನೆ.

ADVERTISEMENT

ಒಮ್ಮೆ ಹೀಗೆ ಹಣ ಕೊಡುವುದಕ್ಕೆ ಆರಂಭಿಸಿದರೆ ಸಾಕು; ಅತ್ತಲಿನ ವ್ಯಕ್ತಿ ಕಾರು ಹೊರರಾಜ್ಯದಿಂದ ಬರುತ್ತದೆ, ಅದಕ್ಕೆ ತೆರಿಗೆ ಪಾವತಿಸಬೇಕು, ನಿಮ್ಮ ಹೆಸರಿಗೆ ವರ್ಗಾಯಿಸಲು ಹಣ ನೀಡಬೇಕು, ದಾಖಲೆ ಮಾಡಿಸಲು ಅಧಿಕಾರಿಗಳಿಗೆ ಹಣ ಕೊಡಬೇಕು ಹೀಗೆ ಒಂದಾದ ಮೇಲೊಂದು ಸುಳ್ಳು ಹೇಳಿ ವ್ಯಕ್ತಿಯಿಂದ ಲಕ್ಷಾಂತರ ರೂಪಾಯಿ ವಂಚಿಸಿ ಫೋನ್‌ ಕರೆ ಸ್ಥಗಿತಗೊಳಿಸುತ್ತಾನೆ.

ಮತ್ತೆ ಫೋನ್‌ ಮಾಡಿದರೆ ಆ ಕಡೆಯ ಫೋನ್‌ ನಂಬರ್‌ ನಾಟ್‌ ರೀಚಬಲ್‌. ಈ ಕಡೆ ವ್ಯಕ್ತಿಗೆ ಕಾರೂ ಇಲ್ಲ, ಕಳೆದುಕೊಂಡ ಹಣವೂ ವಾಪಸ್‌ ಬರಲಿಲ್ಲ.

ಇದೊಂದು ಉದಾಹರಣೆಯಷ್ಟೇ. ಇದೇ ರೀತಿಯ ಅನೇಕ ಸೈಬರ್‌ ವಂಚನೆಗಳು ಬೇರೆ ಬೇರೆ ರೂಪಗಳಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿವೆ. 2019ರಲ್ಲಿ ದಾಖಲಾದ 35 ಪ್ರಕರಣಗಳ ಪೈಕಿ 11ರಲ್ಲಿ ಮಾತ್ರ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆ. 2021ರಲ್ಲಿ 16 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ಇದುವರೆಗೆ 15 ಪ್ರಕರಣಗಳು ದಾಖಲಾಗಿದ್ದು, ಮೂರರಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆ.

ಸ್ನೇಹದ ನೆಪ: ಫೇಸ್‌ಬುಕ್‌ ಮೂಲಕ ಸ್ನೇಹದ ಹಸ್ತ ಚಾಚುವ ನೆಪದಲ್ಲಿ ನಕಲಿ ಖಾತೆ ಸೃಷ್ಟಿಸುವ ಮತ್ತು ಹಣ ದೋಚುವ ಘಟನೆಗಳು ಕೂಡ ಮೇಲಿಂದ ಮೇಲೆ ನಡೆಯುತ್ತಿವೆ.

ಸಾಮಾಜಿಕ ತಾಣಗಳನ್ನು ಬಂಡವಾಳ ಮಾಡಿಕೊಂಡು, ನೀವು ಆನ್‌ಲೈನ್‌ ಮೂಲಕ ವಸ್ತುಗಳನ್ನು ಖರೀದಿಸಿದ್ದಕ್ಕೆ ಬಹುಮಾನ ಬಂದಿದೆ ಎಂದು ಸುಳ್ಳು ಹೇಳಿ ಜನರನ್ನು ವಂಚಿಸಲಾಗುತ್ತಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ಟವರ್‌ ಹಾಕಿ ಕೊಡುತ್ತೇವೆ, ಬ್ಯಾಂಕ್‌ ಖಾತೆಯ ದಾಖಲೆ (ಕೆವೈಸಿ) ಅಪ್‌ಡೇಟ್‌ ಮಾಡಬೇಕು, ಉದ್ಯೋಗ ಕೊಡಿಸುತ್ತೇನೆ, ಸಾಲ ಕೊಡುತ್ತೇನೆ ಎಂದು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ.

ಸವಾಲು: ಈ ವಂಚನೆಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.

ಬಹುತೇಕ ಆರೋಪಿಗಳು ಬಿಹಾರ, ಪಶ್ಚಿಮ ಬಂಗಾಳ ಸೇರಿದಂತೆ ಉತ್ತರ ಭಾರತದ ರಾಜ್ಯದವರು. ದೂರು ದಾಖಲಾದಾಗ ಸ್ಥಳೀಯ ಪೊಲೀಸರಿಗೆ ಹೊರ ರಾಜ್ಯಕ್ಕೆ ಹೋಗಿ ಅಲ್ಲಿ ಆರೋಪಿಗಳ ಹುಡುಕಾಟ ಕಷ್ಟ. ಅಲ್ಲಿನ ಪೊಲೀಸರ ಅಸಹಕಾರ, ಕಾನೂನು ಮತ್ತು ಸುವವಸ್ಥೆ ಪರಿಸ್ಥಿತಿ ಕೂಡ ಇದಕ್ಕೆ ಕಾರಣ ಎಂದು ಪೊಲೀಸರು ಹೇಳುತ್ತಾರೆ.

ಹಿಂದೇಟು: ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಬಹಿರಂಗಗೊಳಿಸುವುದಾಗಿ ಬೆದರಿಕೆ ಒಡ್ಡಿ ಹಣದೋಚುವ ಘಟನೆಗಳು ನಡೆಯುತ್ತಿವೆ. ಆದ್ದರಿಂದ ಬಹಳಷ್ಟು ಜನ ಮಹಿಳೆಯರು ಮರ್ಯಾದೆಗೆ ಅಂಜಿ ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ.

‘ಜನ ಜಾಗೃತಿಯೊಂದೇ ಮದ್ದು’

ಕೊಪ್ಪಳ: ಆನ್‌ಲೈನ್‌ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡ ಬಳಿಕ ಪರಿತಪಿಸುವ ಬದಲು ಜನ ಜಾಗೃತಿಯಿಂದ ಇರುವುದೇ ಇದಕ್ಕೆ ಉತ್ತಮ ಮದ್ದು ಎನ್ನುತ್ತಾರೆ ಕೊಪ್ಪಳ ಸೈಬರ್‌ ಕ್ರೈಂ ಸಿಪಿಐ ಚಂದ್ರಶೇಖರ ಹರಿಹರ.

‘ಮರ್ಯಾದೆಗೆ ಅಂಜಿ ದೂರು ನೀಡಲು ಹಿಂದೇಟು ಹಾಕಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ದೂರು ನೀಡಿದವರ ಗೌಪ್ಯತೆ ಕಾಪಾಡಿಆರೋಪಿಗಳನ್ನು ಪತ್ತೆ ಹಚ್ಚಲಾಗುವುದು. ಕೆಲ ಪ್ರಕರಣಗಳಲ್ಲಿ ಪೊಲೀಸರೇ ವಂಚನೆಗೆ ಬಲಿಯಾಗಿದ್ದಾರೆ. ಆದ್ದರಿಂದ ಇಲಾಖೆಯ ಸಿಬ್ಬಂದಿಗೆ, ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಜನರಿಗೆ ಸಾಮಾಜಿಕ ತಾಣಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.