ಕೊಪ್ಪಳ: ‘ಜಿಲ್ಲಾಕೇಂದ್ರದ ಸಮೀಪದಲ್ಲಿ ಬಲ್ಡೋಟಾ ಕಂಪನಿ ತನ್ನ ಉಕ್ಕಿನ ಕಾರ್ಖಾನೆ ವಿಸ್ತರಣೆ ಕೈ ಬಿಡಬೇಕು. ಜನರ ಭಾವನೆಗಳಿಗೆ ಬೆಲೆಕೊಟ್ಟು ಬಸಾಪುರ ಕೆರೆಯನ್ನು ಸೆ. 5ರ ಒಳಗೆ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಇಲ್ಲವಾದರೆ ‘ಆಪರೇಷನ್ ಆಂಜನೇಯ‘ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಹೋರಾಟ ಚುರುಕುಗೊಳಿಸಲಾಗುವುದು’ ಎಂದು ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಹೇಳಿದರು.
‘ನಮ್ಮ ನೆಲ, ಜಲ ಬಳಸಿಕೊಂಡು ಕಂಪನಿ ಜನರ ಭಾವನೆಗಳ ಜೊತೆ ಚೆಲ್ಲಾಟ ಆಡುವುದನ್ನು ನಿಲ್ಲಿಸಬೇಕು. ಹೋರಾಟಗಾರರ ಮೇಲೆ ಬಲ್ಡೋಟಾ ಮಾಡುತ್ತಿರುವ ದೌರ್ಜನ್ಯ ಕೈಬಿಡಬೇಕು. ಕಾರ್ಖಾನೆ ವಿಸ್ತರಣೆ ನಿಲ್ಲಿಸಬೇಕು ಎನ್ನುವ ಸಾರ್ವಜನಿಕರ ಹಾಗೂ ರೈತರ ಭಾವನೆಗಳಿಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಿಮ್ಮತ್ತು ಕೊಡುತ್ತಿಲ್ಲ. ಎಲ್ಲರೂ ತಮ್ಮ ಜವಾಬ್ದಾರಿಗೆ ತಕ್ಕಂತೆ ನಡೆದುಕೊಳ್ಳದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ದಾಳಿ ಆರೋಪ: ಸಂಘಟನೆಯ ಜಿಲ್ಲಾಧ್ಯಕ್ಷ ವಿಜಯಕುಮಾರ್ ಕವಲೂರು ಮಾತನಾಡಿ ‘ಇದೇ ವರ್ಷದ ಜೂನ್‌ನಲ್ಲಿ ನನ್ನ ತಾಯಿಯೊಂದಿಗೆ ಗವಿಮಠದ ಹಿಂದಿರುವ ರುದ್ರಭೂಮನಿಯಲ್ಲಿ ಸಂಬಂಧಿಕರ ಅಂತ್ಯಸಂಸ್ಕಾರಕ್ಕೆ ತೆರಳಿದ್ದಾಗ ಶಿವಕುಮಾರ್ ಹಾಗೂ ಆತನ ಸಹಚರರು ದಾಳಿ ಮಾಡಿ ಕೊಲೆಗೆ ಯತ್ನಿಸಿದ್ದಾರೆ’ ಎಂದು ಆರೋಪಿಸಿದರು. ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಕೇಳಿದಾಗ ’ಸಂದರ್ಭ ಬಂದಾಗ ಬಿಡುಗಡೆ ಮಾಡುವೆ’ ಎಂದು ಪ್ರತಿಕ್ರಿಯಿಸಿದರು. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡುವುದಾಗಿ ಹೇಳಿದರು.
ಸಂಘಟನೆಯ ಕೊಪ್ಪಳ ತಾಲ್ಲೂಕು ಅಧ್ಯಕ್ಷ ಮಹೇಶ ಅಲ್ಲಾನಗರ, ಕಲಬುರಗಿ ಜಿಲ್ಲಾಧ್ಯಕ್ಷ ರವಿ ದೇಗಾವ್, ಕುಕನೂರು ತಾಲ್ಲೂಕು ಅಧ್ಯಕ್ಷ ಯೂನಸ್ ನಮಾಜ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.