ADVERTISEMENT

ಗಂಗಾವತಿ: ಮಹಿಳೆ ಅಂತ್ಯ ಸಂಸ್ಕಾರಕ್ಕೆ ವಿರೋಧ

ಕೋವಿಡ್‌ ವೈರಸ್‌ನಿಂದ ಮೃತಪಟ್ಟ ಮಹಿಳೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 7:25 IST
Last Updated 19 ಜೂನ್ 2020, 7:25 IST
ಗಂಗಾವತಿ ತಾಲ್ಲೂಕಿನ ಮರಳಿ ಗ್ರಾಮದ ಸ್ಮಶಾನದಲ್ಲಿ ಕೊರೊನಾದಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಮರಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ಹೂಳಲು ಗುಂಡಿ ತೆಗೆಯಲು ಆಗಮಿಸಿದ ಜೆಸಿಬಿಯನ್ನು ತಡೆದು ಪ್ರತಿಭಟನೆ ನಡೆಸಿದರು.
ಗಂಗಾವತಿ ತಾಲ್ಲೂಕಿನ ಮರಳಿ ಗ್ರಾಮದ ಸ್ಮಶಾನದಲ್ಲಿ ಕೊರೊನಾದಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಮರಳಿ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ, ಹೂಳಲು ಗುಂಡಿ ತೆಗೆಯಲು ಆಗಮಿಸಿದ ಜೆಸಿಬಿಯನ್ನು ತಡೆದು ಪ್ರತಿಭಟನೆ ನಡೆಸಿದರು.   

ಗಂಗಾವತಿ: ಕೋವಿಡ್‌ ವೈರಸ್‌ನಿಂದ ಬುಧವಾರ ಸಾವನ್ನಪ್ಪಿದ ತಾಲ್ಲೂಕಿನ ಮರಳಿ ಗ್ರಾಮದ ನಿವಾಸಿಯಾಗಿದ್ದ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಗುರುವಾರ ಅದೇ ಊರಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು.

ಗ್ರಾಮದ ಸ್ಮಶಾನದಲ್ಲಿ ಮಹಿಳೆಯ ಮೃತದೇಹ ಹೂಳಲು ಗುಂಡಿ ತೆಗೆಯುವ ಜೆಸಿಬಿ ಯಂತ್ರಕ್ಕೆ ಗ್ರಾಮಸ್ಥರು ಅಡ್ಡನಿಂತು ಪ್ರತಿಭಟನೆ ನಡೆಸಿದರು.

‘ಕೋವಿಡ್‌ ಸೋಂಕಿತ ಮಹಿಳೆಯ ಮೃತದೇಹವನ್ನು ಗ್ರಾಮದ ಸ್ಮಶಾನದಲ್ಲಿ ಹೂಳಲು ಅವಕಾಶ ನೀಡುವುದಿಲ್ಲ. ಬೇರೆ ಕಡೆ ಅಂತ್ಯಕ್ರಿಯೆ ಮಾಡಬೇಕು. ಸ್ಮಶಾನ ಸಣ್ಣದಿದ್ದು ಸೋಂಕು ಪೀಡಿತ ದೇಹ ಹೂಳುವುದರಿಂದ ಇತರರಿಗೂ ಸೋಂಕು ಹರಡುವ ಸಂಭವವಿದೆ. ಆದ್ದರಿಂದ ಮೃತ ದೇಹ‌ ಹೂಳುವುದು ಬೇಡ‘ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಹಶೀಲ್ದಾರ್ ಎಲ್.ಡಿ.ಚಂದ್ರಕಾಂತ, ಸಿಪಿಐ ಸುರೇಶ್ ತಳವಾರ, ಪಿಎಸ್ಐ‌ ದೊಡ್ಡಪ್ಪ.ಜೆ ಸೇರಿ ಇತರೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಕೆ ಮಾಡಿದರೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.

ಶಾಸಕ ಬಸವರಾಜ್‌ ದಢೇಸೂಗುರು ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸುವ ಮೂಲಕ ಗ್ರಾಮದ ಸ್ಮಶಾನದಲ್ಲೇ ಮಹಿಳೆಯ ಅಂತ್ಯಕ್ರಿಯೆ ಮಾಡಿಸಿದರು.

ಗ್ರಾಮದ ಹತ್ತಿರ 11 ಎಕರೆ ಗೋಮಾಳವಿದ್ದು ಸ್ಮಶಾನ ಮಂಜೂರು ಮಾಡುವಂತೆ ಗ್ರಾಮಸ್ಥರು ಇದೇ ವೇಳೆ ಶಾಸಕರನ್ನು ಒತ್ತಾಯಿಸಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.