ಕೊಪ್ಪಳ: ತಮ್ಮ 14ನೇ ವಯಸ್ಸಿನಿಂದ ತೊಗಲು ಗೊಂಬೆಯಾಟದಲ್ಲಿ ಆಸಕ್ತಿ ಬೆಳಸಿಕೊಂಡ ಕೊಪ್ಪಳ ತಾಲ್ಲೂಕಿನ ಮೋರನಾಳ ಗ್ರಾಮದ ಶತಾಯುಷಿ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ಈ ಬಾರಿಯ ಪದ್ಮಶ್ರೀ ಗೌರವ ಒಲಿದಿದೆ.
ಬಾಲ್ಯದ ದಿನಗಳಲ್ಲಿ ರೂಢಿಯಾದ ತೊಗಲು ಗೊಂಬೆಯಾಟವನ್ನು ಕುಲ ಕಸುಬಾಗಿ ಮಾಡುತ್ತಾ ಇದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಕುಟುಂಬದವರು ಹೇಳುವಂತೆ ಅಜ್ಜಿಗೆ ಈಗ 103ರಿಂದ 104 ವರ್ಷ ವಯಸ್ಸು. ಆದರೆ ದಾಖಲೆಗಳ ಪ್ರಕಾರ 96. ಅವರ ಪುತ್ರ 75 ವರ್ಷದ ಕೇಶಪ್ಪ ಶಿಳ್ಳೇಕ್ಯಾತರ ಕೂಡ ಇದೇ ಕಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಅನಕ್ಷರಸ್ಥೆಯಾದರೂ ಅಜ್ಜಿ ಕಲೆಯಲ್ಲಿ ಎಲ್ಲರನ್ನೂ ಮೀರಿಸುವ ಕೌಶಲ ಹೊಂದಿದ್ದಾರೆ. ಅಮೆರಿಕ, ಪ್ಯಾರಿಸ್, ಇಟಲಿ, ಇರಾನ್, ನೆದರ್ಲೆಂಡ್ಸ್ ಹೀಗೆ ಅನೇಕ ದೇಶಗಳಲ್ಲಿ ರಾಮಾಯಣ ಹಾಗೂ ಮಹಾಭಾರತದಂಥ ಮಹಾಕಾವ್ಯಗಳನ್ನು ಮತ್ತು ಪ್ರಸಕ್ತ ವಿದ್ಯಮಾನಗಳನ್ನು ತಮ್ಮ ಕಲೆಯ ಮೂಲಕ ತೋರಿಸಿದ್ದಾರೆ.
2005-06ರಲ್ಲಿ ಜಾನಪದ ಮತ್ತು ಬಯಲಾಟ ಅಕಾಡೆಮಿ, 2010ರಲ್ಲಿ ಸಂಗೀತ ನಾಟಕ ಅಕಾಡೆಮಿ, 2014ರಲ್ಲಿ ರಾಜ್ಯೋತ್ಸವ, 2020-21ನೇ ಸಾಲಿನ ಜಾನಪದ ಶ್ರೀ ಹೀಗೆ ಅನೇಕ ಪ್ರಶಸ್ತಿಗಳು ಬಂದಿವೆ. ಶತಾಯುಷಿಯಾದರೂ ಸ್ವತಂತ್ರವಾಗಿ ಓಡಾಡುತ್ತಾರೆ. ಪ್ರಶಸ್ತಿ ಬಂದಿದೆಯಲ್ಲ ಎನ್ನುವ ಪ್ರಶ್ನೆಗೆ ’ಕಲೆಗೆ ಗೌರವ ಸಿಕ್ಕಂಗ ಆಗೈತಿ’ ಎಂದು ಸಂತೋಷ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.