ADVERTISEMENT

ಕೊಪ್ಪಳ | ರಕ್ತದಾನಕ್ಕೆ ಜಿಲ್ಲಾಡಳಿತ ಅನುಮತಿ

ಕೊರೊನಾ ಶಂಕಿತ, ಸೋಂಕಿತರು, ವಿದೇಶದಿಂದ ಬಂದವರಿಗೆ ಇಲ್ಲ ಅವಕಾಶ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 17:03 IST
Last Updated 20 ಏಪ್ರಿಲ್ 2020, 17:03 IST

ಕೊಪ್ಪಳ: ಲಾಕ್‌ಡೌನ್‌ನಿಂದ ರಕ್ತದಾನ ಮಾಡುವ ದಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ರೆಡ್‌ ಕ್ರಾಸ್‌ ಸಂಸ್ಥೆ ಸೇರಿದಂತೆ ವಿವಿಧ ಸರ್ಕಾರಿ ರಕ್ತ ಸಂಗ್ರಹಾಲಯಗಳಲ್ಲಿ ರಕ್ತದ ಸಂಗ್ರಹ ಕಡಿಮೆಯಾಗಿದೆ. ಆದ್ದರಿಂದ ಜಿಲ್ಲಾಡಳಿತ ಕೆಲವು ಷರತ್ತುಗಳನ್ನು ಹಾಕಿ ಅನುಮತಿ ಪತ್ರದೊಂದಿಗೆ ರಕ್ತದಾನ ಮಾಡಲು ತಿಳಿಸಿದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ನಿಯಮಿತವಾಗಿ ರಕ್ತದಾನ ಮಾಡುವ ದಾನಿಗಳು, ಆಸಕ್ತರು, ವಿದ್ಯಾರ್ಥಿಗಳು ರಕ್ತದಾನ ಮಾಡಲು ತೊಂದರೆಯಾಗಿರುವುದರಿಂದ ಆಸ್ಪತ್ರೆಯಲ್ಲಿರುವ ತೀವ್ರತರದ ಕಾಯಿಲೆ ಇರುವ ರೋಗಿಗಳು, ಗರ್ಭಿಣಿಯರಿಗೆ ರಕ್ತದ ಕೊರತೆಯಾಗುತ್ತಿದೆ. ಆದ್ದರಿಂದ ರಕ್ತದಾನಕ್ಕೆ ಅವಕಾಶ ನೀಡಬೇಕು ಎಂದು ರೆಡ್‌ಕ್ರಾಸ್‌ ಸಂಸ್ಥೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು.

ಮನವಿಗೆ ಸ್ಪಂದಿಸಿರುವ ಜಿಲ್ಲಾಡಳಿತ, ರಕ್ತದ ಕೊರತೆಯಾಗದಂತೆ ಮತ್ತು ಸಂಗ್ರಹ ಹೆಚ್ಚಳಕ್ಕೆ ರಕ್ತನಿಧಿ ಕೇಂದ್ರಕ್ಕೆ ಜನತೆ ತೆರಳಿ ರಕ್ತದಾನ ಮಾಡಬಹುದು ಎಂದು ತಿಳಿಸಿದೆ.

ADVERTISEMENT

ಕೋವಿಡ್‌-19 ಹರಡದಂತೆ ರಕ್ತದಾನ ಮಾಡುವವರು ಜಿಲ್ಲಾಡಳಿತ ನೀಡುವ ಅನುಮತಿ ಪತ್ರದೊಂದಿಗೆ ರಕ್ತನಿಧಿ ಕೇಂದ್ರಕ್ಕೆ ಭೇಟಿ ನೀಡಬಹುದು. ರಕ್ತದಾನ ಶಿಬಿರಗಳಲ್ಲಿ 100ಕ್ಕೂ ಹೆಚ್ಚು ಜನ ಸೇರುವಂತಿಲ್ಲ. ಸ್ಥಳಾವಕಾಶ ಪರಿಶೀಲಿಸಿ ಸಂಖ್ಯೆ ನಿರ್ಧರಿಸಬೇಕು. ರಕ್ತದಾನಿಗಳು ಅಂತರ ಕಾಯ್ದುಕೊಳ್ಳಬೇಕು ಎಂದು ತಿಳಿಸಲಾಗಿದೆ.

ಕೋವಿಡ್‌-19 ಸಂಬಂಧಿಸಿದಂತೆ ರೋಗದ ಯಾವುದೇ ಲಕ್ಷಣಗಳು ಇದ್ದಲ್ಲಿ ಕೆಮ್ಮು, ನೆಗಡಿ, ಐಎಲ್‌ಐ, ಸಾರಿ, ಗಂಟಲು ಬೇನೆ, ಉಸಿರಾಟ ತೊಂದರೆ ಮತ್ತು ಇತರೆ ಯಾವುದೇ ಅನಾರೋಗ್ಯವಿರುವ ವ್ಯಕ್ತಿಯು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ರಕ್ತದಾನಿಗಳ ಆರೋಗ್ಯ ತಪಾಸಣೆ ಕಡ್ಡಾಯ, ರಕ್ತ ಭಂಡಾರದ ಸಿಬ್ಬಂದಿ ಮುಖಕ್ಕೆ ಮಾಸ್ಕ್‌ ಹಾಕಿಕೊಳ್ಳುವುದು, ಬದಲಾಯಿಸುವುದು, ಸ್ಯಾನಿಟೈಸರ್ ಮತ್ತು ಕೇಂದ್ರವನ್ನು ಡಿಸ್‌ಇನ್ಫೆಕ್ಸನ್‌ ಮಾಡುವುದು ಕಡ್ಡಾಯವಾಗಿದೆ.

ರಕ್ತದಾನ ನಡೆಸುವ ಸ್ಥಳ, ಸಮಯ, ದಿನ, ಭಾಗವಹಿಸುವ ವ್ಯಕ್ತಿಗಳ ಸಂಪೂರ್ಣ ವಿವರ ಪಡೆದು ರಕ್ತದಾನ ಶಿಬಿರ ಆಯೋಜಿಸಬೇಕು. ಕಚೇರಿಗೆ ಎಲ್ಲ ವರದಿಗಳನ್ನು ತಕ್ಷಣಕ್ಕೆ ಸಲ್ಲಿಸಬೇಕು.
ರಕ್ತದಾನಿಯ ರಕ್ತವನ್ನು ತೆಗೆಯುವಾಗ ಹೊಸ ಪೈಪ್‌, ಸಿರೆಂಜ್ ಬಳಸಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಗ್ರಹಿಸಿ ಹೊರಹಾಕಬೇಕು. ರಕ್ತದಾನ ಮಾಡಿದ ನಂತರ ಆ ಸ್ಥಳವನ್ನು ಸ್ವಚ್ಛ ಮಾಡಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್ ಷರತ್ತು ನೀಡಿ ರಕ್ತ ಸಂಗ್ರಹಣೆಗೆ ಅನುಮತಿ ನೀಡಿದ್ದಾರೆ.

ಯಾರು ರಕ್ತದಾನ ಮಾಡಬಾರದು: ಈ ಮೊದಲು ಇದ್ದ ಎಲ್ಲ ನಿಯಮಗಳ ಜತೆ ವಿದೇಶದಿಂದ ಬಂದ ಹಾಗೂ ಕೋವಿಡ್‌-19 ಶಂಕಿತ, ಸೋಂಕಿತ ವ್ಯಕ್ತಿಗಳು ರಕ್ತದಾನ ಮಾಡಬಾರದು ಮತ್ತು ಇವರು ಇರುವ ಪ್ರದೇಶಗಳಲ್ಲಿ ಶಿಬಿರ ಆಯೋಜನೆ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆಯೊಂದಿಗೆ ರಕ್ತದಾನಕ್ಕೆ ಅನುಮತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.