ಕೊಪ್ಪಳ: ’ಹಿಂದೂ ಸಮಾಜದ ಗವಿಸಿದ್ಧಪ್ಪನಾಯಕನ ಕೊಲೆ ಪ್ರಕರಣದ ಮೊದಲ ಆರೋಪಿ ಸಾಧಿಕ್ ಕೋಲ್ಕಾರ್‌ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ನಂಟು ಇದ್ದು, ಕೊಲೆಯ ಪ್ರಚೋದನೆ ನೀಡಿದ ಕಾಣದ ಕೈಗಳ ಹೆಸರುಗಳನ್ನೂ ಪೊಲೀಸರು ಬಹಿರಂಗಪಡಿಸಬೇಕು’ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆಗ್ರಹಿಸಿದರು.
ಇಲ್ಲಿನ ಕುರುಬರ ಓಣಿಯಲ್ಲಿರುವ ಗವಿಸಿದ್ಧಪ್ಪ ನಾಯಕನ ಮನೆಗೆ ಮಂಗಳವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ’ನಿಮ್ಮ ಮಗನ ಸಾವಿಗೆ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹೋರಾಡಿ ನ್ಯಾಯ ಒದಗಿಸಿಕೊಡುತ್ತೇವೆ. ಪ್ರಾಣ ಹೋದರೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ’ ಎಂದು ಭರವಸೆ ನೀಡಿದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿ ‘ಸಾಧಿಕ್ ಕೈಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಾನೆ, ಗಾಂಜಾ ಸೇದುತ್ತಿರುವ ವಿಡಿಯೊಗಳು ವೈರಲ್ ಆಗಿವೆ. ದೈಹಿಕವಾಗಿ ಬಲಿಷ್ಠವಾಗಿದ್ದ ಗವಿಸಿದ್ಧಪ್ಪ ಅವರನ್ನು ಕನಿಷ್ಠ 10ರಿಂದ 15 ಜನ ಸೇರಿ ಕೊಲೆ ಮಾಡಿದ್ದಾರೆ. ಅವರನ್ನು ವೀರಾವೇಶದಿಂದ ಕೊಂದು ಹಾಕಲು ಪ್ರಚೋದನೆ ನೀಡಿದವರು ಯಾರು? ಗವಿಸಿದ್ದಪ್ಪ ಮನೆಯಿಂದ ಹೊರಗೆ ಬರುವಲ್ಲಿ ಮುಸ್ಲಿಂ ಯುವತಿಯ ಪಾತ್ರವೇನು ಎನ್ನುವುದು ಕೂಡ ಬಹಿರಂಗವಾಗಬೇಕು’ ಎಂದು ಒತ್ತಾಯಿಸಿದರು.
‘ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಟೆಗೊಂದು ಹೇಳಿಕೆ ನೀಡುತ್ತಿದ್ದಾರೆ. ಅಂತಿಮ ಸಂಸ್ಕಾರವನ್ನು ತರಾತುರಿಯಲ್ಲಿ ಮಾಡುವ ಅಗತ್ಯವೇನಿತ್ತು’ ಎಂದು ಪ್ರಶ್ನಿಸಿದ ರಾಮುಲು ‘ಕೃತ್ಯದ ಹಿಂದೆ ಪೊಲೀಸರ, ರಾಜಕಾರಣಿಗಳ ಅಥವಾ ಪಿಎಫ್‌ಐ ಸಂಘಟನೆಗಳ ಕುಮ್ಮಕ್ಕು ಇದೆಯಾ ಎನ್ನುವುದು ಗೊತ್ತಾಗಬೇಕು. ಕುಮ್ಮಕ್ಕು ಕೊಟ್ಟವರ ಮೇಲೂ ಕ್ರಮವಾಗಬೇಕು. ನಾವು ಏನೇ ಮಾಡಿದರೂ ಏನೂ ಆಗುವುದಿಲ್ಲ ಎನ್ನುವ ಸಂದೇಶವನ್ನು ಮುಸ್ಲಿಂ ಯುವಕ ನೀಡಿದ್ದಾರೆ. ದನಕರುಗಳನ್ನು ಕಡೆದ ರೀತಿಯಲ್ಲಿ ಮನುಷ್ಯನನ್ನು ಕರೆಯಲಾಗಿದೆ. ಸಾಧಿಕ್‌ಗೆ ಅಷ್ಟೊಂದು ಧೈರ್ಯ ಹೇಗೆ ಬಂತು’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.