ADVERTISEMENT

ದೌರ್ಜನ್ಯದ ಆರೋಪ; ಪಿಎಸ್‌ಐ ಅಮಾನತಿಗೆ ಪಟ್ಟು: ಕುಕನೂರು ಠಾಣೆ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 17:28 IST
Last Updated 14 ಅಕ್ಟೋಬರ್ 2025, 17:28 IST
   

ಕುಕನೂರು: ಇಲ್ಲಿನ ಪೊಲೀಸ್ ಠಾಣೆಯ ಸಬ್‌ ಇನ್‌ಸ್ಟೆಕ್ಟರ್‌ ಗುರುರಾಜ್‌ ಟಿ. ನಮ್ಮ ಸಮಾಜದ ಮುಖಂಡನ ಮೇಲೆ ಹಲ್ಲೆ ಮಾಡಿದ್ದು, ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ದಲಿತ ಸಮಾಜದ ಮುಖಂಡರು ಪೊಲೀಸ್ ಠಾಣೆ ಎದುರು ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿದರು.

ಕೊಪ್ಪಳ ತಾಲ್ಲೂಕಿನ ಯಲಮಗೇರಿಯ ಗಾಳೆಪ್ಪ ಹಿರೇಮನಿ ಎಂಬುವವರು ದೂರು ನೀಡಿದ್ದು ‘ಜಗಳ ಪರಿಹರಿಸಲು ಬಂದ ನನ್ನ ಮೇಲೆ ಹಲ್ಲೆ ಮಾಡಿ ಕುಕನೂರು ಪಿಎಸ್‌ಐ ಜಾತಿನಿಂದನೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ತಳಕಲ್‌ ಗ್ರಾಮದ ನನ್ನ ಸಂಬಂಧಿಕರ ದಂಪತಿ ಜಗಳ ಪರಿಹರಿಸಲು ಕುಕನೂರು ಪೊಲೀಸ್‌ ಠಾಣೆಗೆ ಬಂದು ನಡೆದ ವಿಷಯವನ್ನು ಪಿಎಸ್‌ಐ ಮುಂದೆ ಹೇಳುತ್ತಿದ್ದೆ. ದಂಪತಿ ಜಗಳದ ವಿಚಾರದಲ್ಲಿ ಗಂಡನಿಗೆ ಬುದ್ಧಿ ಹೇಳಿ ಕಳಿಸಿ ಎಂದಾಗ ಅವಾಚ್ಯ ಪದಗಳಿಂದ ಪಿಎಸ್‌ಐ ನನ್ನನ್ನು ನಿಂದಿಸಿದ್ದಾರೆ’ ಎಂದು ಗಾಳೆಪ್ಪ ಆರೋಪಿಸಿದ್ದಾರೆ.

ADVERTISEMENT

ಈ ವಿಷಯಕ್ಕಾಗಿ ಮಾತಿನ ಚಕಮಕಿ ನಡೆದಿದ್ದು, ಕೆಲ ಹೊತ್ತಿನಲ್ಲಿ ಪೊಲೀಸ್ ಠಾಣೆ ಎದುರು ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಮೊದಲು ಸಿಪಿಐ ಮೌನೇಶ್ವರ ಪಾಟೀಲ್‌ ಹಾಗೂ ಡಿವೈಎಸ್‌ಪಿ ಮುತ್ತಣ್ಣ ಸವರಗೋಳ ಬಂದು ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಆಮಾನತು ಮಾಡುವ ತನಕ ಹೋರಾಟ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

‘ಪೊಲೀಸ್‌ ಠಾಣೆಯಲ್ಲಿ ಏನಾಗಿದೆ ಎನ್ನುವುದನ್ನು ಸಿಸಿಟಿವಿ ಕ್ಯಾಮೆರಾದ ಮೂಲಕ ಮಾಹಿತಿ ಪಡೆದುಕೊಂಡಿದ್ದೇನೆ. ಪಿಎಸ್‌ಐನಿಂದ ತಪ್ಪಾಗಿದೆ, ಇದಕ್ಕಾಗಿ ವಿಷಾದ ವ್ಯಕ್ತಪಡಿಸುವೆ. ತನಿಖೆ ಮಾಡಲಾಗುವುದು‘ ಎಂದು ಡಿವೈಎಸ್‌ಪಿ ಮುತ್ತಣ್ಣ ಅವರು ಹೇಳುತ್ತಿದ್ದಂತೆ ’ಪೊಲೀಸ್ ಅಧಿಕಾರಿಯದ್ದು ತಪ್ಪಾಗಿದೆ ಎಂದು ಹೇಳುತ್ತೀರಿ. ಅಮಾನತು ಮಾಡಿ, ಇಲ್ಲವೇ ಪಿಎಸ್‌ಐ ವಿರುದ್ಧ ಎಫ್‌ಐಆರ್‌ ದಾಖಲಿಸಿ’ ಎಂದು ಹೋರಾಟ ನಿರತರು ಒತ್ತಾಯಿಸಿದರು. ಪರಿಸ್ಥಿತಿ ಕೈ ಮೀರುವ ಲಕ್ಷಣಗಳು ಕಂಡುಬರುತ್ತಿದ್ದಂತೆಯೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಹಾಗೂ ಹೆಚ್ಚುವರಿ ಎಸ್‌.ಪಿ. ಹೇಮಂತಕುಮಾರ್‌ ಸ್ಥಳಕ್ಕೆ ಭೇಟಿ ನೀಡಿ ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಆದರೂ ಹೋರಾಟ ನಿರತರು ಜಗ್ಗಲಿಲ್ಲ.

ದೂರುದಾರರು ಹಾಗೂ ಎಸ್‌.ಪಿ. ಜೊತೆ ಬಳ್ಳಾರಿ ವಲಯದ ಐಜಿಪಿ ವರ್ತಿಕಾ ಕಟಿಯಾರ್ ದೂರವಾಣಿಯಲ್ಲಿ ಮಾತನಾಡಿ ‘ಕೆಲ ಹೊತ್ತು ಸಮಯ ಕೊಡಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.