ADVERTISEMENT

ಸಾರ್ವಜನಿಕರ ಸಭೆ: ಬೀಟ್‌ ವ್ಯವಸ್ಥೆ ಬಲಗೊಳಿಸಲು ಎಡಿಜಿಪಿ ಅಲೋಕ್‌ ಕುಮಾರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 4:21 IST
Last Updated 8 ಡಿಸೆಂಬರ್ 2023, 4:21 IST
ಕೊಪ್ಪಳದಲ್ಲಿ ಗುರುವಾರ ನಡೆದ ಸಾರ್ವಜನಿಕರ ಸಭೆಯಲ್ಲಿ ಎಡಿಜಿಪಿ (ತರಬೇತಿ) ಅಲೋಕ್‌ ಕುಮಾರ್‌ ಮಾತನಾಡಿದರು. ಬಳ್ಳಾರಿ ವಲಯದ ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್ (ಎಡ), ಎಸ್‌ಪಿ ಯಶೋಧಾ ವಂಟಗೋಡಿ ಪಾಲ್ಗೊಂಡಿದ್ದರು
ಕೊಪ್ಪಳದಲ್ಲಿ ಗುರುವಾರ ನಡೆದ ಸಾರ್ವಜನಿಕರ ಸಭೆಯಲ್ಲಿ ಎಡಿಜಿಪಿ (ತರಬೇತಿ) ಅಲೋಕ್‌ ಕುಮಾರ್‌ ಮಾತನಾಡಿದರು. ಬಳ್ಳಾರಿ ವಲಯದ ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್ (ಎಡ), ಎಸ್‌ಪಿ ಯಶೋಧಾ ವಂಟಗೋಡಿ ಪಾಲ್ಗೊಂಡಿದ್ದರು   

ಕೊಪ್ಪಳ: ‘ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸರು ಜನಸ್ನೇಹಿಯಾಗಿರುವುದು ಅಗತ್ಯ. ಗ್ರಾಮೀಣ ಪ್ರದೇಶದಲ್ಲಿ ಬೀಟ್‌ ವ್ಯವಸ್ಥೆ ಬಲಗೊಳಿಸಿದರೆ ಮಾತ್ರ ದುರ್ಘಟನೆಗಳನ್ನು ತಡೆಯಲು ಸಾಧ್ಯವಾಗುತ್ತದೆ’ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ತರಬೇತಿ) ಅಲೋಕ್‌ ಕುಮಾರ್‌ ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಸಾರ್ವಜನಿಕರೊಂದಿಗೆ ಅವರು ಸಭೆ ನಡೆಸಿದಾಗ ಅನೇಕ ದೂರುಗಳು ಕೇಳಿಬಂದವು.

ಕೊಪ್ಪಳ ಗ್ರಾಮೀಣ ಠಾಣೆ ವ್ಯಾಪ್ತಿಯ ಬಹದ್ದೂರ್‌ ಬಂಡಿ ಗ್ರಾಮದಲ್ಲಿ ಗಾಂಜಾ ಹಾಗೂ ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕು, ನನ್ನ ಮಗಳಿಗೆ ಸೈಬರ್‌ ವಂಚನೆಯಾಗಿದ್ದು ಆನ್‌ಲೈನ್‌ ಮೂಲಕ ದೂರು ದಾಖಲಿಸಲಾಗಿದ್ದು ಕ್ರಮ ಕೈಗೊಳ್ಳಬೇಕು, ಬುದಗುಂಪಾದಲ್ಲಿ ಪೊಲೀಸ್‌ ಠಾಣೆ ಆರಂಭಿಸಬೇಕು, ಸಿಬ್ಬಂದಿ ಕೊರತೆಯಿದ್ದು ಅದನ್ನು ಸರಿಪಡಿಸಬೇಕು ಎನ್ನುವ ಬೇಡಿಕೆಗಳನ್ನು ಜನರು ಎಡಿಜಿಪಿ ಅವರ ಮುಂದಿಟ್ಟರು.

ADVERTISEMENT

ಈ ಎಲ್ಲಾ ಬೇಡಿಕೆಗಳನ್ನು ಆಲಿಸಿ ಸಂಬಂಧಿಸಿದ ಪೊಲೀಸ್‌ ಠಾಣೆ ಇನ್‌ಸ್ಟೆಕ್ಟರ್‌ಗಳಿಗೆ ಮಾಹಿತಿ ಪಡೆದು ಅಲ್ಲೇ ಉತ್ತರ ನೀಡಿದರು. ಕೆಲ ಪ್ರಕರಣಗಳಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಬಳಿಕ ಮಾತನಾಡಿದ ಅಲೋಕ್‌ ಕುಮಾರ್‌ ‘ಗಾಂಜಾ ಹಾವಳಿ ಮತ್ತು ಮದ್ಯ ಅಕ್ರಮ ಮಾರಾಟದ ವಿರುದ್ಧ ನಾವು ಕಠಿಣ ಕ್ರಮಗಳ ಮೂಲಕ ಹೋರಾಡಬೇಕಾಗಿದೆ. ಬೀಟ್‌ ವ್ಯವಸ್ಥೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪರಿಣಾಮಕಾರಿಯಾಗಬೇಕು. ಬೀಟ್‌ ಪೊಲೀಸರು ತಪ್ಪೆಸಗಿದರೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರಿಗೆ ಸೂಚಿಸಿದರು.

‘ಕಾರಟಗಿ ಹಾಗೂ ಹುಲಿಹೈದರ ಗ್ರಾಮದಲ್ಲಿ ಹಿಂದೆ ನಡೆದ ಘಟನೆಗಳು ಮರುಕಳಿಸಬಾರದು. ಜಿಲ್ಲೆಯಲ್ಲಿ ಎಲ್ಲಿಯೂ ಕೋಮುಗಲಭೆ, ಜಾತಿ ಸಂಘರ್ಷ ಹಾಗೂ ವೈಷಮ್ಯಕ್ಕೆ ಅವಕಾಶವಿಲ್ಲದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕು. ಕೋಮುಸೌಹಾರ್ದ ಕದಡುವ ಸಂದರ್ಭಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಇದಕ್ಕೆ ಪೊಲೀಸರ ಶ್ರಮದ ಜೊತೆಗೆ ಸಾರ್ವಜನಿಕರ ಸಹಭಾಗಿತ್ವ ಕೂಡ ಅಗತ್ಯವಾಗಿದೆ’ ಎಂದು ಹೇಳಿದರು.

‘ವಿನಾಕಾರಣ ಕೋಮು ವೈಷಮ್ಯ ಬೆಳೆಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಗಂಗಾವತಿ ಭಾಗದಲ್ಲಿ ಈ ರೀತಿಯ ಘಟನೆಯನ್ನು ಬೆಳೆಸುವವರ ಬಗ್ಗೆ ಪಟ್ಟಿ ಸಿದ್ಧಪಡಿಸಿಕೊಂಡು ಶುಕ್ರವಾರ ನಡೆಯುವ ಸಭೆಗೆ ತರಬೇಕು’ ಎಂದು ನಿರ್ದೇಶನ ನೀಡಿದರು.

ಬಳ್ಳಾರಿ ವಲಯದ ಐಜಿಪಿ ಬಿ.ಎಸ್.ಲೋಕೇಶ್ ಕುಮಾರ್, ಎಸ್‌ಪಿ ಯಶೋಧಾ ವಂಟಗೋಡಿ ವೇದಿಕೆ ಮೇಲಿದ್ದರು.  

ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು
ಎಡಿಜಿಪಿ ಆದ ಬಳಿಕ ಮೊದಲ ಬಾರಿಗೆ ಕೊಪ್ಪಳಕ್ಕೆ ಭೇಟಿ ಪೊಲೀಸ್‌ ಸಿಬ್ಬಂದಿ ಕೊರತೆ ಬಗ್ಗೆಯೂ ಚರ್ಚೆ ಹೊಸ ಠಾಣೆಗಳ ಅಗತ್ಯತೆ; ಪ್ರಸ್ತಾವಕ್ಕೆ ಎಸ್‌ಪಿಗೆ ಸೂಚನೆ
ಗಂಗಾವತಿಯಲ್ಲಿ ಮುಸ್ಲಿಂ ವೃದ್ಧನ ಮೇಲೆ ಹಲ್ಲೆ ನಡೆದ ಘಟನೆಯ ಬಗ್ಗೆ ವಿವರವಾದ ಮಾಹಿತಿ ತನ್ನಿ. ಶುಕ್ರವಾರದ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸೋಣ.
ಅಲೋಕ್‌ ಕುಮಾರ್‌ ಎಡಿಜಿಪಿ (ತರಬೇತಿ)
‘ಎಲ್ಲ ಹಂತದಲ್ಲಿಯೂ ಸಾರ್ವಜನಿಕ ಸಭೆ ನಡೆಸಿ’
ಗಂಗಾವತಿಯ ಶಂಕರಗೌಡ ಎಂಬುವರು ‘ಗಂಗಾವತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಪೊಲೀಸರು ಹೋಳಿಹುಣ್ಣಿಮೆ ಗಣೇಶ ಚತುರ್ಥಿ ಮತ್ತು ರಂಜಾನ್‌ ಸಮಯದಲ್ಲಿ ಮತ್ರ ಸಾರ್ವಜನಿಕ ಸಭೆ ಮಾಡುತ್ತಾರೆ. ಸಂಚಾರ ದಟ್ಟಣೆ ನಿರ್ವಹಣೆ ಬಗ್ಗೆಯೂ ನಮ್ಮೊಂದಿಗೆ ಚರ್ಚಿಸುವುದಿಲ್ಲ’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಲೋಕ್‌ ಕುಮಾರ್ ‘ಈ ಮೂರು ಹಬ್ಬಗಳ ಸಂದರ್ಭದಲ್ಲಿ ಮಾತ್ರ ಸಭೆ ನಡೆಸಲಾಗುತ್ತಿದೆ. ಪೊಲೀಸರು ತಮಗೆ ಪರಿಚಯದವರನ್ನು ಮಾತ್ರ ಸಭೆಗೆ ಕರೆಯುತ್ತಾರೆ ಎನ್ನುವ ದೂರುಗಳು ಎಲ್ಲ ಕಡೆಯೂ ಇದೆ. ಇದು ಸರಿಯಲ್ಲ’ ಎಂದರು. ‘ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಇನ್‌ಸ್ಟೆಕ್ಟರ್‌ ಡಿವೈಎಸ್‌ಪಿ ಹಾಗೂ ಎಸ್‌ಪಿ ತಮ್ಮ ಹಂತದಲ್ಲಿ ಮೇಲಿಂದ ಮೇಲೆ ಜನಸಂಪರ್ಕ ಸಭೆ ನಡೆಸಬೇಕು’ ಎಂದು ಸೂಚಿಸಿದರು.
ಕೇಳಿಬಂದ ಪ್ರಮುಖ ದೂರುಗಳು ಹಾಗೂ ಕೋರಿಕೆಗಳು * ಲಕ್ಷ್ಮಣ ದಾಸರ ಅಳವಂಡಿ: ನನ್ನ ತಮ್ಮ ನನ್ನನ್ನು ಹಾಗೂ ಹೆಂಡತಿಯನ್ನು ಹೊಡೆಯುತ್ತಾನೆ. ನನ್ನ ಪಾಲಿನ ಹೊಲ ನನಗೆ ಬಿಸಿಡಿಕೊಡಿ ಎಂದು ಕೋರಿದರು. * ಕುಷ್ಟಗಿಯ ದೇವೇಂದ್ರ ಬಳೂಟಗಿ ಹಾಗೂ ಇತರ ರೈತರು: ಶ್ರೀಗಂಧ ಬೆಳದಿದ್ದೇವೆ. ರಕ್ಷಣೆಯೇ ಸವಾಲಾಗಿದೆ. ದೂರು ನೀಡಿದರೆ ತೆಗೆದುಕೊಳ್ಳುವುದಿಲ್ಲ. * ಗಂಗಾವತಿ ಕಾಸೀಂಅಲಿ ಮುದ್ದಾಬಳ್ಳಿ: ಇತ್ತೀಚೆಗೆ ಮುಸ್ಲಿಂ ಸಮಾಜದ ವೃದ್ಧನ ಮೇಲೆ ಹಲ್ಲೆ ನಡೆದಿದ್ದು ಯಾವುದೇ ಘಟನೆಗೆ ಕೋಮು ಬಣ್ಣ ಬಳಿಯದೇ ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. * ಯಮುನಾ ಬೆಸ್ತರ ಸಖಿ ಒನ್ ಸ್ಟಾಪ್ ಕೇಂದ್ರದ ಆಡಳಿತಾಧಿಕಾರಿ: ಕೇಂದ್ರದಲ್ಲಿ ಪ್ರಕರಣ ವಿಚಾರಣೆ ವೇಳೆ ಪೊಲೀಸರನ್ನು ನಿಯೋಜಿಸಿ. * ಯೋಗಾನಂದ: ಬಹದ್ದೂರ್‌ಬಂಡಿಯಲ್ಲಿ ಗಾಂಜಾ ಹಾವಳಿ ವ್ಯಾಪಕವಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳು ಸಹ ಇದನ್ನು ಸೇವಿಸುತ್ತಿದ್ದಾರೆ.
‘ತೊಂದರೆ ನೀಡಿದರೆ ಗಡಿಪಾರು’
ಕುಕನೂರು ತಾಲ್ಲೂಕಿನ ಚಿಕೇನಕೊಪ್ಪ ಗ್ರಾಮದ ಮಹಾಂತಯ್ಯ ಎಂಬುವರು ’ವಿಂಡ್‌ ಪವರ್‌ ಕಂಪನಿಯವರು ನನಗೆ ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ. ಅಲ್ಲಿನ ಪೊಲೀಸ್‌ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ’ ಎಂದು ದೂರಿದರು. ಈ ಕುರಿತು ಮಾಹಿತಿ ಪಡೆದ ಅಲೋಕ್‌ ಕುಮಾರ್‌ ‘ರಸ್ತೆಯಲ್ಲಿ ವಾಹನ ಅಡ್ಡಹಾಕಿ ನೀವು ಸಾರ್ವಜನಿಕರಿಗೆ ತೊಂದರೆ ಪಡಿಸಿದರೆ ಅದನ್ನು ಒಪ್ಪುವುದಿಲ್ಲ. ನಿಮ್ಮ ಮೇಲೆ ಈಗಾಗಲೇ ಪ್ರಕರಣವಿದೆ. ಗಲಾಟೆ ಇದೇ ರೀತಿ ಮುಂದುವರಿದರೆ ಗಡಿಪಾರು ಮಾಡಲಾಗುವುದು’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.