ADVERTISEMENT

ಕಾರಟಗಿ | ತವರಿಗೆ ಮರಳಿದ ಯೋಧ: ಅದ್ದೂರಿ ಮೆರವಣಿಗೆ, ಸ್ವಾಗತ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 6:11 IST
Last Updated 4 ಫೆಬ್ರುವರಿ 2026, 6:11 IST
ಕಾರಟಗಿಯಲ್ಲಿ ತಾಲ್ಲೂಕಾಡಳಿತ ಹಾಗೂ ಪುರಸಭೆಯಿಂದ ನಿವೃತ್ತಿಯಾಗಿ ತವರಿಗೆ ತೆರಳುತ್ತಿದ್ದ ಯೋಧ ವೀರೇಶ ಗಾದಿಗನೂರುಗೆ ಮಂಗಳವಾರ ಅದ್ದೂರಿ ಸ್ವಾಗತ ನೀಡಿ, ಸನ್ಮಾನಿಸಲಾಯಿತು
ಕಾರಟಗಿಯಲ್ಲಿ ತಾಲ್ಲೂಕಾಡಳಿತ ಹಾಗೂ ಪುರಸಭೆಯಿಂದ ನಿವೃತ್ತಿಯಾಗಿ ತವರಿಗೆ ತೆರಳುತ್ತಿದ್ದ ಯೋಧ ವೀರೇಶ ಗಾದಿಗನೂರುಗೆ ಮಂಗಳವಾರ ಅದ್ದೂರಿ ಸ್ವಾಗತ ನೀಡಿ, ಸನ್ಮಾನಿಸಲಾಯಿತು   

ಕಾರಟಗಿ: ‘ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ, 3 ದಿನಗಳ ಹಿಂದೆ ನಿವೃತ್ತರಾಗಿ ತವರಿಗೆ ಮರಳಿದ ಯೋಧ ವೀರೇಶ ಪಂಪನಗೌಡ ಗಾದಿಗನೂರು ಅವರಿಗೆ ಪಟ್ಟಣ ಹಾಗೂ ಸ್ವ ಗ್ರಾಮ ಮೈಲಾಪುರದಲ್ಲಿ ಮಂಗಳವಾರ ಅದ್ದೂರಿ ಸ್ವಾಗತ ನೀಡಿ, ಗೌರವ ಸಲ್ಲಿಸಲಾಯಿತು.

ತಾಲ್ಲೂಕು ಆಡಳಿತದ ಪರವಾಗಿ ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ, ಪುರಸಭೆ ಪರವಾಗಿ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೀಕಾರ್‌ ಸೇರಿದಂತೆ ವಿವಿಧ ಗ್ರಾಮಗಳ ನಾಗರಿಕರು ಯೋಧ ವೀರೇಶಗೆ ಅದ್ದೂರಿಯಾಗಿ ಸ್ವಾಗತ ನೀಡಿ, ಸನ್ಮಾನಿಸಿದರು. ಜೈಜವಾನ್, ಜೈ ಭಾರತ ಮಾತಾಕೀ ಜೈ ಘೋಷಣೆಗಳು ಮೊಳಗಿದವು.

ಯೋಧ ವೀರೇಶ ಅವರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ, ಜೆಸಿಬಿ ಯಂತ್ರದ ಮೇಲಿಂದ ಹೂ ಮಳೆಗರೆಯಲಾಯಿತು. ರಾಜ್ಯ ಹೆದ್ದಾರಿ, ಕನಕದಾಸ ವೃತ್ತ, ನವಲಿ ರಸ್ತೆ ಮೂಲಕ ಪಟ್ಟಣದ ಹೊರವಲಯ ದಾಟಿ, ಸ್ವಗ್ರಾಮ ಮೈಲಾಪುರದವರೆಗೆ ಮೆರವಣಿಗೆ ನಡೆಸಲಾಯಿತು.

ADVERTISEMENT

ಮೈಲಾಪುರ ಗ್ರಾಮದ ಪಂಪನಗೌಡ, ದೊಡ್ಡಮ್ಮ ದಂಪತಿಯ ದ್ವಿತೀಯ ಪುತ್ರ ವೀರೇಶ, 24 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಮೈಲಾಪುರದಲ್ಲಿ ಯೋಧನ ಆಗಮನದ ನಿಮಿತ್ತ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಪೂರ್ಣಕುಂಭ, ಕಳಸ ಹೊತ್ತ ಮಹಿಳೆಯರು, ಗ್ರಾಮಸ್ಥರು ಯೋಧರನ್ನು ಸ್ವಾಗತಿಸಿಕೊಂಡರು. ಸಿಹಿ ಹಂಚಿ ಸಂಭ್ರಮಪಟ್ಟರು. ಶ್ರೀಗಳು, ಹಿರಿಯರು, ವರ್ತಕರು, ಶಿಕ್ಷಕರು, ಗೆಳೆಯರು ಸೇರಿದಂತೆ ಅಪಾರ ಜನಸ್ತೋಮ ಮೆರವಣಿಗೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಇಡೀ ಊರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಯೋಧನ ಸಾಧನೆ: 2002ರ ಜ. 25ರಂದು ಸೇನೆಗೆ ಸೇರಿ, ಬೆಂಗಳೂರಿನಲ್ಲಿ ತರಬೇತಿ ಪಡೆದು, ಸಿಕಂದರಾಬಾದ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಅರುಣಾಚಲ ಪ್ರದೇಶ, ಮಥುರಾ, ಸಿಕ್ಕಿಂ, ಮೀರತ್, ಕುಪ್ವಾರ ಹಾಗೂ ಉತ್ತರಾ ಖಂಡದಲ್ಲಿ ಸೇವೆ ಸಲ್ಲಿಸಿದ್ದರು.

ಪರ್ವತಾರೋಹಣದ ಸಾಧನೆ: ಯೋಧ ವೀರೇಶ ಪರ್ವತಾರೋಹಣ ಕ್ಷೇತ್ರದಲ್ಲೂ ಆಸಕ್ತಿ ಹೊಂದಿ, ದಾಖಲೆ ತಮ್ಮದಾಗಿಸಿಕೊಂಡಿದ್ದಾರೆ. 4 ದಿನಗಳಲ್ಲಿ 6 ಸಾವಿರ ಮೀಟರ್ ಎತ್ತರದ 17 ಪರ್ವತಗಳನ್ನು ಹತ್ತಿದ ದಾಖಲೆಯನ್ನು ಏಷ್ಯಾ ಬುಕ್ ಆಫ್ ರೆಕಾರ್ಡ್ ಮತ್ತು ವರ್ಲ್ಡ್‌ ಬುಕ್ ಆಫ್ ರೆಕಾರ್ಡ್‌ ಮತ್ತು 2022ರಲ್ಲಿ 3 ದಿನಗಳಲ್ಲಿ 11 ಪರ್ವತಗಳನ್ನು ಏರಿದ್ದರು. 3 ಪರ್ವತಗಳಿಗೆ ಹೊಸ ಮಾರ್ಗ ಅನ್ವೇಷಣೆ ಮಾಡಿ ದಾಖಲೆ ನಿರ್ಮಿಸಿದ್ದಾರೆ. 40ಕ್ಕೂ ಹೆಚ್ಚು ಪರ್ವತಗಳನ್ನು ಏರಿದ ಸಾಧನೆ ಇವರದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.