
ಕುಷ್ಟಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿ ವರ್ಷದ ನಿಮಿತ್ತ ಪಟ್ಟಣದಲ್ಲಿ ಶನಿವಾರ ಪಥಸಂಚಲನ ಶಾಂತಿಯುತವಾಗಿ ನಡೆಯಿತು.
ಗಣವೇಷಧಾರಿಗಳ ಎರಡು ತಂಡಗಳ ಮೂಲಕ ಕನ್ನಿಕಾಪರಮೇಶ್ವರಿ ದೇವಸ್ಥಾನದ ಆವರಣದಿಂದ ನಡೆದ ಪಥಸಂಚಲನಕ್ಕೆ ಮಹಿಳೆಯರು ಆರತಿ ಬೆಳಗಿ ಚಾಲನೆ ನೀಡಿದರು. ಪ್ರಾರಂಭದಲ್ಲಿ ಸಂಘದ ಪ್ರಾರ್ಥನೆ ನೆರವೇರಿತು. ಬೇರೆ ಬೇರೆ ಪಥಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿದ ಗಣವೇಷಧಾರಿಗಳು ಸ್ವಯಂ ಪ್ರೇರಣೆಯಿಂದ ಪಥಸಂಚಲನದಲ್ಲಿ ಭಾಗವಹಿಸಿ ಸಾರ್ವಜನಿಕರ ಗಮನಸೆಳೆದರು.
ಪಥಸಂಚಲನ ನಡೆಸುವ ಮಾರ್ಗ, ಪ್ರಮುಖ ವೃತ್ತಗಳನ್ನು ಸ್ವಚ್ಛಗೊಳಿಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ಮನೆಗಳ ಮುಂದೆ ಮಹಿಳೆಯರು, ತಳಿರು ತೋರಣಗಳನ್ನು ಕಟ್ಟಿ, ಬಣ್ಣ ಬಣ್ಣದ ಆಕರ್ಷಕ ಚಿತ್ತಾರದ ರಂಗೋಲಿ ಬಿಡಿಸಿದ್ದರು. ಗಣವೇಷಧಾರಿಗಳ ತಂಡ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತಾ ತಮ್ಮ ತಮ್ಮ ಮನೆಗಳ ಮುಂದೆ ಸಾಗುತ್ತಿದ್ದಂತೆ ಅವರ ಮೇಲೆ ಸಾರ್ವಜನಿಕರು ಪುಷ್ಪವೃಷ್ಠಿ ಗೈಯುತ್ತಿದ್ದುದು ಸಾಮಾನ್ಯವಾಗಿತ್ತು. ಹಾಗಾಗಿ ಇಡೀ ಪಟ್ಟಣದ ಪ್ರಮುಖ ರಸ್ತೆಗಳು ಹೂವಿನ ಪಕಳೆಗಳು ಮತ್ತು ರಂಗೋಲಿಯಿಂದ ತುಂಬಿದ್ದು ಕಂಡುಬಂದಿತು.
ನಂತರ ಬಸವೇಶ್ವರ ವೃತ್ತದ ಬಳಿ ಗಣವೇಷಧಾರಿಗಳ ಎರಡೂ ತಂಡಗಳು ಸಂಧಿಸಿದ ಸಂದರ್ಭದಲ್ಲಿ ಅಲ್ಲಿದ್ದ ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ, ಸಹದೇವಾನಂದಗಿರಿ ನಾಗಾಸಾಧು ಹಾಗೂ ನಿಡಶೇಸಿ ಅಭಿನವ ಕರಿಬಸವ ಸ್ವಾಮೀಜಿ, ಶಾಸಕ ದೊಡ್ಡನಗೌಡ ಪಾಟೀಲ, ವಿಧಾನಪರಿಷತ್ತಿನ ಸದಸ್ಯೆ ಹೇಮಲತಾ ನಾಯಕ ಪುಷ್ಪವೃಷ್ಠಿಗೈದರು.
ಮಕ್ಕಳು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಮುಖಂಡರು, ಕಾರ್ಯಕರ್ತರು, ಅನೇಕ ಸಮುದಾಯಗಳ ಯುವಕರು, ವೈದ್ಯರು, ಮಾಜಿ ಸೈನಿಕರು, ಮಕ್ಕಳೂ ಸೇರಿದಂತೆ ನೂರಾರು ಜನ ಖಾಕಿ ಪ್ಯಾಂಟ್, ಬಿಳಿ ಅಂಗಿ, ಕರಿಟೋಪಿ ಹಾಕಿ ಕೈಯಲ್ಲಿ ಕೋಲು ಹಿಡಿದು ಗಮನಸೆಳೆದರು. ಅದೇ ರೀತಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಶರಣರು, ಸಾಧು ಸಂತರು, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಿದ್ದ ನೂರಾರು ಫ್ಲೆಕ್ಸ್, ಕಟೌಟ್‌ಗಳನ್ನು ಅಳವಡಿಸಲಾಗಿತ್ತು. ಅಲ್ಲದೆ ಪಥಸಂಚಲನದ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸ್ ವರಿಷ್ಠ ಹೇಮಂತಕುಮಾರ, ಡಿವೈಎಸ್‌ಪಿಗಳಾದ ಜಯಪ್ಪ ನ್ಯಾಮೇಗೌಡರ, ಮುತ್ತಣ್ಣ, ಡಿಆರ್ ಡಿವೈಎಸ್‌ಪಿ ಶಶಿಧರ ಹಿರೇಮಠ ನೇತೃತ್ವದಲ್ಲಿ ನೂರಾರು ಪೊಲೀಸರು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.
ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹ ಸಂದೀಪ್ ಮುತಗಿ, ಕೊಪ್ಪಳ, ರಾಯಚೂರು ಜಿಲ್ಲಾ ಪ್ರಚಾರಕ ವಿಠ್ಠಲಜಿ, ಶಾಸಕ ದೊಡ್ಡನಗೌಡ ಪಾಟೀಲ, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಡಾ.ಕೆ.ಬಸವರಾಜ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಮಹೇಶ, ಬಿಜೆಪಿ ಅಧ್ಯಕ್ಷ ಮಹಾಂತೇಶ ಬದಾಮಿ, ಬಸವರಾಜ ಹಳ್ಳೂರು, ಶರಣು ತಳ್ಳಿಕೇರಿ, ಶಶಿಧರ ಕವಲಿ, ವೀರಣ್ಣ ಗಡಾದ, ನಾಗರಾಜ ಮೇಲಿನಮನಿ, ಪಾಂಡುರಂಗ ಆಶ್ರೀತ್, ವಿನಯಕುಮಾರ ಮೇಲಿನಮನಿ, ತಾಲ್ಲೂಕು ಹಾಗೂ ಜಿಲ್ಲೆಯ ಬಿಜೆಪಿ ಪ್ರಮುಖರು, ಸಂಘದ ತಾಲ್ಲೂಕು ಮಟ್ಟದ ಕಾರ್ಯಕರ್ತರು ಇದ್ದರು. ತಾಲ್ಲೂಕು ಆರ್‌ಎಸ್‌ಎಸ್ ಕಾರ್ಯವಾಹ ಬಸವರಾಜ.ಎನ್.ಪಾಟೀಲ, ಆರ್‌ಎಸ್‌ಎಸ್ ಮುಖ್ಯಶಿಕ್ಷಕ ಮಂಜುನಾಥ್, ನಿತೀನ್‌ಗೌಡ ಪಾಟೀಲ, ಧ್ವಜ ಪ್ರಮುಖ ಪ್ರಫುಲ್‌ಕುಮಾರ ಕೆಲೂರು, ವೀರೇಶ ತೊಂಡಿಹಾಳ ಇತರರು ನೇತೃತ್ವ ವಹಿಸಿದ್ದರು.
ಆರ್‌ಎಸ್‌ಎಸ್ ರಾಷ್ಟ್ರಪ್ರೇಮ ಶಿಸ್ತು ಬೆಳೆಸುವುದರ ಜೊತೆಗೆ ರಾಷ್ಟ್ರಪತಿ ಪ್ರಧಾನಿ ಮುಖ್ಯಮಂತ್ರಿ ಸೇರಿದಂತೆ ದೇಶಕ್ಕೆ ಅನೇಕ ಮಹಾನ್ ಸಮರ್ಥ ನಾಯಕರ ಕೊಡುಗೆಯನ್ನೂ ನೀಡಿದೆ. ಸನಾತನ ಧರ್ಮ ಉಳಿಸುವಲ್ಲಿ ಸಂಘದ ಪಾತ್ರ ದೊಡ್ಡದುಸಹದೇವಾನಂದಗಿರಿ ನಾಗಾಸಾಧು ಕುಷ್ಟಗಿ
ಸಂಘವು ಮೂಲ ಸಂಸ್ಕೃತಿ ಸಂಸ್ಕಾರ ಉಳಿಸುತ್ತಿದೆ. ಹಿಂದೂ ಸಮಾಜ ಧರ್ಮವನ್ನು ಎತ್ತಿ ಹಿಡಿಯುವ ಮಹತ್ಕಾರ್ಯ ನಡೆಸುತ್ತ ಬಂದಿದೆ ಕರಿಬಸವ ಸ್ವಾಮೀಜಿ ಮದ್ದಾನಿ ಹಿರೇಮಠ === ದೇಶ ಪ್ರೇಮ ಬೆಳೆದಲ್ಲಿ ಯುವಶಕ್ತಿಯನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್ ಪಾತ್ರ ಮಹತ್ವದ್ದುಅಭಿನವ ಕರಿಬಸವ ಸ್ವಾಮೀಜಿ ನಿಡಶೇಸಿ ಪಶ್ಚಕಂತಿಮಠ
ಪಥಸಂಚಲನದಲ್ಲಿ ಜಾತಿ ವರ್ಗಗಳನ್ನು ಮೀರಿ ಜನ ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದಾರೆ. ಆರ್‌ಎಸ್‌ಎಸ್ ಯಾವುದೇ ಜಾತಿ ರಾಜಕೀಯಕ್ಕೆ ಸೀಮಿತಗೊಂಡಿಲ್ಲ ದೇಶವನ್ನು ಪ್ರೀತಿಸುವವರು ಸಂಘವನ್ನು ಪ್ರೀತಿಸದೆ ಇರಲಾರರುದೊಡ್ಡನಗೌಡ ಪಾಟೀಲ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.