ADVERTISEMENT

ಆದಾಪುರ ಸರ್ಕಾರಿ ಶಾಲೆಗೆ ಸಚಿವ ಶಿವರಾಜ ತಂಗಡಗಿ ತಾಯಿಯಿಂದ 1 ಎಕರೆ ಭೂ ದಾನ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 14:33 IST
Last Updated 2 ಫೆಬ್ರುವರಿ 2026, 14:33 IST
<div class="paragraphs"><p>ಆದಾಪುರ ಸರ್ಕಾರಿ ಶಾಲೆಗೆ ಸಚಿವ ಶಿವರಾಜ ತಂಗಡಗಿ ತಾಯಿಯಿಂದ 1 ಎಕರೆ&nbsp;ಭೂ ದಾನ</p></div>

ಆದಾಪುರ ಸರ್ಕಾರಿ ಶಾಲೆಗೆ ಸಚಿವ ಶಿವರಾಜ ತಂಗಡಗಿ ತಾಯಿಯಿಂದ 1 ಎಕರೆ ಭೂ ದಾನ

   

ಕ‌ನಕಗಿರಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಆದಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ನೆರವಾಗಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ತಾಯಿ ಹುಲಿಗೆಮ್ಮ‌ ಸಂಗಪ್ಪ ಅವರು ಒಂದು ಎಕರೆ ಭೂಮಿ ದಾನ ನೀಡಿದ್ದಾರೆ.

ಶಾಲೆಗೆ ಬಿಸಿಯೂಟ, ಶಾಲಾ ಕಚೇರಿ ಸೇರಿ ಒಟ್ಟು 7 ಕೊಠಡಿಗಳಿವೆ. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಶಾಲೆ ಮೇಲ್ದರ್ಜೆಗೆ ಏರಬೇಕಿತ್ತು. ಶಾಲಾ ಜಾಗಕ್ಕೆ ಸಂಬಂಧಿಸಿದಂತೆ ಈ‌ ಹಿಂದೆ ಸಾಕಷ್ಟು ಸಲ ಬೇಡಿಕೆ ವ್ಯಕ್ತವಾಗಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಮತದಾನ‌ ಬಹಿಷ್ಕಾರ ಹಾಕುವುದಾಗಿ ಜನರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ‌ನೀಡಿದ್ದರು. ಆಗ ಚುನಾವಣಾ ಅಭ್ಯರ್ಥಿಯಾಗಿ ಗ್ರಾಮಕ್ಕೆ ಭೇಟಿ‌ ನೀಡಿದ್ದ ತಂಗಡಗಿ ಗ್ರಾಮಸ್ಥರ ಮನವೊಲಿಸುವ ಯತ್ನ ನಡೆಸಿದ್ದರು.

ADVERTISEMENT

ಶಾಲೆಯ ಜಾಗದ ಸಮಸ್ಯೆ‌ ಬಗೆಹರಿಸದಿದ್ದರೆ ಬಹಿಷ್ಕಾರ ಹಾಕುವ‌ ಮಾತನ್ನು ಗ್ರಾಮಸ್ಥರು ಪುನರುಚ್ಚಿಸಿದ್ದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಶಾಲೆಗೆ ಒಂದು ಎಕರೆ ಜಾಗ ದಾನವಾಗಿ ‌ಕೊಡುವುದಾಗಿ ಭರವಸೆ ನೀಡಿದ್ದರು. ಅವರ ತಾಯಿಯ ಹೆಸರಿನಲ್ಲಿ ಸ್ಥಳೀಯರಿಂದ‌ ಒಂದು ಎಕರೆ ಭೂಮಿ ಖರೀದಿಸಿ ಸರ್ಕಾರಿ ಶಾಲೆಗೆ ದಾನವಾಗಿ ನೀಡಿದ್ದಾರೆ.  ರೈಸ್‌ ಟೆಕ್ನಾಲಜಿ ಪಾರ್ಕ್‌ ಯೋಜನೆ ಜಾರಿಯಾಗುತ್ತಿರುವ ಕಾರಣ ಆದಾಪುರ  ಭಾಗದಲ್ಲಿ ಭೂಮಿಗೆ ವ್ಯಾ‍ಪಕ ಬೇಡಿಕೆಯಿದೆ.

ಕಾರಟಗಿಯ ಉಪ‌ ನೋಂದಣಿ ಕಚೇರಿಯಲ್ಲಿ 80 ವರ್ಷ ವಯಸ್ಸಿನ ಹುಲಿಗೆಮ್ಮ ತಂಗಡಗಿ ದಾನವಾಗಿ ನೀಡಿದ ಭೂಮಿಯನ್ನು ರಾಜ್ಯಪಾಲರ‌ ಹೆಸರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶನಿವಾರ ನೋಂದಣಿ ಮಾಡಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ‌ ನಟೇಶ‌ ಬಿ.ಎಚ್ ಮಾತನಾಡಿ ‘ಈ ಭಾಗದ ಬಡ‌ ಮಕ್ಕಳು ಶಿಕ್ಷಣದಿಂದ‌ ವಂಚಿತವಾಗಬಾರದು ಎಂಬ ಕಾರಣಕ್ಕೆ ಸರ್ಕಾರಿ ಭೂಮಿ‌ಇಲ್ಲದ ಊರಲ್ಲಿ ಖಾಸಗಿ ಅವರಿಂದ‌ ಹೊಲ‌ ಖರೀದಿಸಿ ಶಾಲೆಗೆ ದಾನವಾಗಿ ನೀಡಿರುವುದು ಮಾದರಿಯಾಗಿದೆ’ ಎಂದರು.

ಸಚಿವರ ಆಪ್ತ ಸಹಾಯಕ‌ ಇನಾಯತ್ , ಶಿಕ್ಷಣ ಸಂಯೋಜಕರಾದ ರಾಘವೇಂದ್ರ, ಶಶಿಧರಸ್ವಾಮಿ ಪ್ರಭಾರ ಸಿಆರ್‌ಪಿ ರಾಜಕುಮಾರ, ಕಾರಟಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ,

ಮುಖ್ಯ ಶಿಕ್ಷಕರಾದ ನರಹರಿ, ರಮೇಶ‌ ಕುಕನೂರು,‌ ಶಾಮಸುಂದರ ಜೊತೆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.