ಕೊಪ್ಪಳ: ‘ಜಂಗಮರು ಪೂರ್ವಜರ ಆಚಾರ ವಿಚಾರಗಳನ್ನು ಅರಿತು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಧರ್ಮರಕ್ಷಣೆಗೆ ಮುಂದಾಗಬೇಕು. ಪ್ರತಿಯೊಬ್ಬ ಮನುಷ್ಯ ಧರ್ಮ ಸಂಸ್ಕಾರಗಳ ಪಾಲಿಸಿದರೆ ಜೀವನ ಸಾರ್ಥಕವಾಗುತ್ತದೆ’ ಎಂದು ಮೈನಳ್ಳಿ-ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು ಹೇಳಿದರು.
ನಗರದ ರೇಣುಕಾಚಾರ್ಯ ಮಂದಿರದಲ್ಲಿ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘ, ಪತ್ತಿನ ಸಹಕಾರ ಸಂಘ ಇವುಗಳ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರದ ಪ್ರಯುಕ್ತ ಭಾನುವಾರ ನಡೆದ ಜಂಗಮ ವಟುಗಳಿಗೆ ಅಯ್ಯಾಚಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಎಂಟು ವರ್ಷ ವಯಸ್ಸಿನ ಎಲ್ಲ ಜಂಗಮರು ಸಂಪ್ರದಾಯದಂತೆ ಅಯ್ಯಾಚಾರ ದೀಕ್ಷೆ ಪಡೆಯಬೇಕು. ಶಿವದೀಕ್ಷಾ ಪಡೆದ ವಟುಗಳು ಜೀವನದುದ್ದಕ್ಕೂ ನಿತ್ಯ ಸ್ನಾನದ ನಂತರ ಶಿವಪೂಜೆ ನೆರವೇರಿಸಬೇಕು, ಇದರಿಂದ ನಿಮ್ಮ ಭವಿಷ್ಯಕ್ಕೆ ಭದ್ರ ಬುನಾದಿ ದೊರೆಯುತ್ತದೆ’ ಎಂದರು.
ಬ್ರಾಹ್ಮಿ ಮುಹೂರ್ತದಲ್ಲಿ 15ಕ್ಕೂ ಹೆಚ್ಚು ಜಂಗಮ ವಟುಗಳಿಗೆ ಸ್ವಾಮೀಜಿ ಅಯ್ಯಾಚಾರ ದೀಕ್ಷೆ ನೀಡಿದರು. ಇದಕ್ಕೂ ಮುನ್ನ ರೇಣುಕಾಚಾರ್ಯರ ಮೂರ್ತಿಗೆ ರುದ್ರಾಭಿಷೇಕ, ಹೂವಿನ ಅಲಂಕಾರ, ಮಹಾಪೂಜೆ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.