ADVERTISEMENT

ಕೂಡಿ ಬಾಳುವುದರಲ್ಲೇ ಜೀವಂತಿಕೆ ಅರಸುವ ಜನ

ಶರಣಬಸವೇಶ್ವರ ಜಾತ್ರೆ ನಿಮಿತ್ತ ತಳುವಗೇರಾದಲ್ಲಿ ಇಂದು ಬೆಳದಿಂಗಳ ಬೆಳಕಲ್ಲಿ ಮೇಳೈಸಲಿದೆ ಬುತ್ತಿಜಾತ್ರೆ

ನಾರಾಯಣರಾವ ಕುಲಕರ್ಣಿ
Published 4 ಮಾರ್ಚ್ 2026, 6:58 IST
Last Updated 4 ಮಾರ್ಚ್ 2026, 6:58 IST
ಕುಷ್ಟಗಿ ತಾಲ್ಲೂಕು ತಳುವಗೇರಾದಲ್ಲಿ 'ಬೆಳದಿಂಗಳ ಬುತ್ತಿಜಾತ್ರೆ'ಗೆ ಜನರು ಬುತ್ತಿ ಬುಟ್ಟಿಗಳೊಂದಿಗೆ ಮೆರವಣಿಗೆಯಲ್ಲಿ ತೆರಳುತ್ತಿರುವುದು (ಸಂಗ್ರಹ ಚಿತ್ರ)
ಕುಷ್ಟಗಿ ತಾಲ್ಲೂಕು ತಳುವಗೇರಾದಲ್ಲಿ 'ಬೆಳದಿಂಗಳ ಬುತ್ತಿಜಾತ್ರೆ'ಗೆ ಜನರು ಬುತ್ತಿ ಬುಟ್ಟಿಗಳೊಂದಿಗೆ ಮೆರವಣಿಗೆಯಲ್ಲಿ ತೆರಳುತ್ತಿರುವುದು (ಸಂಗ್ರಹ ಚಿತ್ರ)   

ಕುಷ್ಟಗಿ: ಅದು ಆರು ದಶಕಗಳ ಜಾತ್ರಾ ಮಹೋತ್ಸವದ ಸಂಭ್ರಮ, ಅಲ್ಲಿ ಇಡೀ ಊರಿನ ಸಹಸ್ರ ಸಂಖ್ಯೆ ಜನ ಒಂದೇ ಕಡೆ ಕುಳಿತು ಮನದ ಕಲುಷಿತ ದೂರ ತಳ್ಳಿ ಹರಟುವ, ಜನಜೀವನದ ಜೀವಂತಿಕೆಯ ಲಕ್ಷಣ ಎನ್ನುವುದಕ್ಕೆ ಪೀಠಿಕೆ ಎನ್ನುವಂತೆ ಜಾತಿ ಮತ ಭೇದ ಮರೆದು ಸಾಲು ಪಂಕ್ತಿಯಲ್ಲಿ ಸಹಭೋಜನದಲ್ಲಿ ತಂದದ್ದನ್ನೆಲ್ಲ ಹಂಚಿಕೊಂಡು ಭೋಜನ ಸವಿಯುತ್ತಾರೆ. ಈ ಮೂಲಕ ಸಾಮಾಜಿಕ ಸಾಮರಸ್ಯ ಸಂದೇಶ ಸಾರುತ್ತಾರೆ.

ಹೌದು, ಸಾಮಾಜಿಕ ಸಮನ್ವಯದ ಕೊಂಡಿ ಕಳಚುತ್ತಿದೆ ಎನ್ನುವುದಕ್ಕೆ ಅಪವಾದ ಎನ್ನುವಂತೆ ಇಂಥ ಅಪರೂಪದ ಮತ್ತು ಅಷ್ಟೇ ಮಾದರಿಯಾಗಿ ನಡೆದುಬರುತ್ತಿರುವ ಗ್ರಾಮೀಣ ಸಂಸ್ಕೃತಿ, ಪರಂಪರೆಯನ್ನು ಕಣ್ಣಾರೆ ಕಾಣಬೇಕೆಂದರೆ ತಾಲ್ಲೂಕಿನ ತಳುವಗೇರಾ ಗ್ರಾಮದಲ್ಲಿ ವರ್ಷಕ್ಕೊಮ್ಮೆ ಶರಣಬವೇಶ್ವರ ಜಾತ್ರೆ ಸಂದರ್ಭದಲ್ಲಿ ಹೋಳಿ ಹುಣ್ಣಿಮೆಯ ಮರುದಿನ (ಈ ವರ್ಷ ಮಾ.4) ವನಕಾಂಡದ ಹೆಸರಿನಲ್ಲಿ ನಡೆಯುವ 'ಬೆಳದಿಂಗಳ ಬುತ್ತಿ ಜಾತ್ರೆ'ಯಲ್ಲಿ ಪಾಲ್ಗೊಳ್ಳಬೇಕು. ಗ್ರಾಮದಲ್ಲಿ ಪೂರ್ವಜರು ಹಾಕಿಕೊಟ್ಟಿರುವ ಮಾರ್ಗದಲ್ಲಿಯೇ ಮುಂದುವರಿದಿರುವ ಇಂದಿನ ಹಿರಿಯರೂ ಆ ಪರಂಪರೆಯನ್ನು ಭವಿಷ್ಯದ ಪೀಳಿಗೆಯವರೆಗೂ ಕೊಂಡೊಯ್ಯುತ್ತಿದ್ದಾರೆ.

ನೀರೂರಿಸುವ ಖಾದ್ಯ: ಗ್ರಾಮೀಣ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಬೆಳದಿಂಗಳ ಬುತ್ತಿಜಾತ್ರೆ ಅದಕ್ಕೆ ಮತ್ತಷ್ಟೂ ಮೆರುಗು ತರುತ್ತದೆ.

ADVERTISEMENT

ಎಳ್ಳು ಹಚ್ಚಿದ ಸಜ್ಜೆ, ಬಿಳಿಜೋಳದ ಕಡಕ್‌ ರೊಟ್ಟಿ, ತುಂಬುಬದನೆಕಾಯಿ ಪಲ್ಯ, ಗುರೆಳ್ಳು, ಶೇಂಗಾ ಹಿಂಡಿ, ಎಳ್ಳು, ಶೇಂಗಾ ಹೋಳಿಗೆ, ಚಪಾತಿ, ಬಿಸಿಬಿಸಿ ಮಿರ್ಚಿ, ಸಿರಿಧಾನ್ಯದ ಖಾದ್ಯಗಳು ಅವುಗಳ ಮೇಲೆ ಒಂದಷ್ಟು ಕೆನೆ ಮೊಸರು ಇರುತ್ತದೆ.

‘ಖಾದ್ಯಗಳ ಸವಿ ಅದೆಲ್ಲ ಬರೀ ಮಾತಿನೊಳಗ ಬ್ಯಾಡ್ರಿ, ಇಂದು ಸಂಜೆ ನಮ್ಮೂರಿನ ಬೆಳದಿಂಗಳ ಬುತ್ತಿ ಜಾತ್ರೆಗೆ ಬರ್ರಿ. ಎಲ್ಲರೂ ಕೂಡಿ ಮನಸ್ಸಿನೊಳಗಿನ ತಳಮಳ ಮರೆಯೋಣ. ಮತ್ತೆ ಹೊಸ ಬದುಕಿಗೆ ಹೊರಳೋಣ, ಬರ್ತೀರಲ್ಲಾ?’ ಎಂದು ಆಹ್ವಾನಿಸುತ್ತಾರೆ ಉಮೇಶ ಮೇಳಿ, ಶರಣಗೌಡ ಪಾಟೀಲ ಇತರರು.

ಮಾನವ ಸಂಬಂಧಕ್ಕೆ ವೇದಿಕೆ ಬುತ್ತಿಜಾತ್ರೆಯಲ್ಲಿ ಮೇಲು ಕೀಳು ಇಲ್ಲ ಕೈಕೈ ಮಿಲಾಯಿಸಿ ಪೊಲೀಸ್‌ ಠಾಣೆ ಮೆಟ್ಟಿಲೇರಿದವರು ಮಾತು ಬಿಟ್ಟವರು ಭೂತಕಾಲದ ಕಹಿ ಘಟನೆಗಳನ್ನು ಮರೆತು ಮತ್ತೆ ಮನಬಿಚ್ಚಿ ಮಾತನಾಡಿ ಹೃದಯ ಹಗುರ ಮಾಡಿಕೊಳ್ಳುವುದಕ್ಕೂ ಬುತ್ತಿಜಾತ್ರೆ ಮುಖ್ಯವೇದಿಕೆ ಎಂಬ ಹಿರಿಮೆ ಜಾತ್ರೆಗಿದೆ ಎಂಬುದನ್ನು ನೆನಪಿಸಿಕೊಳ್ಳುತ್ತಾರೆ ಹಿರಿಯರಾದ ಶರಣಗೌಡ ಪಾಟೀಲ ಹನುಮಂತಪ್ಪ ಇತರರು. ಅಕ್ಕ ತಂಗಿ ಅಣ್ಣ ತಮ್ಮ ಚಿಕ್ಕಪ್ಪ ದೊಡ್ಡಪ್ಪ ಮಾವ ಚಿಗವ್ವ ದೊಡ್ಡವ್ವ ಹೀಗೆ ಅಕ್ಕರೆಯ ಮಾತುಗಳ ಮೂಲಕ ನೀಡುವ ಕೈತುತ್ತಿನಲ್ಲಿ ಭ್ರಾತೃತ್ವ ಸ್ಫುರಿಸುತ್ತದೆ. ಇಂಥ ವೈಭವದ ಸಂಭ್ರಮವನ್ನು ಅಷ್ಟೊತ್ತಿಗೆ ನೆತ್ತಿಯ ಮೇಲೆ ಬರುವ ಚಂದಿರನೂ ಅನುಭವಿಸುತ್ತಾನೆ ಎಂದೆ ಬಣ್ಣಿಸುತ್ತಾರೆ.

ಹೇಗಿರುತ್ತದೆ ಬುತ್ತಿಜಾತ್ರೆ ಸಂಭ್ರಮ? ಹೆಸರೇ ಸೂಚಿಸುವಂತೆ ವನಕಾಂಡ ವನಭೋಜನ ಎಂದೆಲ್ಲ ಕರೆಯಿಸಿಕೊಳ್ಳುವ ಬುತ್ತಿ ಜಾತ್ರೆ. ಹಿಂದೆ ಹೂರ ಹೊರವಲಯದ ವನ ಹಳ್ಳದ ತಟದ ಬಳಿ ನಡೆಯುತ್ತಿತ್ತು. ಕಾಲ ಬದಲಾದಂತೆ ಕಾಡು ಸಹ ಇಲ್ಲದಂತಾಗಿದೆ. ಹಾಗಾಗಿ ಈಗ ಊರ ಮುಂದಿನ ಶಾಲೆ ವಿಶಾಲ ಬಯಲಿನಲ್ಲಿ ನಡೆಯುತ್ತಿದ್ದರೂ ಬುತ್ತಿಜಾತ್ರೆ ತನ್ನ ಹಿಂದಿನ ವೈವಿಧ್ಯಮಯ ಮೆರುಗು ಕಳೆದುಕೊಂಡಿಲ್ಲ. ಬುತ್ತಿಜಾತ್ರೆ ಎಂದರೆ ಸಾಕು ಊರಿನ ಜನ ಮನದಲ್ಲಿ ಪುಳಕ. ಜಾತ್ರೆಗೆ ಬರದಿದ್ದರೂ ಸರಿ ಬಂಧು ಬಾಂಧವರು ಸುತ್ತಲಿನ ಗ್ರಾಮಗಳ ಜನರು ಬುತ್ತಿಜಾತ್ರೆಯಲ್ಲಿನ ಅನುಭವ ಪಡೆಯುವುದರಿಂದ ಮಾತ್ರ ವಂಚಿತರಾಗುವುದಿಲ್ಲ. ಬುತ್ತಿ ಸವಿಯುವ ಮೊದಲು ಧಾರ್ಮಿಕ ಗುರುಗಳಿಂದ ನಡೆಯುವ ಪ್ರವಚನದ ಮೂಲಕ ಜನರಲ್ಲಿ ಭೌತಿಕ ಬದುಕಿಗೆ ತಳಹದಿ ವಿಸ್ತರಿಸುವ ಕಾರ್ಯ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.