ADVERTISEMENT

ಕುಷ್ಟಗಿ | ನಾಡಿನ ಮನೆ, ಮನದ ಬಿಕ್ಕಟ್ಟು ತೊಲಗಿ ಒಗ್ಗಟ್ಟು ಮೂಡಲಿ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:44 IST
Last Updated 17 ಅಕ್ಟೋಬರ್ 2025, 6:44 IST
ಕುಷ್ಟಗಿ ತಾಲ್ಲೂಕು ಚಳಗೇರಾದಲ್ಲಿನ ಕಾರ್ಯಕ್ರಮದಲ್ಲಿ ರಂಭಾಪುರಿ ಪೀಠದ ಪ್ರಸನ್ನ ರೇಣಕು ವೀರಸೋಮೇಶ್ವ ಸ್ವಾಮೀಜಿ ಮಾತನಾಡಿದರು
ಕುಷ್ಟಗಿ ತಾಲ್ಲೂಕು ಚಳಗೇರಾದಲ್ಲಿನ ಕಾರ್ಯಕ್ರಮದಲ್ಲಿ ರಂಭಾಪುರಿ ಪೀಠದ ಪ್ರಸನ್ನ ರೇಣಕು ವೀರಸೋಮೇಶ್ವ ಸ್ವಾಮೀಜಿ ಮಾತನಾಡಿದರು   

ಕುಷ್ಟಗಿ: ‘ಧರ್ಮ ಮತ್ತು ಭಾವೈಕ್ಯತೆ ಭಾರತದ ಉಸಿರಾಗಿದೆ. ಇಲ್ಲಿಯ ಪರಂಪರೆ ಮತ್ತು ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದ್ದು, ಸರ್ವ ಜನಾಂಗದ ತೋಟ ಎಂದೆ ಬಿಂಬಿಸಿಕೊಳ್ಳುತ್ತಿರುವ ನಮ್ಮ ನಾಡಿನ ಮನೆ ಮನಗಳಲ್ಲಿ ಉದ್ಘವಿಸಿರುವ ಬಿಕ್ಕಟ್ಟು ತೊಲಗಿ ಒಗ್ಗಟ್ಟು ಮೂಡಬೇಕಿದೆ’ ಎಂದು ರಂಭಾಪುರ ಪೀಠದ ಪ್ರಸನ್ನರೇಣುಕ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ಗುರುವಾರ ತಾಲ್ಲೂಕಿನ ಚಳಗೇರಾ ಹಿರೇಮಠದ ಲಿಂಗೈಕ್ಯ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಯವರ 11ನೇ ವರ್ಷದ ಪುಣ್ಯಸ್ಮರಣೆ ಹಾಗೂ ನವೀಕೃತ ಹಿರೇಮಠದ ಉದ್ಘಾಟನೆ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ಧರ್ಮಸಭೆ ಸಾನ್ನಿಧ್ಯವಹಿಸಿ ಮಾತನಾಡಿದ, ಕಾವಿ, ಖಾಕಿ ಮತ್ತು ಖಾದಿ ಈ ಮೂರು ವರ್ಗಗಳು ನಿರ್ಮಲ ಮತ್ತು ಪ್ರಾಂಜಲ ಮನಸ್ಸಿನಿಂದ ಶ್ರಮಿಸಿದರೆ ಜನ ಕಲ್ಯಾಣ ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ನಾಡಿನ ಮಠಗಳು ಹಾಗೂ ದೇವಸ್ಥಾನಗಳು ನಮ್ಮ ಸಂಸ್ಕೃತಿಯ ಸಂವರ್ಧನಾ ಕೇಂದ್ರಗಳಾಗಿದ್ದು ಜನ ಮನವನ್ನು ತಿದ್ದುವ ಮತ್ತು ರಾಷ್ಟ್ರಾಭಿಮಾನ ಬೆಳೆಸುವ ತಾಣಗಳೂ ಆಗಿವೆ. ಇದನ್ನು ಅರಿತು ಜನರು ಸಾತ್ವಿಕ ಮತ್ತು ಅಷ್ಟೇ ಸಮೃದ್ಧವಾದ ನಾಡನ್ನು ಕಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಧ್ಯಾನ, ಜ್ಞಾನ ಮತ್ತು ಆಧ್ಯಾತ್ಮಿಕ ಚಿಂತನೆಗಳಿಂದ ವ್ಯಕ್ತಿಯ ಆತ್ಮಸ್ಥೈರ್ಯ ಮತ್ತು ಮನೋಬಲ ವೃದ್ಧಿಸುತ್ತದೆ. ಸದೃಢ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ದೊಡ್ಡದಾಗಿದ್ದು, ಆಲಸ್ಯ ಮತ್ತು ದುರ್ವ್ಯಸನಗಳಿಂದ ದೂರವಾಗಿ ಒಳ್ಳೆಯ ಸಮಾಜವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ಯುವ ಜನಾಂಗ ಗಟ್ಟಿ ಹೆಜ್ಜೆಯನ್ನಿಡಬೇಕು’ ಎಂದು ಕರೆ ನೀಡಿದರು.

ADVERTISEMENT

‘ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತು ಮನ ಮತ್ತು ಕೃತಿಯಿಂದ ಒಂದಾಗಿ ಬಾಳಿದವರು. ಸರಳ, ಸಜ್ಜನಿಕೆಯ ಸಾಕಾರ ಮೂರ್ತಿಗಳಾಗಿದ್ದ ಅವರು ನಿರ್ವಹಿಸಿದ ಪೂಜೆ, ತೋರಿದ ದಾರಿ ಮತ್ತು ಭಕ್ತರ ಮೇಲೆ ಇರಿಸಿದ್ದ ವಾತ್ಸಲ್ಯ ಅವರ ಜೀವನದ ಶ್ರೇಯಸ್ಸಿಗೆ ಕಾರಣವಾಯಿತು’ ಎಂದು ಬಣ್ಣಿಸಿದರು.

ಉಜ್ಜಯಿನಿ ಪೀಠದ ಸಿದ್ಧಲಿಂಗರಾಜ ಶಿವಾಚಾರ್ಯರು ಮಾತನಾಡಿ,‘ವಿಜ್ಞಾನ ಮನುಕುಲದ ಉನ್ನತಿಗೆ ಇರಬೇಕೇ ಹೊರತು ವಿನಾಶಕ್ಕಲ್ಲ. ವಿಜ್ಞಾನವನ್ನು ವಿನಾಶಕ್ಕಾಗಿ ಎಂದೂ ಬಳಸಬಾರದು. ಭೌತಿಕ ಜೀವನ ಸಮೃದ್ಧಗೊಂಡಂತೆ ಆಂತರಿಕ ಜೀವನವೂ ಪರಿಶುದ್ಧಗೊಳ್ಳಬೇಕು. ಭೌತಿಕ ಬದುಕಿಗೆ ಸಂಪತ್ತಷ್ಟೇ ಮುಖ್ಯವಲ್ಲ ಅದರೊಂದಿಗೆ ಧರ್ಮ ಪ್ರಜ್ಞೆ ಮತ್ತು ಗುರು ಕಾರುಣ್ಯವೂ ಮುಖ್ಯ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

ಎಲ್ಲ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದ ವೀರಸಂಗಮೇಶ್ವರ ಸ್ವಾಮೀಜಿ ಮಾತನಾಡಿದರು.

ಹೈದರಾಬಾದಿನ ಕುಮಾರಸ್ವಾಮಿ ಹಿರೇಮಠ ಅವರಿಗೆ ‘ಉದ್ಯಾನ ಶಿಲ್ಪಿ’ ಹಾಗೂ ಬೆಂಗಳೂರಿನ ಪಂಚಾಕ್ಷರಿ ಹಿರೇಮಠ ಅವರಿಗೆ ‘ವೀರಶೈವ ಯುವಸಿರಿ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಅದೇ ರೀತಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಮಠದ ಪರವಾಗಿ ಸನ್ಮಾನಿಸಲಾಯಿತು.

ಸಮಾಂಭದಲ್ಲಿ ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅಲ್ಲದೆ ನಾಡಿನ ವಿವಿಧ ಮಠಾಧೀಶರು, ಧಾರ್ಮಿಕ ಗುರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಧೋಳದ ಸುನಿತಾ ಡಾ.ಅಂದಾನಯ್ಯ ಶಾಡಲಗೇರಿ ಹಿರೇಮಠ ಅವರು ರೇಣುಕಾಚಾರ್ಯರ ಮಂಗಲ ಮೂರ್ತಿಗೆ ಸ್ವರ್ಣ ಕಿರೀಟ ಧಾರಣೆ ಸೇವೆ ನೆರವೇರಿಸಿದರು.

ಎರಡು ಜೋಡಿ ವಧುವರರು ಸಾಮೂಹಿಕ ಮದುವೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಮಾಜಿ ಶಾಸಕ ಕೆ.ಶರಣಪ್ಪ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಬಿ.ಎಸ್‌.ಪಾಟೀಲ ಸೇರಿದಂತೆ ಅನೇಕ ಪ್ರಮುಖರು, ವಿವಿಧ ಕ್ಷೇತ್ರಗಳ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬೆಳಿಗ್ಗೆ ಲಿಂಗೈಕ್ಯ ವಿರೂಪಾಕ್ಷಲಿಂಗ ಶ್ರೀಗಳ ಭಾವಚಿತ್ರದ ಪಲ್ಲಕ್ಕಿ ಉತ್ಸವ ನೆರವೇರಿತು. ಕುಂಭಹೊತ್ತ ಮಹಿಳೆಯರು, ವಿವಿಧ ಕಲಾತಂಡಗಳು ಮೆರವಣಿಗೆಗೆ ಕಳೆ ತಂದರು ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾವಿ ಖಾದಿ ಮತ್ತು ಖಾಕಿ ಈ ಮೂವರೂ ನಿರ್ಮಲ ಮನದಿಂದ ಶ್ರಮಿಸಿದರೆ ಜನರ ಕಲ್ಯಾಣ ತಾನಾಗಿಯೇ ಆಗುತ್ತದೆ
ಪ್ರಸನ್ನರೇಣುಕ ವೀರಸೋಮೇಶ್ವರ ಸ್ವಾಮೀಜಿ, ರಂಭಾಪುರಿ ಪೀಠ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.