ADVERTISEMENT

ಕಾರಟಗಿ: ತ್ಯಾಜ್ಯ ವಿಲೇವಾರಿ ಘಟಕ ಆರಂಭ ಅಗತ್ಯ

ಬೇಕಿದೆ ಘಾಟು ಮುಕ್ತ, ಆರೋಗ್ಯಯುಕ್ತ ಪರಿಸರ: ಪುರಸಭೆ ಆಡಳಿತಕ್ಕೆ ದಶಕದಿಂದ ಜನರ ಆಗ್ರಹ

ಕೆ.ಮಲ್ಲಿಕಾರ್ಜುನ
Published 11 ಆಗಸ್ಟ್ 2025, 4:48 IST
Last Updated 11 ಆಗಸ್ಟ್ 2025, 4:48 IST
ಕಾರಟಗಿಯ ಕೆರೆಯ ಜಾಗೆಯಲ್ಲಿ ಸಂಗ್ರಹಿಸಿದ ತ್ಯಾಜ್ಯಕ್ಕೆ ಹತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು 
ಕಾರಟಗಿಯ ಕೆರೆಯ ಜಾಗೆಯಲ್ಲಿ ಸಂಗ್ರಹಿಸಿದ ತ್ಯಾಜ್ಯಕ್ಕೆ ಹತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು    

ಕಾರಟಗಿ: ಪಟ್ಟಣ ಹೆಸರಿಗಷ್ಟೇ ತಾಲ್ಲೂಕು ಕೇಂದ್ರ ಎನ್ನುವಂತಾಗಿದೆ. ಅನೇಕ ಕಾರ್ಯಗಳಿಗೆ ಇನ್ನೂ ಗಂಗಾವತಿಗೆ ಅಲೆದಾಡುವುದು ತಪ್ಪುತ್ತಿಲ್ಲ. ಅನೇಕ ಇಲ್ಲಗಳ ನಡುವೆ ತ್ಯಾಜ್ಯ ವಿಲೇವಾರಿ ಘಟಕ ಇರದಿರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಪರ್ಯಾಯ ವ್ಯವಸ್ಥೆ ದಶಕದಿಂದಲೂ ಸಾಧ್ಯವಾಗಿಲ್ಲ.

ಪಟ್ಟಣದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಸ್ಥಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ನಿವಾಸದಿಂದ ಕೇವಲ ನೂರು ಅಡಿ ದೂರದಲ್ಲಿದೆ. ತ್ಯಾಜ್ಯ ವಿಲೇವಾರಿಗೆ ಭೂಮಿ ದೊರೆತಿದೆಯಾದರೂ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿದ್ದ ತಾತ್ಕಾಲಿಕ ತಡೆ ಬಿದ್ದಿದೆ.

ಅಭಿವೃದ್ಧಿ ನೆಪದಲ್ಲಿ 36 ಎಕರೆ ಕೆರೆ ಪ್ರದೇಶದ ಬಹುಭಾಗವು ಕಟ್ಟಡ, ಕಚೇರಿ, ಕೆರೆ, ಅಕ್ರಮ ಚಟುವಟಿಕೆಯ ತಾಣವಾಗಿರುವ ನಿರುಪಯುಕ್ತ ಬಸ್‌ ನಿಲ್ದಾಣ ನಿರ್ಮಾಣವಾಗಿವೆ. ಇದೇ ಜಾಗೆಯಲ್ಲಿ ಪಟ್ಟಣದ ಟನ್‌ಗಟ್ಟಲೇ ತ್ಯಾಜ್ಯ ಹಾಕಲಾಗುತ್ತಿದೆ.

ADVERTISEMENT

ಕೆರೆ ಪ್ರದೇಶದಲ್ಲಿ ಹಿಂದಿನಿಂದಲೂ ಕಸ ಸಂಗ್ರಹಿಸಲಾಗುತ್ತಿದೆ. ತ್ಯಾಜ್ಯಕ್ಕೆ ಬೆಂಕಿ ಹೊತ್ತಿಕೊಳ್ಳುವುದು, ಹೊಗೆ, ಘಾಟು, ಹರಡುತ್ತಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ.

ಭೂಮಿಯ ಕೊರತೆ, ಏನೂ ಮಾಡಲು ಆಗದ ಅಸಹಾಯದ ಸ್ಥಿತಿಯಲ್ಲಿ ಸ್ಥಳೀಯ ಆಡಳಿತ ಇದ್ದರೆ, ಎಲ್ಲ ತೊಂದರೆಗಳನ್ನು ಸಹಿಸಿಕೊಂಡು ಜನ ದಿನದೂಡುತ್ತಿದ್ದಾರೆ. 

ಕೆರೆ ಜಾಗೆಯಲ್ಲಿ ತ್ಯಾಜ್ಯ ಹಾಕುವ  ಮುನ್ನ ಈಗ ಪುಶ್ಚೇತನಗೊಳ್ಳುತ್ತಿರುವ 7ನೇ ವಾರ್ಡ್‌ನ ಐತಿಹಾಸಿಕ ಹಿನ್ನೆಲೆಯ ಪುಷ್ಕರಣಿ (ಸುಂಕ್ಲೀರಪ್ಪ ಬಾವಿ)ಯಲ್ಲೂ ತ್ಯಾಜ್ಯ ಹಾಕಲಾಗುತ್ತಿತ್ತು. ಇದರಿಂದ ಪುಷ್ಕರಣಿ ಸಂಪೂರ್ಣ ಮುಚ್ಚಿ ನೆಲ ಮಟ್ಟಕ್ಕೆ ಬಂದಿತ್ತು.

ಕೆರೆಯ ಜಾಗೆಯಲ್ಲಿ ಗುಡ್ಡದ ಆಕಾರದಲ್ಲಿ ಕಸ ಸಂಗ್ರಹವಾಗುತ್ತಿದ್ದರೆ ಕಿಡಿಗೇಡಿಗಳು ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದು ನಿರಂತರವಾಗಿ ನಡೆಯುತ್ತಿದೆ. ಇದರಿಂದ 2–3 ದಿನ ಘಾಟು, ಹೊಗೆ ಅರ್ಧ ಪಟ್ಟಣದಲ್ಲಿ ಹರಡಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. 

ಎದುರುಗಡೆಯ ಕರ್ನಾಟಕ ಪಬ್ಲಿಕ್‌ ಶಾಲಾ ಆವರಣದಲ್ಲಿ ನಿತ್ಯ ನೂರಾರು ಜನ ವಾಯುವಿಹಾರಕ್ಕೆ, ಯುವಕರು ಆಟ ಆಡಲು ‌ಬರುತ್ತಾರೆ. ಹೊಗೆ ಸಮಸ್ಯೆಯಿಂದ ಮುಕ್ತಿ ನೀಡಲು ಮನವಿ ಮಾಡಿದರೂ ಯಾವುದೇ ಪ್ದಯೋಜನ ಆಗಿಲ್ಲ. ತ್ಯಾಜ್ಯಕ್ಕೆ ಬೆಂಕಿ ಹತ್ತಿದಾಗ ಸುತ್ತಲೂ ದಟ್ಟ ಹೊಗೆ ಹರಡಿತ್ತು. ಅನೇಕ ಕ್ರೀಡಾಪಟುಗಳು ಪುರಸಭೆಯ ಹಿಂದಿನ ಮುಖ್ಯಾಧಿಕಾರಿ ನಿವಾಸಕ್ಕೆ ತೆರಳಿ ಅವರನ್ನು ಕರೆತಂದು ಸಮಸ್ಯೆಯ ಅರಿವು ಮಾಡಿಸಿದ್ದರು. 

ಯುವಕರು ತ್ಯಾಜ್ಯ ತರುವ ವಾಹನಗಳನ್ನು ನಿಲ್ಲಿಸಿ, ತ್ಯಾಜ್ಯ ಹಾಕದಂತೆ ತಡೆದಿದ್ದರು.ವಾಹನಗಳು ತ್ಯಾಜ್ಯ ಹಾಕುವ ಸ್ಥಳಕ್ಕೆ ಬಾರದಂತೆ ಅಡ್ಡಲಾಗಿ ತಗ್ಗು ತೋಡಿಸಲಾಗಿತ್ತು. ಈಗ ಕೆರೆಯ ಇನ್ನೊಂದು ಭಾಗದಲ್ಲಿ ತ್ಯಾಜ್ಯ ಹಾಕುತ್ತಿದೆ. ತ್ಯಾಜ್ಯಕ್ಕೆ ಬೆಂಕಿ ಹತ್ತಿಕೊಳ್ಳುವುದು, ಅಗ್ನಿಶಾಮಕ ವಾಹನಗಳು ಬಂದು ನಂದಿಸುವ ಪ್ರಕ್ರಿಯೆ ಪುನರಾವರ್ತನೆಯಾಗುತ್ತಿದೆ.

ತ್ಯಾಜ್ಯ ವಿಲೇವಾರಿ ಘಟಕ ಆರಂಭಿಸುವ ಯತ್ನ ನಮ್ಮ ಪುರಸಭೆ ಸಹಿತ ಸಚಿವ ಶಿವರಾಜ ತಂಗಡಗಿಯವರೂ ಮಾಡುತ್ತಿದ್ದಾರೆ. ಶೀಘ್ರವೇ ಸಮಸ್ಯೆಗೆ ಪರಿಹಾರ ದೊರೆಯಲಿದೆ
ರೇಖಾ ಆನೆಹೊಸೂರು ಅಧ್ಯಕ್ಷೆ ಪುರಸಭೆ 
ಅತ್ಯಾಧುನಿಕ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವುದಕ್ಕೆ ಪುರಸಭೆಯವರಲ್ಲದೇ ಸಚಿವರೂ ಕೈಜೋಡಿಸಲಿ. ಪಟ್ಟಣದ ಜನ  ಶುದ್ಧ ವಾತಾವರಣದಲ್ಲಿ ಇರುವಂತೆ ಮಾಡಲು ಸಂಬಂಧಿಸಿದವರು ತಮ್ಮ ಇಚ್ಚಾಶಕ್ತಿ ಮೆರೆಯಲಿ
ಬಸವರಾಜ ಪಗಡದಿನ್ನಿ ವರ್ತಕ 

ಶೀಘ್ರ ಘನತ್ಯಾಜ್ಯ ವಿಲೇವಾರಿ ಘಟಕ?

ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಯರಡೋಣ ಗ್ರಾಮದ ಸ.ನಂ 219ರ 6 ಎಕರೆ ಭೂಮಿ ಸರ್ಕಾರಕ್ಕೆ ಸೇರಿದೆ ಎಂದು ತಿಳಿದು ಬಂದಿದೆ. ಆ ಜಾಗದಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಮಾಡಬೇಕು ಎನ್ನುವ ಯೋಜನೆಗೆ ಸರ್ಕಾರದ ಮಟ್ಟದಲ್ಲಿ ವಾಣಿಜ್ಯ ಬಳಕೆಯ ಆಧಾರದ ಮೇಲೆ ಹಣ ತುಂಬಬೇಕು ಎಂಬ ವಿಷಯದಿಂದ ನೆನೆಗುದಿಗೆ ಬಿದ್ದಿತ್ತು. ಈಗ ಪರಿಹಾರದ ಹಂತಕ್ಕೆ ಬಂದಿದೆ. ಶೀಘ್ರದಲ್ಲೇ ಹೊಗೆ ಘಾಟು ಮುಕ್ತ ಪಟ್ಟಣವನ್ನಾಗಿಸಲು ಪುರಸಭೆ ಪಣ ತೊಟ್ಟಿದೆ. ಈ ಕಾರ್ಯ ಶೀಘ್ರವೇ ಆಗಲಿ ಎಂಬುದು ಜನರ ಆಶಯವಾಗಿದೆ. ಭೂಮಿ ಸಿಕ್ಕಿತು ಎನ್ನುವ ಹಂತದಲ್ಲಿ ತಾತ್ಕಾಲಿಕ ಸಾಗುವಳಿ ಚೀಟಿ ಪಡೆದಿದ್ದ ಫಲಾನುಭವಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.  ಭೂಮಿಯ ಇತಿಹಾಸ ಸಮಗ್ರ ದಾಖಲೆ ಸಂಗ್ರಹಿಸುವಲ್ಲಿ ಈಗಿನ ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೀಕಾರ್‌ ಶ್ರಮಿಸುತ್ತಿದ್ದಾರೆ. ಸಹಾಯಕ ಆಯುಕ್ತರು ತಹಶೀಲ್ದಾರ್‌ ಹೈಕೋರ್ಟ್‌ಗೆ ದಾಖಲೆಗಳೊಂದಿಗೆ ಹಾಜರಾಗಬೇಕಿದೆ. ದಾಖಲೆ ನಮ್ಮ ಪರವಾಗಿಯೇ ಇದ್ದು ವಿಷಯ ಶೀಘ್ರವೇ ಇತ್ಯರ್ಥವಾಗಲಿದೆ ಎಂಬ ಆಶಾಭಾವನೆಯನ್ನು ಮುಖ್ಯಾಧಿಕಾರಿ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.